More

    ಏಪ್ರಿಲ್ 9ಕ್ಕೆ ‘ರಾಬರ್ಟ್’ ಬಿಡುಗಡೆ ಇಲ್ಲ; ಫುಲ್ ಖುಷಿಯಾದ ಡಿಬಾಸ್ ಅಭಿಮಾನಿಗಳು

    ಅಂತೂ ದರ್ಶನ್ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಅದಕ್ಕೆ ಕಾರಣ `ರಾಬರ್ಟ್’ ಬಿಡುಗಡೆ ಮುಂದಕ್ಕೆ ಹೋಗಿರುವುದು.

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, `ರಾಬರ್ಟ್’ ಏಪ್ರಿಲ್ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಮಹಾಮಾರಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕೆ ಕೇಂದ್ರ ಸರ್ಕಾರವು ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿರುವುದರಿಂದ, ಚಿತ್ರದ ಬಿಡುಗಡೆ ಸಹ ಮುಂದಕ್ಕೆ ಹೋಗಿದೆ. ಅದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ.

    ತಮ್ಮ ಮೆಚ್ಚಿನ ನಟನ ಬಹುನಿರೀಕ್ಷೆಯ ಚಿತ್ರವೊಂದರ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳು ಬೇಸರ ಪಡಬೇಕು, ಅದುಬಿಟ್ಟು ಯಾಕೆ ಖುಷಿಯಾಗಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಚಿತ್ರವು ಏಪ್ರಿಲ್ 9ಕ್ಕೆ ಬಿಡುಗಡೆಯಾಗುವದಕ್ಕೆ ದರ್ಶನ್ ಅವರ ಬಹಳಷ್ಟು ಅಭಿಮಾನಿಗಳಿಗೆ ಸಹಮತವಿರಲಿಲ್ಲ. ಅದಕ್ಕೆ ಕಾರಣವವೇನೆಂದರೆ, ಚಿತ್ರ ನೋಡುವುದಕ್ಕೆ ದರ್ಶನ್ ಅವರ ಅಭಿಮಾನಿಗಳಲ್ಲಿ ತವಕವಿದ್ದರೂ, ದೇಶವ್ಯಾಪಿ ಕರೊನಾ ಭೀತಿ ಇರುವುದರಿಂದ ಇಂತಹ ಸಮಯದಲ್ಲಿ ಚಿತ್ರ ಬಿಡುಗಡೆಯಾಗುವುದು ಇಷ್ಟವರಿಲಿಲ್ಲ. ಅದೇ ಕಾರಣಕ್ಕೆ ಚಿತ್ರವನ್ನು ಮುಂದೂಡುವಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಅಭಿಮಾನಿಗಳು ಚಿತ್ರತಂಡಕ್ಕೆ ಮನವಿ ಸಲ್ಲಿಸಿದ್ದರು. ಈಗ ದೇಶವ್ಯಾಪಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಸಹಜವಾಗಿಯೇ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಸದ್ಯದ ಮಟ್ಟಿಗೆ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಣೆಯಾಗಿದ್ದರುವುದರಿಂದ, ಏಪ್ರಿಲ್ 9ಕ್ಕೆ ಚಿತ್ರ ಬಿಡುಗಡೆಯಾಗುವುದಕ್ಕೆ ಸಾಧ್ಯವಿಲ್ಲ. ಹೋಗಲಿ ಲಾಕ್‍ಡೌನ್ ಮುಗಿದ ತಕ್ಷಣವೇ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳುವ ಹಾಗಿಲ್ಲ. ಅದಕ್ಕೆ ಕಾರಣಗಳೂ ಇವೆ.

    ಪ್ರಮುಖವಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಚಿತ್ರ ಸೆನ್ಸಾರ್ ಆಗಬೇಕಿದೆ. ಆದರೆ, ಕರೊನಾ ಭೀತಿಯಿಂದಾಗಿ ಸೆನ್ಸಾರ್ ಮಂಡಳಿ ಸಹ ಕಳೆದ ನಾಲ್ಕು ದಿನಗಳಿಂದ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದೆ. ಹಾಗಾಗಿ ಒಂದು ಪಕ್ಷ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದರೂ, ಸೆನ್ಸಾರ್ ಆಗುವುದು ಕಷ್ಟವಾಗುತಿತ್ತು. ಇದೀಗ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ, ಅದು ಮುಗಿದ ಮೇಲೆ, ಮೊದಲು ಚಿತ್ರ ಸೆನ್ಸಾರ್ ಆಗಬೇಕಿದೆ. ಆ ನಂತರವಷ್ಟೇ ಚಿತ್ರ ಬಿಡುಗಡೆ. ಇದೆಲ್ಲಾ ಗಮನಿಸಿದರೆ, ಬಹುಶಃ ಏಪ್ರಿಲ್ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts