More

    ಬ್ಲಾಕ್ ಮಾಡಿದ್ದ ಸಂಪರ್ಕ ರಸ್ತೆ ತೆರವು, ಭೂ ದಾಹಕ್ಕೆ ಊರಿಗೆ ದಿಗ್ಬಂಧನ

    ತೋಟಬೈಲು: ಅರಣ್ಯ ಭೂಮಿ ಒತ್ತುವರಿ ಮಾಡಿ ಮಂಜೂರು ಮಾಡಿಸಿಕೊಂಡಿದ್ದ ಪ್ರದೇಶದಲ್ಲಿ ತೋಟಬೈಲು ಎಂಬಲ್ಲಿಗೆ ಸಂಪರ್ಕ ರಸ್ತೆಯಿದ್ದರೂ ಅದನ್ನು ಬ್ಲಾಕ್ ಮಾಡಿ ಊರಿಗೆ ದಿಗ್ಬಂಧನ ಹಾಕಿದ್ದನ್ನು ಶುಕ್ರವಾರ ತೆರವು ಮಾಡಲಾಗಿದೆ.

    ತೋಟಬೈಲು ಸಂಪರ್ಕ ರಸ್ತೆ ಬಂದ್ ಹಾಗೂ ಅಕ್ರಮ ಸಕ್ರಮದಲ್ಲಿ ಉಳ್ಳವರು ಜಾಗ ಮಂಜೂರು ಮಾಡಿಕೊಂಡ ಬಗ್ಗೆ ವಿಜಯವಾಣಿ ಅಧಿಕಾರಿಗಳ ಗಮನ ಸೆಳೆದಿತ್ತು. ರಸ್ತೆ ಬಂದ್ ಮಾಡಿದವರು ತೆರವು ಮಾಡುವಂತೆ ಕಂದಾಯ ನಿರೀಕ್ಷಕರು ತಾಕೀತು ಮಾಡಿದ್ದು, ಸ್ಥಳಕ್ಕೆ ಆರ್‌ಐ ಭೇಟಿ ನೀಡಿ ತೆರವಿಗೆ ಸೂಚಿಸಿದ್ದರೂ ಮಾಡಿರಲಿಲ್ಲ. ಗ್ರಾಮ ಪಂಚಾಯಿತಿ ಕೂಡ ನೋಟಿಸ್ ನೀಡಿತ್ತು. ಶುಕ್ರವಾರ ಆರ್‌ಐ ರಾಘವೇಂದ್ರ ಹಾಗೂ ಹಟ್ಟಿಯಂಗಡಿ, ಕಟ್‌ಬೇಲ್ತೂರು ವಿಎ ಭೇಟಿ ನೀಡಿ ಪೊಲೀಸ್ ಸಹಕಾರದಲ್ಲಿ ಬಂದ್ ಮಾಡಿದ ರಸ್ತೆ ತೆರವು ಮಾಡಿ ಊರಿಗೆ ಬಿದ್ದ ದಿಗ್ಬಂಧನ ತೆರವು ಮಾಡಲಾಗಿದೆ.

    ಸರ್ಕಾರ ತಂದ ಅಕ್ರಮ ಸಕ್ರಮ ನಿಯಮ ಉಳ್ಳವರಿಗೆ, ಭೂದಾಹಿಗಳಿಗೆ, ಜನಪ್ರತಿನಿಧಿಗಳ ಬೆಂಬಲಿಗರಿಗೆ, ಅಧಿಕಾರಿಗಳ ಲಂಚಾವತಾರಕ್ಕೆ ಬಲಿಯಾಗುತ್ತಿದ್ದು, ಕುಂದಾಪುರದ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದಲ್ಲಿ ವಿಶಾಲ ಕೆರೆ, ಮರಮಟ್ಟುಗಳಿದ್ದ ಹಾಡಿ ಮಂಜೂರಾಗಿದ್ದು ಇದಕ್ಕೆ ನಿದರ್ಶನ ಎಂದು ಸ್ಥಳೀಯರು ಹೇಳಿದ್ದಾರೆ.

    ತೋಟಬೈಲು ಸರ್ವೇ ನಂ. 4/1ರಲ್ಲಿ 1.16 ಎಕರೆಯಷ್ಟು ಕೆರೆಯಿದೆ. ಈ ಕೆರೆಗೆ ಮಣ್ಣು ತುಂಬಿ ತೆಂಗಿನ ಸಸಿ ನೆಟ್ಟು 48 ಸೆನ್ಸ್ ಜಾಗ 2002ರಲ್ಲಿ ಮಂಜೂರು ಮಾಡಿಕೊಳ್ಳಲಾಗಿದೆ. ಕೆರೆ ಮಂಜೂರು ಮಾಡಿಕೊಂಡವರೇ ಸರ್ವೇ ನಂ. 150/3ಎ (ಕಟ್‌ಬೇಲ್ತೂರು), ಸರ್ವೇ ನಂ. 105 (ಕನ್ಯಾನ ಗ್ರಾಮ)ರಲ್ಲಿ ಅಕ್ರಮ ಸಕ್ರಮದಲ್ಲಿ ಮತ್ತೆ ಮಂಜೂರು ಮಾಡಿಕೊಂಡಿದ್ದಾರೆ. ಒಬ್ಬರಿಗೆ ಎರಡೆರಡು ಬಾರಿ ಜಾಗ ಮಂಜೂರಾತಿಗೆ ಅವಕಾಶ ಇಲ್ಲದಿದ್ದರೂ ಇಲ್ಲಿ ಜಾಗ ಮಂಜೂರಾಗಿದೆ. ಕೆರೆ ತೆರವು ಮಾಡಿ, ಮಂಜೂರಾದ ಹಾಡಿಯ ದಾಖಲೆ ರದ್ದು ಮಾಡಿ ಹಿಂದಕ್ಕೆ ಪಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಅಕ್ರಮ ನಡೆದ ಬಗ್ಗೆ ಎಸಿ ಕಚೇರಿಯಲ್ಲಿ ಅಪೀಲ್ ಮಾಡಿದರೆ ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ ಮಂಜೂರಾದ ಜಾಗ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿದರೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
    -ಕೆ.ರಾಜು ಎಸಿ ಕುಂದಾಪುರ

    ಕೆರೆ ಒತ್ತುವರಿ ತೆರವು ಮಾಡಿ, ಅಕ್ರಮ ಸಕ್ರಮದಲ್ಲಿ ಮಂಜೂರಾದ ಅರಣ್ಯ ಭೂಮಿ ಹಿಂದಕ್ಕೆ ಪಡೆಯಬೇಕು. ಗ್ರಾಪಂ ಅನುದಾನದಲ್ಲಿ ನಿರ್ಮಿಸಿದ ರಸ್ತೆ ಬಂದ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಡಿಸಿಗೂ ದೂರು ನೀಡಲಾಗಿದೆ.
    -ಗುರುರಾಜ್, ತೋಟಬೈಲು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts