More

    ಹಾದಿಬೀದಿಲಿ ಹಾರುಬೂದಿ ವಾಹನಗಳ ದರ್ಬಾರ್!

    ಡಿ.ಬಿ.ಕುಪ್ಪಸ್ತ
    ಗೊಳಸಂಗಿ:
    ಐದು ರಾಜ್ಯಕ್ಕೆ ವಿದ್ಯುತ್ ನೀಡುವ ಖ್ಯಾತಿ ಹೊಂದಿದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಒಂದಿಲ್ಲೊಂದು ಕಾರಣದಿಂದ ಸುತ್ತಲಿನ ಗ್ರಾಮಗಳ ಜನತೆಗೆ ಕಿರಿಕಿರಿಯಾಗುತ್ತಲೇ ಇದೆ.

    ಸದ್ಯ ಹಾರುಬೂದಿ ಹೊತ್ತು ನಿಲ್ಲುತ್ತಿರುವ ನೂರಾರು ವಾಹನಗಳು ಸುಗಮ ಸಂಚಾರಕ್ಕೆ ತೊಡರುಗಾಲಾಗುವ ಜತೆಗೆ ಕಂಡಕಂಡಲ್ಲಿ ಬೂದಿ ಚೆಲ್ಲುತ್ತ ರೋಗಗಳಿಗೂ ಆಹ್ವಾನ ನೀಡುತ್ತಿವೆ.

    ಎನ್‌ಟಿಪಿಸಿಯಿಂದ ಹೊರಬರುವ ಹಾರುಬೂದಿ ಸಂಗ್ರಹಿಸಲು ಅಲ್ಲಿಂದ 2 ಕಿ.ಮೀ.ದೂರ ಅಂದರೆ ಮಸೂತಿ ಗ್ರಾಮದ ಪಕ್ಕ ಹಾರುಬೂದಿ ಕೆರೆ ನಿರ್ಮಿಸಲಾಗಿದೆ. ಯಂತ್ರಗಳ ಸಹಾಯದಿಂದಲೇ ನಿತ್ಯ ಬೂದಿ ಈ ಕೆರೆಗೆ ಬಂದು ಬೀಳುತ್ತದೆ. ಸಿಮೆಂಟ್ ತಯಾರಿಕೆಗೆ ಬಳಸುವ ಈ ಬೂದಿಯನ್ನು ತುಂಬಿಕೊಂಡು ಹೋಗುವ ಭಾರೀ ವಾಹನಗಳು ಎನ್‌ಟಿಪಿಸಿ ಗೇಟ್ ಬಳಿ ಇರುವ ವೇ ಬ್ರಿಡ್ಜ್‌ಗೆ ಬಂದು ತೂಕ ಮಾಡಿಸಿಕೊಂಡು ಅಲ್ಲಿಂದ ಹೊರಡುತ್ತವೆ. ಕೆರೆಯಿಂದ ಬೂದಿ ಹೊತ್ತೊಯ್ಯುವ ವಾಹನಗಳು ಸೂಕ್ತವಾಗಿ ಪ್ಯಾಕ್ ಮಾಡಿಕೊಳ್ಳದೆ ಸಂಚರಿಸುವುದರಿಂದ ರಸ್ತೆಯಲ್ಲಿ ವೇಗ ತಡೆಗಳು, ತಗ್ಗು ದಿನ್ನೆಗಳು ಬಂದಾಗ ಬೂದಿ ಚೆಲ್ಲುತ್ತ ಮುಂದೆ ಸಾಗುತ್ತವೆ. ಈ ಬೂದಿಯಿಂದ ಹೊರಡುವ ಧೂಳಿನ ಕಣಗಳು ಶ್ವಾಸಕೋಶದ ತೊಂದರೆಗಳಿಗೆ ಕಾರಣವಾಗುತ್ತವೆ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಇದರೊಂದಿಗೆ ಭಾರೀ ವಾಹನಗಳ ನಿರಂತರ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

    ನಿತ್ಯ ಅಂದಾಜು ಮುನ್ನೂರು ಗಾಡಿಗಳು ಬೂದಿಯನ್ನು ತುಂಬಿಕೊಂಡು ಹೋಗುತ್ತವೆ. ಇದರಲ್ಲಿ ನೂರಾರು ವಾಹನಗಳು 18ನೇ ಕ್ರಾಸ್ (ಇಲ್ಲಿಂದ ಕೋಲಾರ, ಆಲಮಟ್ಟಿ, ಮುಳವಾಡ ಹಾಗೂ ಬಸವನಬಾಗೇವಾಡಿ 18 ಕಿ.ಮೀ.ದೂರದಲ್ಲಿರುವುದರಿಂದ ಈ ವೃತ್ತವನ್ನು 18ನೇ ಕ್ರಾಸ್ ಎನ್ನಯತ್ತಾರೆ) ವೃತ್ತದ ಬಳಿ ಹಾಗೂ ಬಸವನಬಾಗೇವಾಡಿಗೆ ಹೋಗುವ ಕೂಡಗಿ ಕ್ರಾಸ್‌ವರೆಗೂ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುತ್ತವೆ. ಇದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ವಿಪರ್ಯಾಸವೆಂದರೆ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ ಇದೇ ರಸ್ತೆಯಲ್ಲಿದೆ. ಪೊಲೀಸರು ಆಗಾಗ ಸಣ್ಣಪುಟ್ಟ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುತ್ತಾರೆ ಎಂಬುದು ಗ್ರಾಮಸ್ಥರ ಆರೋಪ. ಎನ್‌ಟಿಪಿಸಿ ಅಧಿಕಾರಿಗಳು ಈ ಸಮಸ್ಯೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸುತ್ತಲಿನ ಜನ ಆಗ್ರಹಿಸಿದ್ದಾರೆ.

    ಗ್ರಾಮಸ್ಥರ ಅಪಸ್ವರ
    ಸ್ಥಾವರ ಬೇಡ ಎಂಬ ಪರಿಸರವಾದಿಗಳ ಅಪಸ್ವರದ ನಡುವೆ 2012ರಲ್ಲಿ ಆರಂಭವಾದ ಸ್ಥಾವರ, ಹೆಚ್ಚಿನ ಪರಿಹಾರ ನೀಡಬೇಕು ಎಂದು ಭೂಮಿ ತ್ಯಾಗ ಮಾಡಿದ ರೈತರ ಆಕ್ರೋಶಕ್ಕೆ ಗುರಿಯಾಯಿತು. ಈ ಬೇಡಿಕೆ ಕಾವು ತಣ್ಣಗಾಗುವ ಮುನ್ನವೇ ಸವುಳು-ಜವುಳು ಸಮಸ್ಯೆ ಎದುರಾಯಿತು. ಆಗಾಗ ಹಾರುಬೂದಿಯಿಂದ ಬೆಳೆ ಹಾನಿಯಾಗುತ್ತಿವೆ ಎಂಬ ಆತಂಕದ ನಡುವೆ ಸದ್ಯ ಕಂಡಕಂಡಲ್ಲಿ ಬೂದಿ ಚೆಲ್ಲುತ್ತಿದ್ದು, ಶ್ವಾಸಕೋಶಗಳ ತೊಂದರೆಗೆ ಕಾರಣವಾಗಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.

    ಹಾರುಬೂದಿ ಹೊತ್ತೊಯ್ಯುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಕೆಲವು ವಾಹನಗಳು ರಸ್ತೆ ಮೇಲೆ ನಿಲ್ಲುತ್ತಿವೆ ಎಂಬ ದೂರು ಕೇಳಿ ಬಂದಿವೆ. ಕೂಡಲೇ ಈ ವಾಹನಗಳನ್ನು ನಿಗದಿತ ಸ್ಥಳದಲ್ಲೇ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಬೂದಿಯೊಂದಿಗೆ ನೀರು ಮಿಶ್ರಣ ಮಾಡಿಕೊಂಡು ಅದು ದಾರಿಯಲ್ಲಿ ಚೆಲ್ಲದಂತೆ ನಿಗಾ ವಹಿಸಲಾಗುವುದು.
    ಎಂ.ಎಚ್.ಮಂಜುನಾಥ, ಡಿಜಿಎಂ, ಆರ್ ಆ್ಯಂಡ್ ಆರ್ ಯೋಜನೆ, ಕೂಡಗಿ ಎನ್‌ಟಿಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts