More

    ಉಳ್ಳವರಿಗೆ ಪಡಿತರ ಕಿಟ್, ಹಾಲು ವಿತರಣೆ ಆರೋಪ, ಸಂಡೂರು ಪುರಸಭೆ ಕಚೇರಿಗೆ ಮಹಿಳೆಯರ ಮುತ್ತಿಗೆ

    ಸಂಡೂರು: ಪಡಿತರ ಕಿಟ್ ಹಾಗೂ ಹಾಲಿನ ಪ್ಯಾಕೇಟ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಧ ವಾರ್ಡ್‌ಗಳ ಮಹಿಳೆಯರು ಸೋಮವಾರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಗಣಿ ಕಂಪನಿಗಳು ನೀಡಿದ ಪಡಿತರ ಕಿಟ್ ಹಾಗೂ ಹಾಲಿನ ಪ್ಯಾಕೇಟ್ ಅನ್ನು ಕೆಲವರಿಗಷ್ಟೆ ಕೊಡಲಾಗುತ್ತಿದೆ. ಅಂತ್ಯೋದಯ, ಬಿಪಿಎಲ್ ಕಾರ್ಡ್‌ದಾರರ ಬದಲಿಗೆ ಸ್ಥಿತಿವಂತರಿಗೆ ವಿತರಿಸಲಾಗುತ್ತಿದೆ. ಉಳಿದ ಹಾಲನ್ನು ಪುರಸಭೆ ನೌಕರರು, ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.

    ಬಾಡಿಗೆ ಮನೆ, ಗುಡಿಸಿಲಿನಲ್ಲಿ ಜೀವನ ನಡೆಸುತ್ತಿದ್ದೇವೆ ಕೂಲಿ, ಮನೆ ಕೆಲಸಕ್ಕೆ ಹೋಗುತ್ತಿದ್ದೆವು. ಕರೊನಾದಿಂದ ಕೆಲಸ ಇಲ್ಲವಾಗಿದೆ. ಇದ್ದ ಪಡಿತರವೂ ಖಾಲಿಯಾಗಿದೆ. ಈಗ ಗಣಿ ಕಂಪನಿಗಳು ನೀಡಿರುವ ಪಡಿತರ ಕಿಟ್‌ಹಾಗೂ ಹಾಲನ್ನು ಕೊಡುತ್ತಿಲ್ಲ ಎಂದು 14ನೇ ವಾರ್ಡ್‌ನ ಲಕ್ಷ್ಮೀ, ಗೌಳೇರು ಓಣಿ ಅಗಸರ ಶಾಂತಮ್ಮ, 13ನೇ ವಾರ್ಡ್‌ನ ಲಕ್ಷ್ಮಿ, 2ನೇ ವಾರ್ಡ್‌ನ ಈರಮ್ಮ ದೂರಿದರು.

    ರೇಷನ್, ಹಾಲಿನ ತಾರತಮ್ಯದ ಬಗ್ಗೆ ವಾರ್ಡ್‌ನ ಬಡವರು ದಿನಾ ನಮ್ಮ ಬಳಿ ಬಂದು ಜಗಳ ಮಾಡುತ್ತಿದ್ದಾರೆ. ನಿತ್ಯ 300 ಲೀ.ಗೂ ಅಧಿಕ ಹಾಲು ಬರುತ್ತಿದ್ದು, ಮುಖ್ಯಾಧಿಕಾರಿಗೆ ಹೇಳಿದರೆ ಕನಿಷ್ಟ ಕಾಳಜಿ ತೋರದೆ ತಹಸೀಲ್ದಾರ್‌ಗೆ ತಿಳಿಸಿ ಎನ್ನುತ್ತಾರೆ. ಮಾ.31ಕ್ಕೆ ದಿನದ ಸಂತೆ ಮಾರುಕಟ್ಟೆ ಜಕಾತಿ (ಸುಂಕ) ಎತ್ತುವ ಅವಧಿ ಮುಗಿದಿದ್ದು, ಟೆಂಡರ್ ಕರೆದು ಗುತ್ತಿಗೆ ನೀಡುವವರೆಗೆ ಜಕಾತಿ ಎತ್ತುವಂತಿಲ್ಲ. ಆದರೆ, ಮುಖ್ಯಾಧಿಕಾರಿ ಸತ್ಯನಾರಾಯಣರಾವ್ ಸಿಬ್ಬಂದಿ ಮೂಲಕ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯರಾದ ಎಲ್.ಎಚ್.ಶಿವಕುಮಾರ್, ಮಾಳಿಗಿ ಪಂಪಣ್ಣ, ವಿರೇಶ್, ಅಶೋಕ್ ಆರೋಪಿಸಿದರು. ಆದರೆ, ಮುಖ್ಯಾಧಿಕಾರಿ ಕಚೇರಿಗೆ ಬರಲಿಲ್ಲ. ಸದಸ್ಯರು, ಕಂದಾಯ ಅಧಿಕಾರಿ ಕರೆ ಮಾಡಿ ತಿಳಿಸಿದರೂ ಕಚೇರಿ ಕಡೆ ಸುಳಿಯಲಿಲ್ಲ. ಮುಖಂಡರಾದ ಬಿ.ವಸಂತಕುಮಾರ್, ಕೆ.ರಮೇಶ, ಟಿ.ನರಸಿಂಹ ಸೇರಿ ವಿವಿಧ ವಾರ್ಡ್‌ಗಳ ಮಹಿಳೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts