More

    ಕಾಟಾಚಾರದ ರಸ್ತೆ ದುರಸ್ತಿ, ತ್ರಾಸಿ ಜಂಕ್ಷನ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತ

    ಗಂಗೊಳ್ಳಿ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಜಂಕ್ಷನ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ಆದರೂ ಸಂಬಂಧಿತ ಹೆದ್ದಾರಿ ಇಲಾಖೆಯಾಗಲಿ, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯಾಗಲಿ ಈ ಬಗ್ಗೆ ಗಮನ ಕೊಡುತ್ತಿಲ್ಲ. ಇತ್ತೀಚೆಗೆ ಕಾಟಾಚಾರದ ಕಾಮಗಾರಿ ಮಾಡಿದ್ದು, ಇದರಿಂದೇನೂ ಪ್ರಯೋಜನ ಆಗಿಲ್ಲ.

    ಕೆಲವು ದಿನಗಳ ಹಿಂದೆ ತ್ರಾಸಿ ಜಂಕ್ಷನ್‌ನಲ್ಲಿ ಅಪಘಾತ ನಡೆದ ಬಳಿಕ ಸ್ಥಳೀಯರು ಪ್ರತಿಭಟಿಸಿದ್ದು, ಸ್ಥಳಕ್ಕೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳು ಬಂದು ಪರಿಶೀಲನೆ ನಡೆಸಿ, ದುರಸ್ತಿ ಪಡಿಸಬೇಕು ಎನ್ನುವುದಾಗಿ ಪಟ್ಟು ಹಿಡಿದಿದ್ದರು. ಆಗ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾಟಾಚಾರಕ್ಕೆ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆ ನೆಲೆಯಲ್ಲಿ ನಾಲ್ಕೈದು ದಿನಗಳ ಹಿಂದೆ ತ್ರಾಸಿ ಜಂಕ್ಷನ್ ಸ್ಥಳದಲ್ಲಿ ಬೇರೆಲ್ಲೊ ಉಳಿದ ಡಾಂಬರು ಹುಡಿಯನ್ನು ಇಲ್ಲಿ ತಂದು ಹಾಕಿ ಹೋಗಿದ್ದು, ಇದರಿಂದ ಏನೇನೂ ಪ್ರಯೋಜನ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

    ಅವೈಜ್ಞಾನಿಕ ಕಾಮಗಾರಿ: ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ತ್ರಾಸಿ ತ್ರಾಸಿಯ ಜಂಕ್ಷನ್ ಅವೈಜ್ಞಾನಿಕವಾಗಿದ್ದು, ಇಲ್ಲಿ ತ್ರಾಸಿಯಿಂದ ಮೊವಾಡಿ ಕಡೆಗೆ ಸಂಚರಿಸುವವರಿಗೆ ಹಾಗೂ ಆ ಕಡೆಯಿಂದ ತ್ರಾಸಿಗೆ ಬರುವವರಿಗೆ ತೊಂದರೆಯಾಗುತ್ತಿದೆ. ಡಿವೈಡರ್ ಅಷ್ಟೇನೂ ಅಗಲವಿಲ್ಲ. ಇಲ್ಲಿ ಬಸ್ ಅಥವಾ ಮೀನಿನ ಲಾರಿಗಳು ಡಿವೈಡರ್ ಕ್ರಾಸಿಂಗ್ ಬಳಿ ನಿಂತು ರಸ್ತೆ ದಾಟುವುದು ಅಸಾಧ್ಯ. ಸರ್ವಿಸ್ ರಸ್ತೆಯೂ ಇಲ್ಲ. ಜಂಕ್ಷನ್ ಕೂಡ ಸರಿಯಿಲ್ಲ. ಬೆಳಕಿನ ವ್ಯವಸ್ಥೆಯಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವವರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಆಗಿಲ್ಲ. ಇದರ ಪರಿಣಾಮವೇ ಈ ರೀತಿಯ ಅಪಘಾತಗಳು ಆಗಾಗ ಆಗುತ್ತಲೇ ಇರುತ್ತದೆ.

    ಪಾದಚಾರಿಗಳ ಪಾಡು: ಇಲ್ಲಿ ಮೊವಾಡಿ ಕಡೆ ಅಥವಾ ತ್ರಾಸಿ ಕಡೆಯಿಂದ ಆಚೆ ಕಡೆಗೆ ರಸ್ತೆ ದಾಟುವವರ ಜನರ ಪಾಡಂತೂ ಹೇಳತೀರದಾಗಿದೆ. ವೇಗವಾಗಿ ವಾಹನಗಳು ಬರುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡೇ ರಸ್ತೆ ದಾಟುವಂತಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ರಸ್ತೆ ಬದಿ ಡಾಂಬರು ಹಾಕಿ ಹೋಗಿದ್ದಾರೆ. ಅದು ಯಾಕೆ ಹಾಕಿದ್ದಾರೆ ಅಂತ ಗೊತ್ತಿಲ್ಲ. ನಮಗೆ ಇಲ್ಲಿ ಬಹಳ ಮುಖ್ಯವಾಗಿ ಡಿವೈಡರ್ ಅಗಲೀಕರಣ ಆಗಬೇಕು. ಬೀದಿ ದೀಪದ ವ್ಯವಸ್ಥೆ ಬೇಕು. ಪಾದಚಾರಿಗಳಿಗೆ ರಸ್ತೆ ದಾಟಲು ಸುಗಮವಾದ ವ್ಯವಸ್ಥೆ ಬೇಕು. ಈ ಬಗ್ಗೆ ಕೇಳಿದರೆ ನಮ್ಮ ಯಂತ್ರಗಳೆಲ್ಲ ಕಾರವಾರದಲ್ಲಿದೆ ಎನ್ನುತ್ತಾರೆ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯವರು ಎಂದು ಸ್ಥಳೀಯರಾದ ಸಂತೋಷ್ ಪೂಜಾರಿ ಹೇಳುತ್ತಾರೆ.

    ತ್ರಾಸಿ ಜಂಕ್ಷನ್‌ನಲ್ಲಿನ ಸಮಸ್ಯೆ ಸೇರಿದಂತೆ ಕುಂದಾಪುರ – ಬೈಂದೂರಿನ ಹೆದ್ದಾರಿ ಅನೇಕ ಕಡೆಗಳಲ್ಲಿ ಕೆಲವೊಂದು ಕುಂದು ಕೊರತೆಗಳಿದ್ದು, ಅವುಗಳನ್ನು ಪರಿಹರಿಸುವ ಕುರಿತಂತೆ ತಿಂಗಳೊಳಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯ ಅಧಿಕಾರಿಗಳ ಸಭೆ ಕರೆಯಲಾಗುವುದು.

    ಬಿ.ಎಂ.ಸುಕುಮಾರ್ ಶೆಟ್ಟಿ
    ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts