More

    ಮತ್ತೆ ಮಾಂಗಲ್ಯಭೂಷಿತಳಾದ ಗೊಳಸಂಗಿ ಬನಶಂಕರಿ

    ಗೊಳಸಂಗಿ: ಆಗುಂತಕನೊಬ್ಬನ ಕುಕೃತ್ಯದಿಂದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದ ಸ್ಥಳೀಯ ಬನಶಂಕರಿ ದೇವಿಗೆ ಭಕ್ತೆಯೊಬ್ಬರು ಮಾಂಗಲ್ಯ ಸೇರಿದಂತೆ ಎಲ್ಲ ಆಭರಣಗಳನ್ನು ಗುರುವಾರ ಸಮರ್ಪಿಸಿ ಕೃತಾರ್ಥಭಾವ ಮೆರೆದರು.

    ಗ್ರಾಮದ ಇಂದಿರಾ ನಗರದ ನಿವಾಸಿ, ಮರಾಠಾ ಸಮುದಾಯದ ಸುಶೀಲಾಬಾಯಿ ಕುಬೇರ ಯಾದವ (55) ಚಿನ್ನಾಭರಣಗಳನ್ನು ದೇವಿಗೆ ಸಮರ್ಪಿಸಿದ ಮಹಿಳೆ. ಸೋಮವಾರ ಕಳ್ಳತನದ ಘಟನೆ ನಡೆಯುವ ಮುನ್ನವೇ ಯಲ್ಲಮ್ಮತಾಯಿಯ ಪರಮಭಕ್ತೆಯೂ ಆಗಿರುವ ಸುಶೀಲಾಬಾಯಿ ಅವರಿಗೆ ಭಾನುವಾರ ಬೆಳಗಿನ ಜಾವ ದುಸ್ವಪ್ನವೊಂದು ಗೋಚರಿಸಿತ್ತು.

    ಬೆಳಗಾಗುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯ ಕೆಲವು ಹಿರಿಯರ ಬಳಿಯಲ್ಲೂ ದುಸ್ವಪ್ನದ ಕುರಿತು ಚರ್ಚಿಸಿ ಯಾರಿಗೆ ಏನಾಗುವುದೋ ಎಂಬ ಆತಂಕ ಇವರಲ್ಲಿ ಮನೆ ಮಾಡಿತ್ತಂತೆ. ಅಂದುಕೊಂಡಂತೆ ಸೋಮವಾರ ಸಂಜೆ ಬನಶಂಕರಿ ದೇವಿಯ ಚಿನ್ನಾಭರಣಗಳ ಕಳ್ಳತನವಾಗಿದೆ.

    ಮಂಗಳವಾರ ಬೆಳಗ್ಗೆ ಸುಶೀಲಾಬಾಯಿ ದೇವಸ್ಥಾನಕ್ಕೆ ಬಂದು ಅಮ್ಮನ ಪುತ್ಥಳಿಯನ್ನು ನೋಡಿದಾಗ ದುಃಖ ಉಮ್ಮಳಿಸಿ ಬಂದಿತಂತೆ. ಆ ಕ್ಷಣವೇ ‘ಇಂದು ನಮ್ಮ ಹೊಲದಲ್ಲಿ ತೋಡುವ ಕೊಳವೆಬಾವಿಗೆ ಸಮರ್ಪಕ ನೀರು ಪೂರೈಸಿದರೆ ಕಳ್ಳತನವಾದ ನಿನ್ನ ಎಲ್ಲ ಆಭರಣಗಳನ್ನು ಭಕ್ತಿಭಾವದಿಂದ ತಾನೇ ಅರ್ಪಿಸುವೆ’ ಎಂದು ಹರಕೆ ಹೊತ್ತಿದ್ದರಂತೆ.

    ಅಂದುಕೊಂಡಂತೆ ಹೊಲದಲ್ಲಿ ತೋಡಿದ ಕೊಳವೆಬಾವಿಯಲ್ಲಿ ಸಮರ್ಪಕ ನೀರು ಕಾಣಿಸಿಕೊಂಡಿದೆ. ಕೂಡಲೇ ಹರಕೆಯನ್ನು ಪೂರೈಸಲು ಮುಂದಾದ ಭಕ್ತೆ ಸುಶೀಲಾಬಾಯಿ ಬನಶಂಕರಿ ದೇವಿಗೆ ಮಾಂಗಲ್ಯ, ಮೂಗುತಿ, ನೇತ್ರಕವಚ, ಕಾಲುಂಗುರ, ಜರತಾರಿ ಸೀರೆಯನ್ನು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಗುರುವಾರ ಸಮರ್ಪಿಸಿದ್ದಾರೆ. ಪೂಜಾ ಕಾರ್ಯ ನೆರವೇರಿಸಿದ ದೇವಾಂಗಮಠದ ಹುಚ್ಚಯ್ಯಸ್ವಾಮಿ ಅವರು ದೇವಿಗೆ ಚಿನ್ನಾಭರಣಗಳನ್ನು ತೊಡಿಸಿ ಪರಮಭಕ್ತೆ ಸುಶೀಲಾಬಾಯಿಗೆ ಶುಭ ಕೋರಿದ್ದಾರೆ.

    ಭಾನುವಾರ ನಸುಕಿನ ಜಾವ ನನಗೆ ದುಸ್ವಪ್ನವೊಂದು ಕಾಣಿಸಿಕೊಂಡಿತ್ತು. ನಮ್ಮೂರಿಗೆ ಅದೇನು ಗಂಡಾಂತರ ಕಾದಿದೆಯೋ ಎಂದು ಆತಂಕದಲ್ಲಿದ್ದೆ. ಕೊನೆಗೂ ಸೋಮವಾರ ಕಹಿ ಘಟನೆ ಬೆಳಕಿಗೆ ಬಂದಿತು. ದೇವಿಯ ಸನ್ನಿಧಿಯಲ್ಲಿ ಸಲ್ಲಿಸಿದ್ದ ನನ್ನ ಪ್ರಾರ್ಥನೆ ಲಕಾರಿಯಾದ್ದರಿಂದ ಭಕ್ತಿಯ ಸಮರ್ಪಣೆ ಮಾಡಿರುವೆ.
    ಸುಶೀಲಾಬಾಯಿ ಕುಬೇರ ಯಾದವ, ಗೊಳಸಂಗಿ ಗ್ರಾಮಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts