More

    5 ದಶಕದ ಸಮಸ್ಯೆಗಿಲ್ಲ ಮುಕ್ತಿ

    ಮೂಡುಬಿದಿರೆ: ತೋಡಾರು ಗ್ರಾಮದ ಮಾಸ್ತಿಕಟ್ಟೆ ನೇರಳಕಟ್ಟೆಯಿಂದ ವನಭೋಜನ ಮೂಲಕ ಬೆರ್ಮರೆಕೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಆಗ್ರಹಿಸಿ ಕಳೆದ 50 ವರ್ಷಗಳಿಂದ ಜನತೆ ನಿರಂತರವಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.

    ಈ ರಸ್ತೆಯಲ್ಲಿ ವಾಹನ ಮಾತ್ರವಲ್ಲ ನಡೆದುಕೊಂಡು ಹೋಗುವುದೂ ಕಷ್ಟವಾಗಿದೆ. ಬೇಸಿಗೆಯಲ್ಲಿ ಹದಗೆಟ್ಟ ರಸ್ತೆಯಲ್ಲಿ ಧೂಳಿನಿಂದ ಸಂಚರಿಸುವುದು ಕಷ್ಟಸಾಧ್ಯ. ಮಳೆಗಾಲದಲ್ಲಿ ರಸ್ತೆ ತೋಡಾಗಿ ಪರಿವರ್ತನೆಗೊಳ್ಳುತ್ತದೆ. ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಂದಿದ್ದರೂ, ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ರಸ್ತೆಗೆ ಕಾಯಕಲ್ಪವಾಗಿಲ್ಲ. ರಸ್ತೆ ತೀವ್ರ ಹದೆಗೆಟ್ಟರುವುದರಿಂದ ವಾಹನ ಸಂಚಾರವಿಲ್ಲ. ಆಟೋ ಚಾಲಕರು ಕೂಡ ಈ ರಸ್ತೆಯಲ್ಲಿ ಬಾಡಿಗೆ ತೆರಳಲು ಒಪ್ಪುವುದಿಲ್ಲ. ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸೈಕಲ್ ತಳ್ಳಿಕೊಂಡೇ ಸಾಗಬೇಕಾಗುತ್ತದೆ. ಮಳೆಗಾಲದಲ್ಲಿ ರಸ್ತೆ ತೋಡಾಗುವುದರಿಂದ ವಿಷ ಜಂತುಗಳು ಗೋಚರವಾಗುವುದಿಲ್ಲ.

    ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು: ಕೆಲವರ್ಷದ ಹಿಂದೆ ರಸ್ತೆ ನಿರ್ಮಾಣಕ್ಕೆ ಅಂದಿನ ಮಂಡಲ ಅಧ್ಯಕ್ಷ ದಿ.ರೇಮಂಡ್ ಡಿಕೋಸ್ತ ತಮ್ಮ ಜಮೀನಿನ ಮಧ್ಯೆ ರಸ್ತೆ ನಿರ್ಮಿಸಲು ಜಾಗ ನೀಡಿದ್ದರು. ಆದರೆ 50 ವರ್ಷಗಳಿಂದೀಚೆಗೆ ರಸ್ತೆಗೆ ಡಾಂಬರು ಅಳವಡಿಕೆ, ದುರಸ್ತಿ ನಡೆದಿಲ್ಲ. ಈ ಕಾರಣದಿಂದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ಜನಪ್ರತಿನಿಧಿಗಳು ಭರವಸೆ ನೀಡಿದ ಕಾರಣ ಗ್ರಾಮಸ್ಥರು ಬಹಿಷ್ಕಾರ ಹಿಂಪಡೆದಿದ್ದರು.

    2018-19ನೇ ಸಾಲಿನ ಮುಖ್ಯಮಂತ್ರಿ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ವನಭೋಜನ ಪ್ರದೇಶದಲ್ಲಿ 371 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಆದರೆ ನೇರಳಕಟ್ಟೆಯಿಂದ ವನಭೋಜನಕ್ಕೆ ಹೋಗುವ ಅರ್ಧ ಕಿ.ಮೀ ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದೆ.

    ನೇರಳಕಟ್ಟೆ-ವನಭೋಜನ ರಸ್ತೆ ದುರಸ್ತಿ ಬಗ್ಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದು, ಅರ್ಧದಷ್ಟು ರಸ್ತೆ ಮಾತ್ರ ದುರಸ್ತಿಯಾಗಿದೆ. ಉಳಿದ ಅರ್ಧರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಶಾಸಕರು ಅಥವಾ ಪಂಚಾಯಿತಿ ಆಡಳಿತ ಅನುದಾನ ಮೀಸಲಿರಿಸಿ ರಸ್ತೆ ದುರಸ್ತಿ ಮಾಡಿದರೆ ಸಮಸ್ಯೆ ದೂರವಾಗಿ ಎಲ್ಲರಿಗೂ ಅನುಕೂಲವಾಗುತ್ತದೆ.
    ಸದಾನಂದ ನಾರಾವಿ, ಗ್ರಾಮಸ್ಥರು

    ಮಾಸ್ತಿಕಟ್ಟೆ ವನಭೋಜನ ರಸ್ತೆ ಅಭಿವೃದ್ಧಿ ಕುರಿತು ಶಾಸಕರ ಜತೆ ಚರ್ಚಿಸಿ ಅನುದಾನವನ್ನು ಮೀಸಲಿರಿಸುವ ಪ್ರಯತ್ನ ಮಾಡುತ್ತೇನೆ.
    ಕೆ.ಪಿ ಸುಚರಿತ ಶೆಟ್ಟಿ, ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts