More

    ಶಿರಿಯ ಅಣೆಕಟ್ಟಿನಲ್ಲಿ ಅಪಾಯಕಾರಿ ನೀರಾಟ

    ಪುರುಷೋತ್ತಮ ಪೆರ್ಲ ಕಾಸರಗೋಡು
    ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಮೂಲೆಗುಂಪಾಗುತ್ತಿರುವ ಶಿರಿಯ ಅಣೆಕಟ್ಟು ಏಕಾಏಕಿ ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿದೆ. ಕೋವಿಡ್ -19ನಿಂದ ಎದುರಾದ ಲಾಕ್‌ಡೌನ್‌ನಿಂದ ದೂರ ಸಂಚರಿಸಲಾಗದ ಹಲವಾರು ಜನ ಶಿರಿಯ ಅಣೆಕಟ್ಟು ಪ್ರದೇಶಕ್ಕೆ ಆಗಮಿಸಿ ನೀರಿನ ಭೋರ್ಗರೆತದ ಸವಿ ಅನುಭವಿಸುತ್ತಿರುವ ಮಧ್ಯೆಯೇ ಕೆಲವರು ಅಪಾಯಕಾರಿಯಾಗಿ ನೀರಾಟದಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಅಣೆಕಟ್ಟಿನ ಮೇಲ್ಭಾಗದಿಂದ ಕೆಲವರು ಹೊಳೆಗೆ ಧುಮುಕುವ ಮೂಲಕ ಸಾಹಸ ಪ್ರದರ್ಶಿಸುತ್ತಿದ್ದಾರೆ. ಅಪಾಯಕಾರಿಯಾಗಿ ನೀರಿನಲ್ಲಿ ಆಟವಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೆಲವು ಯುವಕರ ಮೋಜಿನಾಟ ನೋಡಲೆಂದೇ ಕೆಲವೊಮ್ಮೆ ಜನ ಸೇರುತ್ತಾರೆ ಎಂಬುದು ಸ್ಥಳೀಯರು ಗಮನಿಸಿರುವ ಅಂಶ. ಇಲ್ಲಿಗೆ ಆಗಮಿಸುತ್ತಿರುವವರಿಗೆ ಆಹಾರ ಪೂರೈಸಲೆಂದು ಮಿನಿ ಸ್ಟಾಲ್‌ಗಳು ನಿರ್ಮಾಣವಾಗಿದೆ. ಹೊಳೆಯಿಂದ ನಾಲೆ ಮೂಲಕ ಹರಿದು ಬರುವ ನೀರಿನಲ್ಲಿ ಕೆಲವು ಮಿನಿ ಸ್ಟಾಲ್‌ಗಳ ಕೋಳಿ ಮಾಂಸ ಇತ್ಯಾದಿ ಆಹಾರ ಪದಾರ್ಥಗಳನ್ನು ಶುಚಿಗೊಳಿಸಲಾಗುತ್ತಿದೆ. ಆರೋಗ್ಯ ಅಥವಾ ಮಾರಾಟ ಪರವಾನಗಿಯಿಲ್ಲದೆ ಇಲ್ಲಿ ವ್ಯಾಪಾರ ಮಾಡುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂಬ ಆರೋಪವಿದೆ. ರಸ್ತೆ ಅಭಿವೃದ್ಧಿಯೊಂದಿಗೆ ಅಣೆಕಟ್ಟು ಪ್ರದೇಶವನ್ನು ಪ್ರವಾಸಿ ತಾಣವಾಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

    ಮಾದಕ ಪದಾರ್ಥ ಪೂರೈಕೆ?: ದಿನದಿಂದ ದಿನಕ್ಕೆ ಶಿರಿಯ ಅಣೆಕಟ್ಟು ವೀಕ್ಷಣೆಗೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಮಾದಕ ದ್ರವ್ಯಗಳ ಪೂರೈಕೆಯಾಗುತ್ತಿರುವ ಬಗ್ಗೆಯೂ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತಂಬಾಕು ಉತ್ಪನ್ನಗಳೂ ಬಿಕರಿಯಾಗುತ್ತಿದ್ದು, ಹೊಳೆ ದಡ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿದೆ.

    ಅಭಿವೃದ್ಧಿಗಿಲ್ಲ ಯೋಜನೆ: ಸ್ವಾತಂತ್ರೊೃೀತ್ತರ ಭಾರತದ ಮದ್ರಾಸ್ ಸಂಸ್ಥಾನ 1951ರಲ್ಲಿ ನಿರ್ಮಿಸಿರುವ ಈ ಕಿರು ಅಣೆಕಟ್ಟು ಒಡಲಲ್ಲಿ ಭರಪೂರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದರೂ ನಿರ್ವಹಣೆ ಕೊರತೆಯಿಂದ ರೈತರಿಗೆ ಪ್ರಯೋಜನವಿಲ್ಲದ ಸ್ಥಿತಿಯಲ್ಲಿದೆ. ಹಿಂದೆ ಅಣೆಕಟ್ಟಿಗೆ ಕಾಲುವೆ ನಿರ್ಮಿಸಿ ದೇರಡ್ಕ, ಅಂಗಡಿಮೊಗರು, ಬಾಡೂರು, ಖತೀಬ್‌ನಗರದವರೆಗೂ ಬೇಸಿಗೆಯಲ್ಲಿ ಕೃಷಿ ಭೂಮಿಗೆ ನೀರು ಹರಿಸಲಾಗುತ್ತಿದ್ದರೆ, ಇಂದು ಕಾಲುವೆಗಳ ಶಿಥಿಲಾವಸ್ಥೆಯಿಂದ ನೀರು ಹರಿಯುತ್ತಿಲ್ಲ. ನೂರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಮೂಲಕ ಜಿಲ್ಲೆಗೆ ಅಭಿಮಾನವಾಗಿದ್ದ ಈ ಅಣೆಕಟ್ಟಿನತ್ತ ಸರ್ಕಾರ ಕಣ್ಣೆತ್ತಿಯೂ ನೋಡುತ್ತಿಲ್ಲ. ಸೀತಾಂಗೋಳಿಯಿಂದ ಪುತ್ತಿಗೆ- ಪೆರ್ಲ ಹಾದಿಯಾಗಿ ಸಂಚರಿಸುವ ದಾರಿ ಮಧ್ಯೆ ಮಣಿಯಂಪಾರೆಯಿಂದ ಸೇರಾಜೆ ರಸ್ತೆಯ ಮೂರು ಕಿ.ಮೀ. ದೂರದ ಶಿರಿಯದಲ್ಲಿ ಸೀರೆ ಹೊಳೆಗೆ ಅಡ್ಡ ಕಿರುಅಣೆಕಟ್ಟು ನಿರ್ಮಿಸಲಾಗಿದೆ. ಮಣಿಯಂಪಾರೆಯಿಂದ ಶಿರಿಯ ಮೂಲಕ ಸೇರಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಶಿಥಿಲಾವಸ್ಥೆಯಲ್ಲಿದ್ದು, ವಾಹನ ಸಂಚಾರ ಕಷ್ಟವಾಗಿದೆ. ಇನ್ನು ಶಿರಿಯ ಅಣೆಕಟ್ಟು ಮೇಲ್ಭಾಗದ ಹೊಳೆಯಿಂದ ವ್ಯಾಪಕವಾಗಿ ಅನಧಿಕೃತ ಮರಳು ಸಂಗ್ರಹ ನಡೆಯುತ್ತಿದೆ. ಇದರಿಂದ ಅಣೆಕಟ್ಟಿಗೂ ಅಪಾಯ ಸಾಧ್ಯತೆ ಇದೆ. ಪ್ರತಿದಿನ ಭಾರಿ ಪ್ರಮಾಣದಲ್ಲಿ ಇಲ್ಲಿಂದ ಮರಳು ಸಾಗಾಟ ನಡೆಯುತ್ತಿದ್ದರೂ ಕಂದಾಯ ಅಥವಾ ಪೊಲೀಸ್ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಿರಿಯ ಅಣೆಕಟ್ಟು ಸಮಗ್ರ ಅಭಿವೃದ್ಧಿ ಬಗ್ಗೆ ಕಿರು ನೀರಾವರಿ ಇಲಾಖೆ ಯೋಜನೆ ಸಿದ್ಧಪಡಿಸಲು ತಯಾರಿ ನಡೆಸುತ್ತಿದೆ. ಪ್ರಸಕ್ತ ಅಣೆಕಟ್ಟಿನಿಂದ ನೀರು ಹೊರಬಿಡುವ ಗೇಟ್ ಮ್ಯಾನ್ಯುವಲ್ ಆಗಿದ್ದು, ಇದನ್ನು ಸ್ವಯಂಚಾಲಿತ ಗೇಟುಗಳನ್ನಾಗಿ ಪರಿವರ್ತಿಸುವ ಯೋಜನೆಯಿದೆ. ಪ್ರವಾಸಿ ತಾಣವಾಗಿ ಶಿರಿಯ ಅಣೆಕಟ್ಟು ಪ್ರದೇಶ ಅಭಿವೃದ್ಧಿಗೊಳ್ಳುತ್ತಿರುವುದು ಖುಷಿಯ ವಿಚಾರ. ಈ ಪ್ರದೇಶದಲ್ಲಿ ಅಪಾಯಕಾರಿಯಾಗಿ ನೀರಿನಲ್ಲಿ ಆಟವಾಡುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅನಧಿಕೃತ ವ್ಯಾಪಾರ ನಡೆಯುತ್ತಿದ್ದರೆ ಈ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವರು.
    -ಅರ್ಜುನನ್, ಉಪ ಮಹಾ ಅಭಿಯಂತ, ಸಣ್ಣ ನೀರಾವರಿ ಉಪ ವಿಭಾಗ, ಮಂಜೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts