More

    ರಸ್ತೆ ದುರಸ್ತಿ ಮಾಡೋರ‌್ಯಾರು?

    ರಾಯಬಾಗ: ತಾಲೂಕಿನ ಮಾಡಲಗಿ ಗ್ರಾಮದ ಮೂಲಕ ಹಾದು ಹೋಗಿರುವ ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾದ ಕಾರಣದಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ.

    ಸುಮಾರು 5-6 ಕಿ.ಮೀ. ರಸ್ತೆಯಲ್ಲಿ ಭಾರಿ ಪ್ರಮಾಣದ ತಗ್ಗು-ಗುಂಡಿಗಳು ಬಿದ್ದಿವೆ. ಇದರಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಈ ರಾಜ್ಯ ಹೆದ್ದಾರಿಯು ಮಂಗಸೂಳಿ-ರಾಯಬಾಗ- ಕಬ್ಬೂರ-ಘಟಪ್ರಭಾ- ಗೋಕಾಕ-ಲಕ್ಷ್ಮೇಶ್ವರ ಸೇರಿ ನೆರೆಯ ಮತ್ತಿತರ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದೆ ಮಾರ್ಗವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಸಂಚಾರ ಮಾಡುತ್ತಾರೆ. ಆದರೆ, ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ವರ್ಷದೊಳಗೆ ಹಾಳಾದ ರಸ್ತೆ: 3 ವರ್ಷದ ಹಿಂದೆ ಮಾಡಲಗಿ ಗ್ರಾಮದ ಬಳಿ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕಳೆದ ವರ್ಷ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ವರ್ಷ ಪೂರ್ಣಗೊಳ್ಳುವುದರೊಳಗೆ ರಸ್ತೆ ಹಾಳಾಗಿದೆ. ಅಧಿಕಾರಿಗಳ ನಿರ್ಲಕ್ಷೃ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಸ್ತೆ ಹಾಳಾದ ಕಾರಣ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಅನೇಕ ಬಾರಿ ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹದಿನೈದು ದಿನದ ಒಳಗೆ ಕಾಮಗಾರಿ ಆರಂಭಿಸದಿದ್ದರೆ ಮಾಡಲಗಿ ಗ್ರಾಮದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು.
    | ಈರಣ್ಣ ಕಮತೆ ಅಧ್ಯಕ್ಷ, ಕರವೇ ಮಾಡಲಗಿ ಘಟಕ

    ಮಾಡಲಗಿ ಗ್ರಾಮದ ಬಳಿ ಹಾಳಾಗಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಕೈಗೊಳ್ಳಲು ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು.
    | ಆರ್.ಕೆ. ನಿಂಗನೂರೆ ಎಇಇ, ಲೋಕೋಪಯೋಗಿ ಇಲಾಖೆ, ರಾಯಬಾಗ

    | ಸುಧೀರ ಎಂ.ಕಳ್ಳೆ ರಾಯಬಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts