More

    ಅಪಾಯಕಾರಿ ಮರಗಳಿಗೆ ಮುಕ್ತಿ

    ಉಳ್ಳಾಲ: ಅಪಾಯಕಾರಿ ಎಂಬಂತೆ ಗೋಚರವಾಗುತ್ತಿದ್ದ ಮರಗಳನ್ನು ಹಲವು ದೂರು, ಮನವಿಗಳ ಬಳಿಕ ನೆಲಸಮಗೊಳಿಸಲಾಗಿದೆ. ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ 61 ಅಕೇಶಿಯಾ ಮರಗಳಿಗೆ ಮುಕ್ತಿ ನೀಡಲಾಗಿದೆ.
    ಹರೇಕಳ, ಕೊಣಾಜೆ, ಪಾವೂರು ಗ್ರಾಮಗಳಲ್ಲಿ ಅಕೇಶಿಯಾ ಮರಗಳ ಸಂಖ್ಯೆ ಸಾಕಷ್ಟಿತ್ತು. ಇಲ್ಲಿನ ರಸ್ತೆಗಳಲ್ಲಿ ಪ್ರಯಾಣಿಸುವಾಗ ಕಣ್ಣು ಹಾಯಿಸಿದಷ್ಟು ಅಕೇಶಿಯಾ ಮರಗಳೇಗೋಚರಿಸುತ್ತವೆ. ಈ ಭಾಗದಲ್ಲಿ ಅಕೇಶಿಯಾ ಎಂದಾಗ ನೆನಪಾಗುವುದು ಹರೇಕಳ ಮೊಯ್ದೀನ್. ಈ ಭಾಗದಲ್ಲಿ ಸಸ್ಯಕ್ರಾಂತಿ ಮಾಡಿದ ಕೀರ್ತಿ ಅವರದ್ದು.
    ಅಂದು ಹರೇಕಳ ಸಹಿತ ಸುತ್ತಮುತ್ತ ಮೊಯ್ದೀನ್ ಅಕೇಶಿಯಾ ಸಸಿಗಳನ್ನು ನೆಟ್ಟಿದ್ದು ಇಂದು ಆ ಮರಗಳು ವಿಶಾಲವಾಗಿ ಬೆಳೆದಿವೆ. ಬೃಹತ್ ಮರಗಳಿಂದ ಅಪಾಯ ಸಾಧ್ಯತೆ ಮನಗಂಡು ಹಿಂದೊಮ್ಮೆ ಸರ್ಕಾರವೇ ಅವುಗಳನ್ನು ಕಡಿಯಲು ಅಧಿಸೂಚನೆ ಹೊರಡಿಸಿತ್ತು. ಅದು ಪಾಲನೆಯಾಗದ ಕಾರಣ ಇಂದಿಗೂ ಸಾರ್ವಜನಿಕರು, ವಿದ್ಯುತ್, ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಈ ಮರಗಳು ಆಗಾಗ ವಿದ್ಯುತ್ ತಂತಿಗಳು, ಕಂಬಗಳು, ರಸ್ತೆ, ಮನೆಗಳ ಮೇಲೆ ಬಿದ್ದು ತೊಂದರೆ ನೀಡುವುದೂ ಇದೆ.

    ಎರಡು ಹಂತದಲ್ಲಿ ಸಂಹಾರ
    ಗ್ರಾಮಚಾವಡಿಯಿಂದ ಹರೇಕಳ ರಸ್ತೆಯುದ್ದಕ್ಕೂ ಮರಗಳು ಅಪಾಯ ಉಂಟು ಮಾಡಿರುವ ಕಾರಣ ಮರಗಳನ್ನು ಕಡಿಯುವಂತೆ ಪಂಚಾಯಿತಿ, ಜನಪ್ರತಿನಿಧಿಗಳು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಪ್ರಸ್ತುತ ಹರೇಕಳ-ಅಡ್ಯಾರ್ ಸೇತುವೆಯೂ ಆಗುತ್ತಿದ್ದು ಕಾಮಗಾರಿ ಮುಗಿಯುವ ವೇಳೆ ಇಲ್ಲವೇ ನಂತರ ರಸ್ತೆ ವಿಸ್ತರಣೆಯಾಗಲಿದೆ. ಅದಕ್ಕೆ ರಸ್ತೆ ಬದಿ ಮರಗಳು ಅಡ್ಡಿಯಾಗುವ ಹಿನ್ನೆಲೆಯಲ್ಲಿ ಇವುಗಳನ್ನು ಕತ್ತರಿಸುವಂತೆ ಸ್ವತಃ ಶಾಸಕರೇ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಲಾಖಾಧಿಕಾರಿ ರವಿ ಕುಮಾರ್ ಉಸ್ತುವಾರಿಯಲ್ಲಿ ಮೊದಲ ಹಂತದಲ್ಲಿ 28, ಎರಡನೇ ಹಂತದಲ್ಲಿ 33 ಮರಗಳನ್ನು ಕಡಿಯಲಾಗಿದೆ.

    ನ.30ಕ್ಕೆ ಆನ್‌ಲೈನ್ ಮೂಲಕ ಏಲಂ
    ಇಲ್ಲಿ ಕಡಿಯಲಾಗಿರುವ ಮರಗಳು ನ.30ರಂದು ಅರಣ್ಯ ಇಲಾಖೆಯಲ್ಲಿ ಏಲಂ ಆಗಲಿವೆ. ಏಲಂನಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ನಿಯಮದಂತೆಯೇ ಈ ಪ್ರಕ್ರಿಯೆ ಆನ್‌ಲೈನ್ ಮುಖಾಂತರ ನಡೆಯಲಿದೆ.

    ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯುವಂತೆ ಸ್ವತಃ ಶಾಸಕರೇ ಸೂಚಿಸಿದ್ದರು. ಅದರಂತೆ ತೊಂದರೆ ಉಂಟು ಮಾಡುತ್ತಿರುವ ಮರಗಳನ್ನು ಗುರುತಿಸಿ ಕಡಿಯಲಾಗಿದೆ. ರಸ್ತೆ ವಿಸ್ತರಣೆ ಆಗುವ ಮಾಹಿತಿಯಿದ್ದು ಅದರ ಆಧಾರದಲ್ಲಿ ಮಳೆಗಾಲದಲ್ಲಿ ಗಿಡಗಳನ್ನು ನೆಡಲಾಗುತ್ತದೆ.
    ರವಿ ಕುಮಾರ್ ಎಸ್., ಉಪವಲಯ ಅರಣ್ಯಾಧಿಕಾರಿ

    ಮಳೆ, ಗಾಳಿ ಬಂದಾಗ ರಸ್ತೆ ಬದಿಯಿರುವ ಅಕೇಶಿಯಾ ಮರಗಳು ಉರುಳುವ ಆತಂಕ ಜನರಲ್ಲಿತ್ತು. ಅಲ್ಲದೆ ರಸ್ತೆ ವಿಸ್ತರಣೆ ಆಗಲಿರುವುದರಿಂದ ಅರಣ್ಯ ಇಲಾಖೆ ಶಾಸಕರ ಸೂಚನೆಯಂತೆ ಮರಗಳನ್ನು ಕಡಿದಿದೆ. ಈ ಮರಗಳಿಂದ ಆರೋಗ್ಯ, ಪರಿಸರಕ್ಕೆ ಹಾನಿಯಿರುವುದರಿಂದ ಎಲ್ಲ ಮರಗಳನ್ನು ಕಡಿಯುವುದು ಉತ್ತಮ.
    ಮುಹಮ್ಮದ್ ಮುಸ್ತಫಾ ಮಲಾರ್, ತಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts