More

    ಸುರಕ್ಷತಾ ನಿಯಮ ಪಾಲಿಸಿ, ಅಪಾಯದಿಂದ ಪಾರಾಗಿ: ಸಾರ್ವಜನಿಕರಿಗೆ ಎಸ್ಪಿ ಎನ್.ಯತೀಶ್ ಸಲಹೆ

    ಮಂಡ್ಯ: ಜಿಲ್ಲೆಯಲ್ಲಿ 2022ರಲ್ಲಿ ರಸ್ತೆ ಅಪಘಾತದಿಂದ 486 ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಕೆಲವರು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. 486 ಜನರ ಸಾವುಗಳು ಹೆಲ್ಮೆಟ್ ಧರಿಸದೆ ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡಿದ್ದರಿಂದ ಆಗಿದೆ. ಒಟ್ಟಾರೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಅವಘಡ ಸಂಭವಿಸಿದೆ ಎಂದು ತಿಳಿಸಿದರು.
    ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇದ್ದಾಗ ದಂಡ ವಿಧಿಸುವುದು ಪೊಲೀಸ್ ಇಲಾಖೆಯ ಕೆಲಸದ ಒಂದು ಭಾಗವಾದರೆ ಸಾರ್ವಜನಿಕರ ಪ್ರಾಣ ರಕ್ಷಣೆ ಕೂಡ ಆಗಿದೆ. ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಯಾವುದೇ ಕಾರಣಕ್ಕೂ ಇಲಾಖೆ ದಂಡ ವಿಧಿಸುವುದಿಲ್ಲ ಎಂದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ವಾಹನ ಚಾಲಕರು ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಗೆ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ನಿಯಮ ರೂಪಿಸಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಜ.11ರಿಂದ 17ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಸ್ಪೀಡ್ ಲಿಮಿಟ್‌ಅನ್ನು ಅನುಸರಿಸಬೇಕು. ಅತಿವೇಗ ಅಪಘಾತಕ್ಕೆ ಕಾರಣ. ವಾಹನ ಚಾಲನೆ ಮಾಡುವಾಗ ಒಂದು ಕ್ಷಣಿದ ತಪ್ಪು ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎಚ್ಚರಿಕೆ ಹಾಗೂ ನಿಯಮ ಪಾಲನೆ ಅತಿ ಮುಖ್ಯ ಎಂದು ಹೇಳಿದರು.
    ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಮಾತನಾಡಿ, ವಾಹನಗಳ ವಿಧದ ಆಧಾರದ ಮೇಲೆ ನಿಗದಿಪಡಿಸಿರುವ ಸಂಖ್ಯೆಗಳಲ್ಲಿ ಮಾತ್ರ ಜನರು ಸಂಚರಿಸಬೇಕು. ದ್ವಿಚಕ್ರ ವಾಹನಗಳ ಮೇಲೆ ಮೂರು ಜನ ಸಂಚರಿಸುವುದು ಅಪಘಾತಕ್ಕೆ ಕಾರಣವಾಗುತ್ತದೆ. ಅಪಘಾತಕ್ಕೆ ಸಂಬಂಧಿಸಿದಂತೆ ವಿಮೆ ಕಂಪನಿ ಹಣ ನೀಡುವಾಗ ನ್ಯಾಯಾಲಯಗಳಲ್ಲಿ ಆರ್‌ಸಿ ಪುಸ್ತಕ, ಎಫ್‌ಸಿ, ಡಿಎಲ್ಗಳನ್ನು ಪರಿಶೀಲಿಸಲಾಗುವುದು. ಅವುಗಳು ಚಾಲ್ತಿಯಲ್ಲಿರಬೇಕು. ಆದ್ದರಿಂದ ವಾಹನ ಚಾಲಕರು ದಾಖಲಾತಿಗಳ ಚಾಲ್ತಿ ಅವಧಿಯನ್ನು ತಿಂಗಳಿಗೊಮ್ಮೆ ಪರಿಶೀಲಿಸಿಕೊಳ್ಳಿ ಎಂದರು.
    ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೆಎಸ್‌ಆರ್‌ಟಿಸಿ ವಾಹನ ಚಾಲಕರಿಗೆ ಸೆಫ್ಟಿ ಬ್ಯಾಡ್ಜ್‌ಗಳನ್ನು ನೀಡಲಾಗುವುದು. 72 ಬ್ಲ್ಯಾಕ್ ಸ್ಪಾಟ್‌ಗಳ ವಿವರವನ್ನು ಎಲ್ಲ ಡಿಪೋದಲ್ಲಿ ವಾಹನ ಚಾಲಕರ ಮಾಹಿತಿಗಾಗಿ ಅನಾವರಣಗೊಳಿಸಲಾಗಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಡಿಡಿಪಿಐ ಜವರೇಗೌಡ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಭಾಸ್ಕರ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಪ್ರಸಾದ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts