More

    ರಾಜ್ಯ ಹೆದ್ದಾರಿ ಅಪಘಾತಕ್ಕೆ ರಹದಾರಿ; ಹಾನಗಲ್ಲ ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಸಂಕಟ

    ಹಾನಗಲ್ಲ: ಪಟ್ಟಣ ವ್ಯಾಪ್ತಿಯಲ್ಲಿರುವ ತಡಸ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಂಚರಿಸುವ ಸಾವಿರಾರು ವಾಹನಗಳ ಮಾಲೀಕರು ಹಾಗೂ ಪ್ರಯಾಣಿಕರು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

    ತಡಸ-ಶಿವಮೊಗ್ಗ ಹೆದ್ದಾರಿ ಹಲವು ವರ್ಷಗಳಿಂದ ದುರಸ್ತಿಯಾಗದೇ ಪ್ರಯಾಣಿಕರ ಜೀವ ಹಿಂಡುತ್ತಿದೆ. ಲೆಕ್ಕವಿಲ್ಲದಷ್ಟು ಅಪಘಾತಗಳಿಗೂ ಕಾರಣವಾಗಿದೆ. ಆದರೆ, ಅದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗುತ್ತಿಲ್ಲ. ಶಾಸಕರು, ಸಂಸದರ ಆದಿಯಾಗಿ ಜನಪ್ರತಿನಿಧಿಗಳು ಒತ್ತಡ ಹೇರಿದರೂ ಕಾಮಗಾರಿ ಆರಂಭಗೊಳ್ಳುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

    2016ರಲ್ಲಿ ಕೆಶಿಪ್ ಸಂಸ್ಥೆ ಹಾನಗಲ್ಲಿನಿಂದ ಶಿಕಾರಿಪುರದವರೆಗೆ 264 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಕೈಗೊಂಡಿತ್ತು. ಕಾಮಗಾರಿ 2018ರಲ್ಲಿ ಪೂರ್ಣಗೊಂಡಿದೆ. ಆದರೆ, ಹಾನಗಲ್ಲ ಪಟ್ಟಣದ ಮಧ್ಯದ 1.78 ಕಿ.ಮೀ. ರಸ್ತೆ ಕಾಮಗಾರಿ ಕೈಗೊಳ್ಳಲಿಲ್ಲ. ಇದನ್ನು ಹೊರುಪಡಿಸಿ ರಸ್ತೆಯನ್ನು ಪಿಡಬ್ಲ್ಯುಡಿಗೆ ಹಸ್ತಾಂತರಿಸಲಾಗಿದೆ. ರಸ್ತೆ ವಿಸ್ತರಣೆ ಕೈಗೊಳ್ಳಲು ಸಾಧ್ಯವಾಗದ್ದರಿಂದ ಕಾಮಗಾರಿ ಕೈ ಬಿಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

    ಪಟ್ಟಣದಲ್ಲಿ ರಸ್ತೆ ಪದೇಪದೆ ಹಾಳಾಗುತ್ತಿದೆ. ಮುಂಗಾರು ಪೂರ್ವದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಸಂಚಕಾರ ತಂದಿದ್ದರಿಂದ ಸಾರ್ವಜನಿಕರು ಹಾನಗಲ್ಲ ಬಂದ್ ಮಾಡಿ ಪ್ರತಿಭಟನೆ ಕೈಗೊಂಡಾಗ, ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಸಭೆ ನಡೆಸಿ, ಮಳೆಗಾಲದ ನಂತರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು.

    ಕೂಡಿಬರದ ಮುಹೂರ್ತ

    ಮಳೆಗಾಲದ ನೆಪವೊಡ್ಡಿ ಕಾಮಗಾರಿ ದುರಸ್ತಿ ಮುಂದೂಡಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, 5 ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾದರೂ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ಅದಕ್ಕೂ ಅನುದಾನವಿಲ್ಲವೆಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ರದ್ದಾದ ಟೆಂಡರ್ ಪ್ರಕ್ರಿಯೆ:

    ಸಾರ್ವತ್ರಿಕ ಚುನಾವಣೆಗೂ ಮುನ್ನ 5 ಕೋಟಿ ರೂಪಾಯಿ ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಒಬ್ಬರೇ ಗುತ್ತಿಗೆದಾರರು ಪಾಲ್ಗೊಂಡಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ, ಈ ಕಾಮಗಾರಿಗೆ ಇನ್ನೂವರೆಗೂ ಹೊಸ ಸರ್ಕಾರ ಟೆಂಡರ್ ಪ್ರಕ್ರಿಯೆಗೆ ಮುಂದಾಗಿಲ್ಲ. ಈ ಮಧ್ಯೆ ವಿಸ್ತರಣೆ ಕೈಗೊಂಡು ರಸ್ತೆ ನಿರ್ವಿುಸಬೇಕು ಎಂದು ಸಾರ್ವಜನಿಕರು ಶಾಸಕರು ಮತ್ತು ಸಂಸದರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

    ತಲೆಎತ್ತಿದ ಅನಧಿಕೃತ ಕಟ್ಟಡಗಳು:

    ಪಟ್ಟಣದ ಕೆಲವು ಪ್ರದೇಶದಲ್ಲಿ ಕೆಶಿಪ್ ರಸ್ತೆ ನಿರ್ವಣಕ್ಕಾಗಿ ತೆರವುಗೊಳಿಸಿದ್ದ ಸರ್ಕಾರಿ ಇಲಾಖೆಗಳ ಎದುರಿನ ಜಾಗವನ್ನು ಸಾರ್ವಜನಿಕರು ಅತಿಕ್ರಮಣ ಮಾಡಿ ಮನೆ-ವಾಣಿಜ್ಯ ಮಳಿಗೆ ನಿರ್ವಿುಸಿಕೊಂಡಿದ್ದಾರೆ. ರಸ್ತೆ ಪಕ್ಕದ ಲಕ್ಷಾಂತರ ರೂಪಾಯಿ ಬೆಲೆಯ ಜಾಗವನ್ನು ಲೋಕೋಪಯೋಗಿ ಇಲಾಖೆ ತನ್ನ ಸುಪರ್ದಿಗೆ ಪಡೆಯಬೇಕಿತ್ತು. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಸಂಶಯ ಹುಟ್ಟುಹಾಕಿದೆ.

    ಹಾನಗಲ್ಲ ಪಟ್ಟಣದ ಮಧ್ಯದಲ್ಲಿರುವ 1.78 ಕಿ.ಮೀ. ರಸ್ತೆಯ ಗುಂಡಿ ಮುಚ್ಚಲು 2.50 ಲಕ್ಷ ರೂಪಾಯಿ ಮಂಜೂರಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ತಾಲೂಕಿನ 8 ರಸ್ತೆಗಳ ನಿರ್ವಹಣೆಗೆ 30 ಲಕ್ಷ ರೂಪಾಯಿ ಮಂಜೂರಾಗಿದೆ. ಅದರಲ್ಲಿ ಪಟ್ಟಣದ ಈ ರಸ್ತೆಯೂ ಸೇರಿದೆ. 5 ಕೋಟಿ ರೂಪಾಯಿ ಪಟ್ಟಣದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ.

    | ನಾಗರಾಜ, ಎಇಇ ಪಿಡಬ್ಲ್ಯುಡಿ ಹಾನಗಲ್ಲ

    ಪಟ್ಟಣದ ಮಧ್ಯದ ರಸ್ತೆಯಲ್ಲಿ ಪ್ರತಿದಿನವೂ ವಾಹನಗಳ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯಾದ್ದರಿಂದ ವಾಹನಗಳ ಸಂಚಾರ ಒತ್ತಡವೂ ಹೆಚ್ಚಾಗಿದೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಪಾದಚಾರಿಗಳು ಓಡಾಡುವುದು ಹಿಂಸೆಯಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಮತ್ತೆ ರಸ್ತೆ ಸ್ಥಗಿತಗೊಳಿಸಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ.

    | ಅಡಿವೆಪ್ಪ ಆಲದಕಟ್ಟಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts