More

    ಬೈಪಾಸ್‌ಗೆ ವಿರೋಧವಿಲ್ಲ, ಅಂಡರ್‌ಪಾಸ್ ನಿರ್ಮಿಸಿ ; ಹಳೇಪಾಳ್ಯ ನಿವಾಸಿಗಳಿಗೆ ಎಸ್ಪಿಎಂ ಬೆಂಬಲ ಎನ್‌ಎಚ್‌ಎಐ ಅಧಿಕಾರಿಗೆ ಮನವಿ

    ತುಮಕೂರು : ತಿಪಟೂರು ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣದಿಂದ ಹಳೇಪಾಳ್ಯ ನಿವಾಸಿಗಳಿಗೆ ನಗರ ಸಂಪರ್ಕಿಸಲು ತೊಂದರೆಯಾಗಿದ್ದು ಅಂಡರ್‌ಪಾಸ್ ನಿರ್ಮಿಸಿಕೊಡಬೇಕೆಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಸಿರಿಶ್ ಗಂಗಾಧರ್‌ಗೆ ಮನವಿ ಮಾಡಿದರು.

    ಹಳೇಪಾಳ್ಯದಲ್ಲಿ ಕಳೆದ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳ ಜತೆ ಶುಕ್ರವಾರ ತುಮಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗೆ ಮನವಿ ನೀಡಿದ ಮುದ್ದಹನುಮೇಗೌಡ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕೆಂದು ಒತ್ತಾಯಿಸಿದರು.

    ಬೈಪಾಸ್ ರಸ್ತೆಯಿಂದ ಸ್ಥಳೀಯರಿಗೆ ಲಾಭವಾಗುವುದಿಲ್ಲ. ಆದರೂ, ಯೋಜನೆಗೆ ಜನ ವಿರೋಧ ಮಾಡಿಲ್ಲ, ಆದರೆ, ಅವರು ರಸ್ತೆ ದಾಟಲು ಅನುಕೂಲವಾಗುವಂತೆ 8 ಅಡಿ ಅಗಲದ ಅಂಡರ್‌ಪಾಸ್ ಅವರ ಬೇಡಿಕೆಯಾಗಿದೆ ಎಂದರು.

    ಹಳೇಪಾಳ್ಯ, ಕೆಂಚರಾಯನಗರ ಭಾಗದ 30ಕ್ಕೂ ಹೆಚ್ಚು ಜನರು ತಿಪಟೂರು ನಗರದಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸಿಕೊಂಡು ಬದುಕು ಕಂಡುಕೊಂಡಿದ್ದಾರೆ. ಬೈಪಾಸ್ ನಿರ್ಮಾಣದಿಂದ ಹಳೇಪಾಳ್ಯದ ಜನರು ರಸ್ತೆ ದಾಟಲು ಸರ್ವಿಸ್ ರಸ್ತೆಯಲ್ಲಿ 1 ಕಿಮೀ ದೂರ ಬಳಸಿಕೊಂಡು ಬರಬೇಕು ಎಂದು ಎಸ್ಪಿಎಂ ಗಮನ ಸೆಳೆದರು.

    ಹೆದ್ದಾರಿ ಪ್ರಾಧಿಕಾರ ಲಾಭದ ದೃಷ್ಟಿಯಲ್ಲಿ ನೋಡದೇ ಜನರ ಭಾವನೆಗಳನ್ನು ಗೌರವಿಸುವ ಮೂಲಕ ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು, ಸ್ಥಳೀಯರು ಅಸ್ತಿತ್ವ ಉಳಿಸಿಕೊಳ್ಳಲು ಪಕ್ಷಾತೀತವಾಗಿ 9 ದಿನಗಳಿಂದ ಧರಣಿ ನಡೆಸುತ್ತಿದ್ದು ಮಹಿಳೆಯರೂ ಬೀದಿಗೆ ಬಂದು ಕುಳಿತಿರುವುದು ಆಡಳಿತ ನಡೆಸುವವರಿಗೆ ಒಳ್ಳೆಯದಲ್ಲ ಎಂದು ಎಚ್ಚರಿಸಿದರು. ಮುಖಂಡ ಸಿ.ಬಿ.ಶಶಿಧರ್, ಜಿಲ್ಲಾ ರೈತ ಕೃಷಿ ಕಾರ್ಮಿಕ ಸಂಘದ ಸಂಚಾಲಕ ಸ್ವಾಮಿ ಇದ್ದರು.

    ಬೈಪಾಸ್ ನಿರ್ಮಾಣಕ್ಕೆ ಹಳೇಪಾಳ್ಯ ನಿವಾಸಿಗಳ ವಿರೋಧವಿಲ್ಲ. ಆದರೆ, ತಿಪಟೂರು ನಗರಕ್ಕೆ ಬರಲು ಅಗತ್ಯವಾದ ಅಂಡರ್‌ಪಾಸ್ ನಿರ್ಮಿಸಿಕೊಡಿ ಎಂಬುದಷ್ಟೇ ಅವರ ಬೇಡಿಕೆ. ಕಳೆದ 9 ದಿನಗಳಿಂದ ಜನರು ಬೀದಿಯಲ್ಲಿ ಕುಳಿತು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ನಾನೂ ಭೇಟಿ ನೀಡಿ ಸಮಸ್ಯೆ ಆಲಿಸಿ, ಸ್ಥಳೀಯರ ಪರವಾಗಿ ಎನ್‌ಎಚ್‌ಎಐ ಅಧಿಕಾರಿಗೆ ಮನವಿ ಮಾಡಿದ್ದೇನೆ.
    ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts