ಬೆಂಗಳೂರು: ‘ನೋಡಿದೋರೆಲ್ಲ ನಮ್ಮನೆ ಹುಡುಗಿ ಎನ್ನುತ್ತಿದ್ದಾರೆ. ಈ ಬಿರುದಿಗೆ ಕಾರಣ ದರ್ಶನ್ ಸಾರ್…’
ಹಾಗಂತ ಖುಷಿಯಿಂದ ಹೇಳಿಕೊಳ್ಳುತ್ತಾರೆ ಆಶಾ ಭಟ್. ‘ರಾಬರ್ಟ್’ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ನೋಡಿ ಆಶಾ ಖುಷಿಯಾಗಿದ್ದಾರೆ. ಮೊದಲ ಚಿತ್ರದಲ್ಲೇ ಹೀಗೆಲ್ಲ ಆಗುತ್ತಿರುವುದರಿಂದ ಅವರು ಥ್ರಿಲ್ ಆಗಿದ್ದಾರೆ.
‘ನನ್ನ ಮೊದಲ ಸಿನಿಮಾದಲ್ಲೇ ದೊಡ್ಡ ಸ್ಟಾರ್ ಜತೆ ನಟಿಸಬಹುದು, ದೊಡ್ಡ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎಂದು ಯಾವತ್ತೂ ಯೋಚಿಸಿರಲಿಲ್ಲ. ತರುಣ್ ಸುದೀರ್ ಅವರು ಅಂಥದ್ದೊಂದು ಅವಕಾಶ ಕೊಡುವುದರ ಜತೆಗೆ, ಅಮೃತಾ ಎಂಬ ಪಾತ್ರವನ್ನು ಚೆನ್ನಾಗಿ ಎಕ್ಸ್ಪ್ಲೋರ್ ಮಾಡುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಇನ್ನು, ದರ್ಶನ್ ಅವರು ಸಂದರ್ಶನವೊಂದರಲ್ಲಿ ಪಕ್ಕದ್ಮನೆ ಹುಡುಗಿ ಅಂತ ಅನಿಸೋದೇ ಇಲ್ಲ, ನಮ್ಮನೆ ಹುಡುಗಿ ಅಂತ ಅನಿಸುತ್ತದೆ ಎಂದು ಹೇಳಿದ್ದರು. ಈಗ ಎಲ್ಲರೂ ನಮ್ಮನೆ ಹುಡುಗಿ ಎನ್ನುತ್ತಿದ್ದಾರೆ. ಇದು ಅವರು ನನಗೆ ಕೊಟ್ಟ ಬಿರುದು. ನಿರ್ವಪಕರು ರಿಸ್ಕ್ ತೆಗೆದುಕೊಂಡು, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಅವರಿಗೂ ಚಿರಋಣಿ’ ಎನ್ನುತ್ತಾರೆ ಆಶಾ.
ಶಿವಮೊಗ್ಗದಲ್ಲಿ ಆಶಾ: ಈ ಮಧ್ಯೆ, ಭದ್ರಾವತಿ ಬೆಡಗಿ ಇತ್ತೀಚೆಗೆ ಶಿವಮೊಗ್ಗದ ಭಾರತ್ ಸಿನಿಮಾಸ್ನಲ್ಲಿ ಕೆಲ ಸಮಯ ಪ್ರೇಕ್ಷಕರೊಂದಿಗೆ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಆಶಾ ತಾಯಿ ಶ್ಯಾಮಲಾ ಭಟ್ ಈ ಸಂದರ್ಭದಲ್ಲಿ ಮಗಳೊಂದಿಗಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಆಶಾ, ‘ನನ್ನ ಹೆಸರಲ್ಲೇ ಆಶಾ ಇದೆ. ಇನ್ನು ನಿರಾಸೆಯ ಮಾತೆಲ್ಲಿ? ಸದ್ಯದಲ್ಲೇ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುವುದಾಗಿ’ ಹೇಳಿದ್ದಾರೆ.