More

    ಕಬ್ಬಿನಾಲೆ ಭಾಗದ ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರ

    ನರೇಂದ್ರ ಎಸ್. ಮರಸಣಿಗೆ ಹೆಬ್ರಿ

    ಮುದ್ರಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಸಮೀಪದ ಪೆರಡಬಾಕ್ಯಾರ್‌ನಿಂದ ಮೇಲ್ಮಠದ ವರೆಗೆ 1.5 ಕಿ.ಮೀ. ರಸ್ತೆ ಅಲ್ಲಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿ ಹದಗೆಟ್ಟಿದ್ದು, ನಿರ್ವಹಣೆ ಕೊರತೆಯಿಂದ ಸಂಚಾರ ದುಸ್ತರವಾಗಿದೆ.

    ತುರ್ತು ಸಂದರ್ಭದಲ್ಲಿ ದುಪ್ಪಟ್ಟು ಹಣ ನೀಡುತ್ತೇವೆ ಎಂದರೂ ಆಟೋರಿಕ್ಷಾ ಚಾಲಕರು ತೀರಾ ಹದಗೆಟ್ಟ ಈ ಮಾರ್ಗದಲ್ಲಿ ಬರಲೊಪ್ಪುವುದಿಲ್ಲ. ಬೇಸಿಗೆಯಲ್ಲಿ ಸ್ಥಳೀಯರೇ ರಸ್ತೆಗೆ ಮಣ್ಣು ಹಾಕಿ ಸರಿಪಡಿಸುತ್ತಾರೆ. ಆದರೆ ಮಳೆಗಾಲದಲ್ಲಿ ಸಂಚಾರ ಬಹಳ ಕಷ್ಟಕರವಾಗುತ್ತದೆೆ. ಜಿಲ್ಲಾಧಿಕಾರಿ ಗ್ರಾಮ ವಾಸ್ತವದಲ್ಲಿ ಇದರ ಬಗ್ಗೆ ಪ್ರಸ್ತಾವನೆ ಮಾಡಿದ್ದರೂ ದುರಸ್ತಿಯಾಗಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೆಲ್ಲ ಚುನಾವಣೆಗೆ ಮಾತ್ರ ಸೀಮಿತ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಅಲ್ಲದೇ ಪೆರಡಬಾಕ್ಯಾರ್‌ನಲ್ಲಿ 1956ರಲ್ಲಿ ಸಮಾಜ ವಿಕಾಸ ಯೋಜನೆಯಲ್ಲಿ 25,000 ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಈ ವರ್ಷವೂ ಅದನ್ನು ಸರಿಪಡಿಸದಿದ್ದರೆ ಮುಂದಿನ ವರ್ಷ ಈ ಭಾಗದ 150ರಿಂದ 200 ಮನೆಗಳು ಸಂಪರ್ಕ ಕಳೆದುಕೊಳ್ಳಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
    ಒಂದೆಡೆ ಕೃಷಿಗೆ ಕಾಡುಪ್ರಾಣಿಗಳ ಹಾವಳಿಯಿದ್ದರೆ ಇನ್ನೊಂದೆಡೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆಯ ಕಾನೂನು ತೊಡಕುಗಳು ಕಬ್ಬಿನಾಲೆ ಭಾಗದ ಜನರನ್ನು ಕಾಡುತ್ತಿವೆ. ಅನೇಕ ಬಾರಿ ನಕ್ಸಲ್ ಪ್ಯಾಕೇಜ್‌ಗಳು ಬಂದಾಗಲೂ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕಾನೂನುಗಳೇ ತೊಡಕಾಗಿದ್ದವು.

    ಮೂಲ ಸೌಕರ್ಯ ಕೊರತೆ: ಕಬ್ಬಿನಾಲೆ ಸುತ್ತಮುತ್ತ ಹಲವೆಡೆ ಮೂಲ ಸೌಕರ್ಯಗಳಿಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ತೋಡುಗಳಿಗೆ ಸೇತುವೆಯಿಲ್ಲದೆ ಕೃತಕ ಅಡಕೆ ಮರದ ಕಾಲುಸಂಕ ಬಳಸಬೇಕಿದೆ. ಬಸ್ ಸಮಸ್ಯೆಯಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಮಲೆಕುಡಿಯ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದು, ದಾರಿ ದೀಪದ ವ್ಯವಸ್ಥೆ ಇಲ್ಲದೆ, ಕಾಡು ಪ್ರಾಣಿಗಳ ಹಾವಳಿಯಿಂದ ಜೀವದ ಹಂಗು ತೊರೆದು ಬದುಕು ಸಾಗಿಸಬೇಕಿದೆ.

    ಕಬ್ಬಿನಾಲೆಗೆ ಬೇಕಿದೆ ಹೊಸ ಗ್ರಾಪಂ: ಮುದ್ರಾಡಿ ಪಂಚಾಯಿತಿಯಲ್ಲಿ 15 ಸದಸ್ಯರಿದ್ದು, ನಾಲ್ಕು ಜನ ಕಬ್ಬಿನಾಲೆಯನ್ನು ಪ್ರತಿನಿಧಿಸುತ್ತಾರೆ. ಅಭಿವೃದ್ಧಿಗೆ ಬಂದ ಹೆಚ್ಚಿನ ಅನುದಾನ 11 ಸದಸ್ಯರ ಪಾಲಾದರೆ, ಕಬ್ಬಿನಾಲೆ ಭಾಗಕ್ಕೆ ಅನುದಾನ ಕಡಿಮೆಯಾಗುತ್ತದೆ. ಆದ್ದರಿಂದ ಕಬ್ಬಿನಾಲೆಯನ್ನು ಹೊಸ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

    ನೆಟ್‌ವರ್ಕ್ ಸಮಸ್ಯೆ: ಕರೊನಾದಿಂದಾಗಿ ಹೆಚ್ಚಿನ ಉದ್ಯೋಗಿಗಳಿಗೆ ವರ್ಕ್‌ಫ್ರಮ್ ಹೋಮ್ ಮತ್ತು ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಆದರೆ ವಿದ್ಯುತ್ ವ್ಯತ್ಯಯದಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಪದೇ ಪದೆ ಸ್ಥಗಿತಗೊಳ್ಳುತ್ತದೆ. ಇದರಿಂದ ಕೆಲವರು ಒಟ್ಟು ಸೇರಿ ಸ್ವಂತ ಖರ್ಚಿನಲ್ಲಿ ಡೀಸೆಲ್ ನೀಡಿ ಜನರೇಟರ್ ಸಹಾಯದಿಂದ ಬಿಎಸ್‌ಎನ್‌ಎಲ್ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

    ಪೆರಡಬಾಕ್ಯಾರ್‌ನಿಂದ ಮೇಲ್ಮಠದ ತನಕ ಸಮರ್ಪಕ ರಸ್ತೆ ದುರಸ್ತಿಯಾಗಬೇಕಾಗಿದೆ. ಗುಡ್ಡಪ್ರದೇಶವಾದ್ದರಿಂದ ಡಾಂಬರು ರಸ್ತೆಗಿಂತ ಕಾಂಕ್ರೀಟ್ ಹೆಚ್ಚು ಬಾಳಿಕೆ ಬರುತ್ತದೆ. ಇಲ್ಲಿನ ಜನರ ಬಹುದೊಡ್ಡ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
    ಯೋಗೀಶ ಹೆಬ್ಬಾರ್,ಕೃಷಿಕ, ಕುಡುಮಣ್ಣು

    ನಾವು ಮಳೆಗಾಲದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ವಿದ್ಯುತ್, ನೆಟ್‌ವರ್ಕ್, ರಸ್ತೆ ಸಮಸ್ಯೆಯಿಂದಾಗಿ ನಾವೆಲ್ಲ ಜರ್ಜರಿತರಾಗಿದ್ದೇವೆ. ರಾಜಕಾರಣಿಗಳು ಮತದಾನದ ಸಮಯದಲ್ಲಿ ಆಶ್ವಾಸನೆ ಮಾತ್ರ ನೀಡುತ್ತಾರೆ. ದಯವಿಟ್ಟು ಈ ಭಾಗದ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕಿದೆ.
    ರವೀಂದ್ರ ಹೆಬ್ಬಾರ್, ಸ್ಥಳೀಯರು

    ಪಂಚಾಯಿತಿಯ ವಿಶೇಷ ಮುತುವರ್ಜಿಯಿಂದ ಮೇಲ್ಮಠ ರಸ್ತೆಗೆ ಟೆಂಡರ್ ಆಗಿದ್ದು, ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಇರುವ ಕಾರಣದಿಂದ ಕೆಲಸ ಕಾರ್ಯಗಳು ಆರಂಭವಾಗಿಲ್ಲ. ನೀರಾಣಿಯಿಂದ ಪೆರಡಬಾಕ್ಯಾರ್ ತನಕ ಜಿಲ್ಲಾ ಪಂಚಾಯಿತಿ ಯೋಜನೆಯಲ್ಲಿ ಮತ್ತು ಪೆರಡಬಾಕ್ಯಾರ್‌ನಿಂದ ಮೇಲ್ಮಠದ ತನಕ ಶಾಸಕರ ಅನುದಾನ ಬಿಡುಗಡೆಯಾಗಿದೆ.
    ಮಂಜುನಾಥ್ ಹೆಗ್ಡೆ, ಅಧ್ಯಕ್ಷರು ಮುದ್ರಾಡಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts