More

    7 ವರ್ಷದಿಂದ ರಸ್ತೆ ಕಾಮಗಾರಿ ನನೆಗುದಿಗೆ, ಪೂರ್ಣಗೊಳ್ಳದ ದೇವನಹಳ್ಳಿ-ದಾಬಸ್‌ಪೇಟೆ ಹೆದ್ದಾರಿ ಕಾಮಗಾರಿ

    ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ
    ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ದೇವನಹಳ್ಳಿ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 7 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

    2013ರಲ್ಲಿ ದಾಬಸ್‌ಪೇಟೆ-ಹೊಸಕೋಟೆ 80 ಕಿಮೀ ಉದ್ದದ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 2000 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಖಾಸಗಿ ಕಂಪನಿಗೆ ನೀಡಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆಯಾದ ಕಾರಣ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

    ಕೊಡಿಗೇಹಳ್ಳಿಯಿಂದ ಬೆಳವಂಗಲದವರೆಗೆ ಹೆದ್ದಾರಿ ಕಾಮಗಾರಿ ಕೆಲಸ ಅರ್ಧಕ್ಕೆ ಸ್ಥಗಿತವಾಗಿರುವ ಕಾರಣ ರಸ್ತೆಯಲ್ಲಿ ಬೃಹತ್ ಗುಂಡಿ, ಹಳ್ಳಗಳಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಸುತ್ತಮುತ್ತಲಿನ ಗ್ರಾಮದ ಜನರಿಗೂ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ಅಂಕಿ-ಅಂಶದಲ್ಲಿ ನಾಲ್ಕು ಪಥದ ರಸ್ತೆಗೆ ಕಾಮಗಾರಿ ಆರಂಭವಾಗಿ 7 ವರ್ಷ ಕಳೆದರೂ ಬಹುತೇಕ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಸ್ತುತ ವಾಹನ ಸಂಚಾರದ ಪ್ರಮಾಣ ಹೆಚ್ಚಾಗುತ್ತಿದ್ದು ಆರು ಪಥದ ರಸ್ತೆ ನಿರ್ಮಿಸಿದರೆ ಒಳ್ಳೆಯದು.

    ಅಪಘಾತಗಳ ಹೆಚ್ಚಳ: ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಪ್ರತಿವರ್ಷ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟಿ.ಬಿ.ವೃತ್ತದದಿಂದ ಕೊಡಿಗೇಹಳ್ಳಿ, ಮೆಣಸಿಗೇಟ್, ಕೆಸ್ತೂರುಗೇಟ್, ಬೆಳವಂಗಲ ಬಳಿ ಹೆಚ್ಚು ಸಾವು-ನೋವುಗಳು ಉಂಟಾಗಿದೆ.

    ನಿರಂತರ ಪ್ರತಿಭಟನೆ: ಐದು ವರ್ಷಗಳಿಂದ ತಾಲೂಕಿನ ಜನರು, ಹಲವು ಸಂಘಟನೆಗಳು ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ನೀಡುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

    ಈಗಾಗಲೇ ಮರು ಟೆಂಡರ್ ಕರೆಯಲಾಗಿದ್ದು, ಈ ವರ್ಷದ ಅಂತ್ಯದಲ್ಲಿ ಕಾಮಗಾರಿ ಆರಂಭವಾಗಲಿದೆ. ಮೂರು ವರ್ಷದಲ್ಲಿ ನಾಲ್ಕು ಪಥದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.
    ಸೋಮಶೇಖರ್, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಐದು ವರ್ಷಗಳಿಂದ ಬೆಳವಂಗಲ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ. ಜೀವ ಕೈಯಲ್ಲಿಡಿದು ಸಂಚಾರ ಮಾಡಬೇಕಾಗಿದೆ.
    ಪಿ.ಕನಕರಾಜು, ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts