More

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಘಟಕಗಳಿಗೂ ಹಾಹಾಕಾರ!

    ಚಿಕ್ಕಬಳ್ಳಾಪುರ: ದಿನೇದಿನೆ ಮತ್ತಷ್ಟು ಕುಸಿಯುತ್ತಿರುವ ಅಂತರ್ಜಲ ಮಟ್ಟ, ನಿರಂತರವಾಗಿ ಕೊಳವೆ ಬಾವಿಗಳು ಕೈಕೊಡುತ್ತಿರುವುದರಿಂದ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿಗೂ ಹಾಹಾಕಾರ ಎದುರಾಗಿದೆ…!

    ಜೀವಕ್ಕೆ ಕಂಟಕವಾಗಿರುವ ಫ್ಲೋರೈಡ್, ನೈಟ್ರೇಟ್ ಸೇರಿ ನಾನಾ ಲವಣಾಂಶಗಳು ಮಿತಿ ಮೀರಿದ ಪ್ರಮಾಣದಲ್ಲಿರುವ ನೀರನ್ನು ಸೇವಿಸಿ ಜನರು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಜಿಲ್ಲೆಯ ಹಲವೆಡೆ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಇವುಗಳಿಗೆ ನೀರಿನ ಅಭಾವ ಎದುರಾಗಿದೆ, ಬೆಳಗ್ಗೆಯಿಂದ ಸಂಜೆಯವರೆಗೂ ಕಾರ್ಯನಿರ್ವಹಿಸುತ್ತಿದ್ದ ಘಟಕಗಳಲ್ಲಿ ಬೆಳಗ್ಗೆ ಮತ್ತು ಸಂಜೆ ತಲಾ 3 ತಾಸು ನೀರು ಪೂರೈಕೆಗೆ ಅವಧಿ ನಿಗದಿಯಾಗಿದೆ.
    ಜಿಲ್ಲೆಯಲ್ಲಿ 15 ಘಟಕಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ. ಆದರೆ, ಬಹುತೇಕ ಎಲ್ಲ ಘಟಕಗಳಿಗೂ ಹಾಹಾಕಾರ ಶುರುವಾಗಿದೆ.

    ಮಳೆ ಮತ್ತು ಕೆರೆ, ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿರುವ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಕನಿಷ್ಠ 1,100 ರಿಂದ 1,500 ಅಡಿ ಆಳದವರೆಗೆ ಕೊಳವೆ ಬಾವಿ ಕೊರೆದರೂ ಜೀವಜಲ ಸಿಗದಂತಾಗಿದೆ. ಜತೆಗೆ ನೀರು ಲಭ್ಯವಿರುವ ಕೊಳವೆ ಬಾವಿಗಳು ದಿನ ಕಳೆದಂತೆ ಬತ್ತುತ್ತಿರುವುದು ಬಿರು ಬೇಸಿಗೆಯ ದಿನಗಳು ಮತ್ತಷ್ಟು ಕಠಿಣವಾಗುವ ಆತಂಕ ಎದುರಾಗಿದ್ದು ಪರಿಸ್ಥಿತಿ ನಿಭಾಯಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

    665 ಘಟಕಗಳ ಸ್ಥಾಪನೆ: ಜಿಲ್ಲೆಗೆ 787 ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಮಂಜೂರಾಗಿದ್ದು ಇದರಲ್ಲಿ 665 ಕಾರ್ಯನಿರ್ವಹಿಸುತ್ತಿವೆ. ಸ್ಥಳದ ಸಮಸ್ಯೆ, ಟೆಂಡರ್ ವಿಳಂಬ ಸೇರಿ ನಾನಾ ಕಾರಣಗಳಿಂದ 110 ಘಟಕಗಳ ಸ್ಥಾಪನೆಗೆ ಮುಹೂರ್ತವೇ ಸಿಕ್ಕಿಲ್ಲ. ಇದರ ನಡುವೆಯೂ ನಿರ್ಮಾಣವಾದ 62 ಘಟಕಗಳು ಅಧಿಕಾರಿಗಳ ನಿರ್ಲಕ್ಷೃದಿಂದ ನಿಷ್ಕ್ರಿಯಗೊಂಡಿವೆ. ಕೊಳವೆ ಬಾವಿಗೆ ಪಂಪ್ ಮೋಟಾರ್ ಅಳವಡಿಕೆ, ಪೈಪ್‌ಲೈನ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ನಿರ್ವಹಣೆಯ ಕೊರತೆ, ದುರಸ್ತಿಗೆ ವಿಳಂಬ ಮಾಡುತ್ತಿರುವುದರಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ಘಟಕಗಳು, ಒಳಗಿನ ಯಂತ್ರೋಪಕರಣಗಳು ತುಕ್ಕುಹಿಡಿಯುತ್ತಿವೆ.

    ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆ, ಕಾಲಕಾಲಕ್ಕೆ ಸಮಸ್ಯೆ ಪರಿಹಾರ, ಶುದ್ಧ ನೀರಿನ ಪೂರೈಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷ

    ನೀರು ವ್ಯರ್ಥದ ಆತಂಕ: ಘಟಕಕ್ಕೆ ಪೂರೈಕೆಯಾಗುವ ಕಚ್ಚಾ ನೀರಿನ ಪ್ರಮಾಣದಲ್ಲಿ ಶೇ.40 ರಷ್ಟು ನೀರು ಶುದ್ಧೀಕರಣದ ಸಂದರ್ಭದಲ್ಲಿ ಪೋಲಾಗುತ್ತದೆ. ಮೊದಲೇ ಎಲ್ಲೆಡೆ ನೀರಿಗೆ ಹಾಹಾಕಾರ ಇದೆ. ಇದರಿಂದಾಗಿ ನೀರನ್ನು ಏಕೆ ವ್ಯರ್ಥ ಮಾಡಬೇಕೆಂಬ ಮನೋಭಾವನೆಯಲ್ಲಿರುವ ಅಧಿಕಾರಿಗಳು, ಅನೇಕ ಕಡೆ ಶುದ್ಧೀಕರಿಸದೇ ಕೊಳವೆ ಬಾವಿಗಳಿಂದ ನೇರವಾಗಿ ನೀರು ಪೂರೈಸುತ್ತಿದ್ದಾರೆ. ಪ್ರಶ್ನಿಸಿದರೆ ಕೊಳವೆಬಾವಿಗಳ ವೈಲ್ಯ, ವಿದ್ಯುತ್ ಪೂರೈಕೆ ಸ್ಥಗಿತದ ಸಿದ್ಧ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಘಟಕಗಳಲ್ಲಿ ಒಬ್ಬರಿಗೆ ನಾಲ್ಕೈದು ಬಿಂದಿಗೆಗಳ ಬದಲಿಗೆ ಎರಡು ಬಿಂದಿಗೆ ನೀರು ನೀಡಿ ಕಳುಹಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಕ್ಯಾನುಗಳನ್ನು ಹಿಡಿದುಕೊಂಡು ಘಟಕಗಳ ಎದುರು ಜನರು ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ.

    ಜಿಲ್ಲೆಯ ಹಲವು ಕಡೆ, ಅದರಲ್ಲೂ ಚಿಂತಾಮಣಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಮುಕ್ಕಾಲು ಭಾಗ ಶುದ್ಧೀಕರಣ ಘಟಕದಲ್ಲಿ ನೀರು ಪೋಲಾಗುವುದನ್ನರಿತು ಕೆಲ ಗ್ರಾಮಗಳಲ್ಲಿ ಕೊಳವೆಬಾವಿಗಳಿಂದ ನೇರವಾಗಿ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಘಟಕಗಳಲ್ಲಿ ಅಭಾವ ಇನ್ನೂ ಹೆಚ್ಚಾಗಲಿದೆ.
    ಶಿವಕುಮಾರ್, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts