More

    ಶ್ರವಣ್ ಕುಮಾರ್ ನಾಳ ಪುತ್ತೂರು
    ಜಿಲ್ಲೆಯ ಎರಡನೇ ಅತಿದೊಡ್ಡ ನಗರ ಪುತ್ತೂರಿನಲ್ಲಿ ವಾಹನ ದಟ್ಟಣೆ ದಿನೇದಿನೆ ಹೆಚ್ಚುತ್ತಿದ್ದು, ಜಿಲ್ಲಾ ಕೇಂದ್ರದ ನಿರೀಕ್ಷೆಯಲ್ಲಿರುವ ಇಲ್ಲಿ ಮುಖ್ಯ ರಸ್ತೆಯಿಂದ ಕವಲೊಡೆದು ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸರ್ಕಲ್‌ಗಳು(ವೃತ್ತ) ಅಸಮರ್ಪಕ ರೀತಿಯಲ್ಲಿದ್ದು, ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ.

    ಸಂಚಾರ ಮಾರ್ಗಸೂಚಿ, ನಿಯಂತ್ರಣ ಸಾಧನ ಕೊರತೆ ಹೀಗೆ ವಿವಿಧ ಸಮಸ್ಯೆಗಳಿಂದ ಸರ್ಕಲ್‌ಗಳು ಸೊರಗಿದ್ದರೆ, ಕೆಲವೆಡೆ ಸರ್ಕಲ್‌ಗಳೇ ಇಲ್ಲದೆ ವಾಹನಗಳು ಬೇಕಾಬಿಟ್ಟಿ ಚಲಿಸಿ ಅಪಘಾತ, ಟ್ರಾಫಿಕ್‌ಜಾಮ್ ಉಂಟಾಗುತ್ತಿದೆ. ನಗರದಲ್ಲಿ ನಾಲ್ಕು ದಿಕ್ಕಿನಿಂದ ವಾಹನ ಒಳಪ್ರವೇಶಿಸುವ ಪರ್ಲಡ್ಕ ಜಂಕ್ಷನ್‌ನಲ್ಲಿ ಸಂಚಾರವೇ ಅಸುರಕ್ಷಿತ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಜಂಕ್ಷನ್ ಇದ್ದು, ವಾಹನ ಒಳ-ಹೊರ ಪ್ರವೇಶಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ.

    ನಿಯಂತ್ರಣಕ್ಕೆ ಸಿಬ್ಬಂದಿಯೂ ಇಲ್ಲ. ಇಲ್ಲಿ ವಾಹನ ಚಾಲಕರೇ ಎಚ್ಚರಿಕೆ ವಹಿಸಿ ಸಂಚರಿಸಬೇಕು. ಪಾದಚಾರಿಗಳು ನಾಲ್ಕು ರಸ್ತೆ ಗಮನಿಸಿ ಪ್ರಯಾಣಿಸಬೇಕು. ಇಲ್ಲದಿದ್ದರೆ ಆಪತ್ತು. ಇಲ್ಲಿ ಮಂಗಳೂರು, ಸುಳ್ಯ, ಪಾಣಾಜೆ, ಪುತ್ತೂರು ನಗರದಿಂದ ವಾಹನಗಳು ಪ್ರವೇಶಿಸುತ್ತಿದ್ದು, ಅನೇಕ ಬಾರಿ ಅಪಘಾತ, ಪ್ರಾಣ ಹಾನಿ ಸಂಭವಿಸಿವೆ.

    ಠಾಣೆ ಎದುರಲ್ಲೆ ಟ್ರಾಫಿಕ್ ಜಾಮ್: ನಗರ ಪೊಲೀಸ್, ಸಂಚಾರ ಪೊಲೀಸ್, ಮಹಿಳಾ ಪೊಲೀಸ್ ಠಾಣೆ ಸನಿಹದಲ್ಲಿ ಕವಲೊಡೆದು ಕೋರ್ಟ್, ಮಿನಿವಿಧಾನಸೌಧ, ಸಂತೆ ಮಾರುಕಟ್ಟೆ, ಮಹಿಳಾ ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಸಂಪರ್ಕಿಸುವ ರಸ್ತೆ ಜನನಿಬಿಡ ರಸ್ತೆಗಳಲ್ಲಿ ಒಂದು. ಇಲ್ಲಿ ರಸ್ತೆ ಕಿರಿದಾಗಿರುವ ಕಾರಣ ವೃತ್ತ ನಿರ್ಮಾಣ ಮಾಡಲಾಗಿಲ್ಲ. ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಹತ್ತಾರು ವಾಹನಗಳು ಒಳಪ್ರವೇಶಿಸಿದರೆ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ.

    ಎಪಿಎಂಸಿ ರಸ್ತೆ ಸಂಕಟ: ಅರುಣಾ ಚಿತ್ರಮಂದಿರ ಬಳಿಯಿಂದ ಎಪಿಎಂಸಿಗೆ ತಿರುಗುವ ರಸ್ತೆಯ ಗೋಳು ಹೇಳತೀರದು. ಬೆಳ್ಳಾರೆ, ಸುಳ್ಯ, ಕಾಣಿಯೂರು ಭಾಗದಿಂದ ಬರುವ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಇದೇ ವೃತ್ತದ ಮೂಲಕ ದಾಟಿ ಪ್ರವೇಶಿಸುತ್ತದೆ. ಮೂರು ಕಡೆಯಿಂದ ಇಲ್ಲಿ ವಾಹನಗಳು ಪ್ರವೇಶಿಸುವ ಕಾರಣ ದಿನದ ಕೆಲ ಹೊತ್ತಾದರೂ ಟ್ರಾಫಿಕ್ ಸಮಸ್ಯೆ ತಲೆದೋರುತ್ತದೆ.

    ಮಾರ್ಗಸೂಚಿ ಇಲ್ಲ: ಉಪ್ಪಿನಂಗಡಿ, ಸವಣೂರು, ಕಬಕ ಭಾಗದಿಂದ ನಗರವನ್ನು ಪ್ರವೇಶಿಸುವ ರಸ್ತೆಗಳಲ್ಲಿ ವೃತ್ತ ಇದ್ದರೂ, ವೇಗ ನಿಯಂತ್ರಣಕ್ಕೆ ಮಾರ್ಗಸೂಚಿಗಳು ಅಳವಡಿಕೆಯಾಗಿಲ್ಲ. ಹಳೇ ಪದ್ಧತಿಯಲ್ಲಿ ವಾಹನ ತಡೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೂ ಅದು ಅಪಾಯದ ಎಚ್ಚರಿಕೆ ನೀಡಬಹುದೇ ಹೊರತು ಆಗಬಹುದಾದ ಅನಾಹುತಗಳನ್ನು ತಡೆಯದು. ದರ್ಬೆ, ಮಂಜಲಡ್ಪು, ಬೈಪಾಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ವೇಗ ನಿಯಂತ್ರಣಕ್ಕೆ ಪೂರಕ ಕ್ರಮ ಜಾರಿ ಮಾಡಿದರೆ, ಆಗ ನಗರದೊಳಗಿನ ಅಪಘಾತ ಪ್ರಕರಣ ಇಳಿಮುಖವಾಗುತ್ತದೆ. ಜತೆಗೆ ಪರ್ಯಾಯ ರಸ್ತೆಗಳ ಬಳಕೆಗೆ ಆದ್ಯತೆ ನೀಡಿದರೆ ವಾಹನ ದಟ್ಟಣೆ ಕೂಡ ಇಳಿಮುಖ ಆಗುವ ಸಾಧ್ಯತೆ ಇದೆ.

    ಪುತ್ತೂರು ನಗರಸಭೆಯ ಅನುದಾನದಲ್ಲಿ ಕಳೆದ ವರ್ಷ ದರ್ಬೆ ವೃತ್ತ, ಸೇಂಟ್ ಫಿಲೋಮಿನಾ ಕಾಲೇಜು ಬಳಿಯ ಸಣ್ಣ ವೃತ್ತಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಬಾರಿ ಸರ್ಕಲ್ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ.
    ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts