More

    ‘ರಿಂಗ್ ಚೆಕ್‌ಡ್ಯಾಂ’ಗೆ ಸರ್ಕಾರಿ ಮಾನ್ಯತೆ

    ಮಂಗಳೂರು: ವಿಟ್ಲ ಬಳಿಯ ಕೋಡಪದವಿನ ಕೃಷಿಕ ನಿಟಿಲೆ ಮಹಾಬಲೇಶ್ವರ ಭಟ್ 10 ವರ್ಷ ಹಿಂದೆ ತಮ್ಮ ಜಮೀನಿನ ಅಗತ್ಯಕ್ಕೆ ಆವಿಷ್ಕರಿಸಿದ ಜಲಸಂರಕ್ಷಣೆಯ ತಂತ್ರಜ್ಞಾನ ಕೇರಳದಲ್ಲಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಕರ್ನಾಟಕದಲ್ಲಿಯೂ ಜಾರಿಗೊಳ್ಳುವ ಹಂತದಲ್ಲಿದೆ.
    ಜಲ ಸಂರಕ್ಷಣೆ, ಸಣ್ಣ ವಾಹನಗಳ ಓಡಾಟ ಸಾಧ್ಯವಿರುವ ಮಾರ್ಗ ಹಾಗೂ ಕಾಯಂ ಸೇತುವೆ ಹೀಗೆ ಬಹೂಪಯೋಗಿ ‘ರಿಂಗ್ ಚೆಕ್‌ಡ್ಯಾಂ’ ಭಟ್ಟರು ದಶಕದ ಹಿಂದೆ ಶೋಧಿಸಿದ ತಂತ್ರಜ್ಞಾನ. ಭಟ್ಟರೇ ಹೇಳುವಂತೆ ಈ ಯೋಜನೆ ಜನಪ್ರಿಯವಾಗುವಲ್ಲಿ ಮತ್ತು ಹೊಸ ಸಾಧ್ಯತೆಗಳತ್ತ ಹೊರಳುವಲ್ಲಿ ಜಲತಜ್ಞ ಶ್ರೀಪಡ್ರೆಯವರ ಪಾತ್ರ ಮುಖ್ಯವಾಗಿದೆ.

    ಇದೊಂದು ಸರಳ ತಂತ್ರಜ್ಞಾನ. ಕಾಂಕ್ರೀಟ್ ರಿಂಗ್ ಬಳಸಿ ತೋಡಿಗೆ ಅಡ್ಡಗಟ್ಟ ಹಾಕುವುದರಿಂದ ಮೇಲೆ ದ್ವಿಚಕ್ರ ವಾಹನ, ಆಟೋ ರಿಕ್ಷಾ ಗಳಂತಹ ವಾಹನಗಳ ಓಡಾಟ ಸಾಧ್ಯವಾಗುವುದು. ಮಳೆಗಾಲ ಮುಗಿದ ಬಳಿಕ ಸಿಮೆಂಟ್ ರಿಂಗಿನ ಬಾಯಿಯಲ್ಲಿ ತಗಡು ಶಟರ್‌ಇಳಿಸಿದರೆ ಪರಿಸರದಲ್ಲಿ ತುಂಬಾ ದೂರ ತನಕ ಜಲ ಮಟ್ಟ ವೃದ್ಧಿಯಾಗುತ್ತದೆ.

    ಕಾಸರಗೋಡು ಡೆವಲಪ್‌ಮೆಂಟ್ ಪ್ಯಾಕೇಜ್(ಕೆಡಿಪಿ)ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 3000 ರಿಂಗ್ ಚೆಕ್‌ಡ್ಯಾಂ ಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈ ವರ್ಷ 600 ಕಾಮಗಾರಿಗಳನ್ನು ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. 384 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಡಿಪಿಯ ವಿಶೇಷ ಅಧಿಕಾರಿ ಇ.ಪಿ.ರಾಜ್‌ಮೋಹನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಇದೇ ಸಂದರ್ಭ ಉದ್ಯೋಗ ಖಾತರಿ ಯೋಜನೆಯಡಿ ರಿಂಗ್ ಚೆಕ್‌ಡ್ಯಾಂ ನಿರ್ಮಿಸುವ ಪ್ರಸ್ತಾವನೆಯೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕಾಡೂರು ಗ್ರಾಮ ಪಂಚಾಯಿತಿಯಿಂದ ರಾಜ್ಯಕ್ಕೆ ಕಳುಹಿಸಲಾಗಿದೆ.

    ರಾಜ್ಯ ಮಟ್ಟದಿಂದ ಅನುಮೋದನೆ ದೊರೆತರೆ ಯೋಜನೆ ಅಗತ್ಯ ಪರಿಷ್ಕರಣೆಯೊಂದಿಗೆ ರಾಜ್ಯದಾದ್ಯಂತ ಜಾರಿಗೊಳಿಸಲು ಅವಕಾಶ ಪಡೆಯಲಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಜನರಿಗೆ ಈ ಯೋಜನೆ ಹೆಚ್ಚು ಉಪಯೋಗವಾಗಬಹುದು. ಬ್ರಹ್ಮಾವರ, ಕಾಡೂರು ಭಾಗಗಳಲ್ಲಿ ಯೋಜನೆ ಬಗ್ಗೆ ರೈತರಲ್ಲಿ ಈಗಾಗಲೇ ಜಾಗೃತಿ ಉಂಟಾಗಿದೆ. ಕೆಲ ರೈತರು ತಮ್ಮ ಜಮೀನಿನಲ್ಲಿ ರಿಂಗ್ ಚೆಕ್‌ಡ್ಯಾಂಗಳ ನಿರ್ಮಾಣ ಈಗಾಗಲೇ ಆರಂಭಿಸಿದ್ದಾರೆ ಎಂದು ಕಾಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

    ಅಚಾನಕ್ ಹೊಳೆದ ಯೋಚನೆ: ನನ್ನ ಜಮೀನಿನಲ್ಲಿ ತೋಡು ದಾಟಿ ಅಂಗಳಕ್ಕೆ ಬರಲು ವ್ಯವಸ್ಥೆ ಮಾಡಲು ಹೊರಟಾಗ ಬಂದ ಯೋಚನೆಯಿದು ಎನ್ನುತ್ತಾರೆ ಕೃಷಿಕ ನಿಟಿಲೆ ಮಹಾಬಲೇಶ್ವರ ಭಟ್. ಕಿರು ಸೇತುವೆ ನಿರ್ಮಿಸಲು ಕನಿಷ್ಠ 1.5 ಲಕ್ಷ ರೂ. ಅಗತ್ಯವಿದೆ ಎಂದು ಇಂಜಿನಿಯರ್‌ಗಳು ಹೇಳಿದರು. ಪರ್ಯಾಯ ಮಾರ್ಗ ಹುಡುಕಿದಾಗ ಈ ಯೋಜನೆ ಮನಸ್ಸಿನಲ್ಲಿ ಹೊಳೆಯಿತು. 36,000 ಖರ್ಚು ಆಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts