More

    ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಸಮಸ್ಯೆ

    ಬಂಟ್ವಾಳ: ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದು ವಿಳಂಬಕ್ಕೆ ಕಾರಣವಾಗುತ್ತಿದೆ.

    19.85 ಕಿ.ಮೀ. ಉದ್ದದ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆಯೇ ಕೈಗೆತ್ತಿಕೊಳ್ಳಲಾಗಿದೆ. ಎಲ್ಲವೂ ಅಂದುಕೊಂಡತೆ ನಡೆದಿದ್ದರೆ ಕಳೆದ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವ ಪ್ರದೇಶದಲ್ಲಿ ಕಾಮಗಾರಿ ಪ್ರಾಥಮಿಕ ಹಂತದಲ್ಲೇ ಉಳಿಯುವಂತಾಗಿದೆ.

    ಬಂಟ್ವಾಳ ಬೈಪಾಸ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯದೇ ಇರುವುದರಿಂದ ಆ ಭಾಗದಲ್ಲಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಪ್ರಕ್ರಿಯೆಗಳು ಬೆಂಗಳೂರಿನಲ್ಲೇ ನಡೆಯುವುದರಿಂದ ಬೈಪಾಸ್ ಭಾಗಕ್ಕೆ ಕಳೆದ ಕೆಲವು ದಿನಗಳ ಹಿಂದೆ ವಿಶೇಷ ಭೂಸ್ವಾಧೀನಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ಭಾಗದ ಭೂಸ್ವಾಧೀನದ ಗೊಂದಲಗಳು ಪೂರ್ಣಗೊಂಡಿದ್ದು, ಕಾಮಗಾರಿ ಮುಂದುವರಿಸಬಹುದಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

    ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗಿನ 19.85 ಕಿ.ಮೀ. ಹೆದ್ದಾರಿಯಲ್ಲಿ ಜಕ್ರಿಬೆಟ್ಟಿನಿಂದ ಪುಂಜಾಲಕಟ್ಟೆವರೆಗೆ 16 ಕಿ.ಮೀ. ಡಾಂಬರು ರಸ್ತೆ ನಿರ್ಮಾಣವಾಗಲಿದ್ದು, ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಒಟ್ಟು ಕಾಮಗಾರಿಯಲ್ಲಿ 17 ಕಿ.ಮೀ. ಹೆದ್ದಾರಿ ಬಹುತೇಕ ಪೂರ್ಣಗೊಂಡಿದ್ದು, 2.50 ಕಿ.ಮೀ.ನಷ್ಟು ಕಾಮಗಾರಿ ವಿಳಂಬವಾಗಿದೆ.

    ಮೇ ತಿಂಗಳ ಅಂತ್ಯಕ್ಕೆ ಬಹುತೇಕ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಕುರಿತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ಪಾವತಿಯಾಗದೆ ಇದ್ದರೂ, ಜನರ ಮನವೊಲಿಸಿ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಹೇಳುತ್ತಾರೆ.

    ಎಂಆರ್‌ಪಿಎಲ್ ಪೈಪ್‌ಲೈನ್ ಶಿಫ್ಟಿಂಗ್: ಹೆದ್ದಾರಿ ಕಾಮಗಾರಿಯ ಜತೆಗೆ ಹೆದ್ದಾರಿ ವಿಸ್ತಾರಗೊಳ್ಳುವ ಪ್ರದೇಶದಲ್ಲಿ ಎಂಆರ್‌ಪಿಎಲ್ ಪೈಪ್‌ಲೈನ್ ಸ್ಥಳಾಂತರ(ಶಿಫ್ಟಿಂಗ್) ಕಾಮಗಾರಿ ನಡೆಯುತ್ತಿದೆ. ಆದರೆ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳದೆ ಹಿಂದಿನ ಪೈಪ್‌ಲೈನ್ ತೆರವು ಮಾಡುವಂತಿಲ್ಲ. ಹೀಗಾಗಿ 2-3 ಕಡೆಗಳಲ್ಲಿ ಕಾಮಗಾರಿ ಮುಂದುವರಿಸುವುದು ಸಾಧ್ಯವಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
    ಸ್ಥಳಾಂತರಕ್ಕೆ ಉದ್ದೇಶಿತ ಪ್ರದೇಶಗಳಲ್ಲಿ ಬೃಹತ್ ಬಂಡೆ ಕಲ್ಲುಗಳಿದ್ದು, ಪಕ್ಕದಲ್ಲೇ ಮನೆಗಳಿರುವುದರಿಂದ ಸ್ಫೋಟಕಗಳನ್ನಿಟ್ಟು ಏಕಾಏಕಿ ಅದನ್ನು ಹುಡಿ ಮಾಡುವಂತಿಲ್ಲ. ಬಹಳ ಎಚ್ಚರಿಕೆಯಿಂದ ನಿಧಾನಗತಿಯಲ್ಲಿ ತೆರವು ಕಾರ್ಯ ಮಾಡಬೇಕಿದೆ. ಹೀಗಾಗಿ ಒಂದಷ್ಟು ಕಡೆಗಳಲ್ಲಿ ಈ ರೀತಿಯಲ್ಲಿ ಕಾಮಗಾರಿ ವಿಳಂಬವಾಗಿದೆ ಎನ್ನಲಾಗಿದೆ.

    ಮೂಡುಬಿದಿರೆ ಕ್ರಾಸ್ ಬಂಟ್ವಾಳ ಬೈಪಾಸ್ ಭಾಗಕ್ಕೆ ಈಗಾಗಲೇ ವಿಶೇಷ ಭೂಸ್ವಾಧೀನಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದು ಬದಿಯಲ್ಲಿ ಕ್ಲಿಯರ್ ಆಗಿದೆ. ಆದರೆ ಇನ್ನೊಂದು ಬದಿಯಲ್ಲಿ ಯಾವುದೋ ಕಾರಣಕ್ಕೆ ಕ್ಲಿಯರ್ ಆಗಿಲ್ಲ. ಪ್ರಸ್ತುತ ಅದರ ಹಿಂದೆಯೇ ಇದ್ದು ಕೆಲಸ ಮಾಡುತ್ತಿದ್ದೇವೆ. ಎಂಆರ್‌ಪಿಎಲ್ ಪೈಪ್‌ಲೈನ್ ಶಿಫ್ಟ್ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
    ಕೃಷ್ಣಕುಮಾರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್,
    ರಾ.ಹೆ.ಇಲಾಖೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts