More

    ‘ಜನರಿಗಾಗಿ ರಸ್ತೆ’ ಕಾಮಗಾರಿ ಶೀಘ್ರವೇ ಶುರು

    ಹುಬ್ಬಳ್ಳಿ: ವಾಹನಗಳಿಗಾಗಿ ಮಾತ್ರ ರಸ್ತೆ ಎನ್ನುವುದು ಎಲ್ಲರ ಭಾವನೆ. ಆದರೆ, ಇದೊಂದು ಹೊಸ ಯೋಜನೆ. ಜನರಿಗಾಗಿ ರಸ್ತೆ ಎಂಬ ನೂತನ ಪರಿಕಲ್ಪನೆಯನ್ನು ನವನಗರದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

    ಬಿಆರ್​ಟಿಎಸ್​ನ ಸ್ಟ್ರೀಟ್ ಫಾರ್ ಪೀಪಲ್ ಯೋಜನೆಯನ್ವಯ ಇಲ್ಲಿಯ ನವನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ‘ಓಪನ್ ಸ್ಟ್ರೀಟ್ ಕ್ಯಾಂಪೇನ್’ ಎಂಬುದು ಎಂಬಾರ್ಕ್ ಸಂಸ್ಥೆಯ ಕಲ್ಪನೆ. ಅದನ್ನು ಮೊದಲು ಧಾರವಾಡದ ಟೋಲ್​ನಾಕಾದಿಂದ ನುಗ್ಗಿಕೇರಿವರೆಗೆ ನಿರ್ವಿುಸುವ ಉದ್ದೇಶ ಇತ್ತು. ಆದರೆ, ಅದಕ್ಕಿಂತ ಮೊದಲು ನವನಗರದಲ್ಲಿ ಜಾರಿಯಾಗಲಿದೆ. ಶೀಘ್ರದಲ್ಲೇ ಕೆಲಸ ಶುರುವಾಗಲಿದೆ ಎಂದರು.

    ಇಡಿ ದೇಶದಲ್ಲಿ ನಗರದ ರಸ್ತೆಗಳು ಹೇಗಿರಬೇಕೆಂಬ ಮಾರ್ಗದರ್ಶಿ ಇಲ್ಲ. ಮೊದಲ ಬಾರಿ ಹುಬ್ಬಳ್ಳಿಯಲ್ಲಿ ಟೆಂಡರ್ ಶ್ಯೂರ್ ಕಂಪನಿ ಮಾದರಿ ರಸ್ತೆ ನಿರ್ವಿುಸಿದೆ. ಅದೇ ಮಾದರಿಯಲ್ಲಿ ಇನ್ನಷ್ಟು ವಿಶೇಷತೆಗಳೊಂದಿಗೆ ವಾಹನ ಸಂಚಾರ ಮುಕ್ತ, ಕೇವಲ ಜನರಿಗಾಗಿ ರಸ್ತೆ ಮಾಡಲಾಗುತ್ತಿದ್ದು, ಬಿಆರ್​ಟಿಎಸ್ 16 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಯೋಜನೆಯ ನೀಲಿನಕ್ಷೆ ಸಿದ್ಧಪಡಿಸಿ ಪಾಲಿಕೆ ಸಹಭಾಗಿತ್ವದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ ಕೊಡಿಸಲಾಗುವುದು ಎಂದರು.

    ಬಿಆರ್​ಟಿಎಸ್ ಎಂ.ಡಿ. ಕೃಷ್ಣ ಬಾಜಪೇಯಿ ಮಾತನಾಡಿ, ಉದ್ಯಾನ, ಫುಟ್​ಪಾತ್, ಮಕ್ಕಳ ಆಟಿಕೆ, ಸೈಕಲ್ ಪಾಥ್, ಕ್ರೀಡಾ ಚಟುವಟಿಕೆಗೆ ಜಾಗ ಸೇರಿ ವಿವಿಧ ಕೆಲಸಗಳು ನಡೆಯಲಿವೆ ಎಂದರು.

    ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಪೊಲೀಸ್ ಆಯುಕ್ತ ಲಾಬುರಾಮ, ಪಾಲಿಕೆ ಮಾಜಿ ಉಪಮೇಯರ್ ಚಂದ್ರಶೇಖರ ಮನಗುಂಡಿ, ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ವಲಯ ಕಚೇರಿ 4ರ ಸಹಾಯಕ ಆಯುಕ್ತ ರಮೇಶ ನೂಲ್ವಿ, ಸ್ಥಳೀಯ ಕರ್ನಾಟಕ ಸಂಘದ ಸ್ವಾಮಿ ಮಹಾಜನಶೆಟ್ಟರ, ಸಂತೋಷ ಸೋಗಿ, ಬಿಆರ್​ಟಿಎಸ್ ಡಿಜಿಎಂ ಬಸವರಾಜ ಕೆರಿ, ಪಿಆರ್​ಒ ಮಂಜುನಾಥ ಜಡೇನವರ, ಇತರರು ಇದ್ದರು.

    ಮಕ್ಕಳಿಂದ ವಿವಿಧ ಆಟ

    ಮಕ್ಕಳು, ಹಿರಿಯರು, ಮಹಿಳೆಯರು ಹೀಗೆ ಎಲ್ಲರೂ ತಮ್ಮದೇ ಆದ ಶೈಲಿಯಲ್ಲಿ ಸಮಯ ಕಳೆಯಬಹುದಾದ ಈ ‘ಜನರಿಗಾಗಿ ರಸೆ’ಯಲ್ಲಿ ಪ್ರಾಯೋಗಿಕವಾಗಿ ನವನಗರದ ಈಶ್ವರ ದೇವಸ್ಥಾನ ರಸ್ತೆಯಲ್ಲಿ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ರಸ್ತೆಯನ್ನು ಸಂಪೂರ್ಣ ವಾಹನಮುಕ್ತಗೊಳಿಸಲಾಗಿತ್ತು. ಲೂಡೊ, ಬಮ್ಸಿ, ತೊಟ್ಟಿಲು, ಜಂಪಿಂಗ್, ಹಾವು ಮತ್ತು ಏಣಿ ಆಟಗಳು ನಡೆದವು. ಕೆಲವರು ಏಕಪಾತ್ರಾಭಿನಯ, ಭರತನಾಟ್ಯ, ಯೋಗಾಸನಗಳನ್ನು ಪ್ರದರ್ಶಿಸಿದರು. ರಸ್ತೆಯುದ್ದಕ್ಕೂ ಬಿಡಿಸಿದ ರಂಗೋಲಿ, ಗೊಂಬೆ ಕುಣಿತ, ದಾಲಪಟಾ ಕಲಾವಿದರ ಪ್ರದರ್ಶನಗಳು ಗಮನ ಸೆಳೆದವು.

    ರಸ್ತೆಯಲ್ಲಿ ಏನೇನಿರಲಿವೆ?

    ‘ಜನರಿಗಾಗಿ ರಸ್ತೆ’ಯಲ್ಲಿ ವಾಹನ ಸಂಚಾರ ನಿಷಿದ್ಧ. ಯೋಗ, ಏರೋಬಿಕ್ಸ, ಜುಂಬಾ, ಕ್ರೀಡಾಕೂಟ, ಸಂಗೀತ, ನೃತ್ಯ, ಕಲೆ, ಸೈಕ್ಲಿಂಗ್, ಸಮಾಜಮುಖಿ ಮತ್ತು ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ. ಕೋವಿಡ್ ನಿಯಮ ಪಾಲನೆಗೂ ಇಲ್ಲಿ ಒತ್ತು ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts