More

    ವಿವಿಗಳಲ್ಲಿ ಬಡ್ತಿಗಾಗಿ ಪುಸ್ತಕಗಳ ವಿಮರ್ಶೆ: ವಿದ್ವಾಂಸ ಕಲ್ಗುಡಿ ಆರೋಪ

    ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿನ ಪುಸ್ತಕಗಳ ಬರಹಗಳು ಮತ್ತು ವಿಮರ್ಶೆಗಳು ಕೇವಲ ಬಡ್ತಿಗಾಗಿ ಪ್ರಕಟವಾಗುತ್ತಿವೆ ಎಂದು ವಿದ್ವಾಂಸ ಬಸವರಾಜ ಕಲ್ಗುಡಿ ಗಂಭೀರ ಆರೋಪ ಮಾಡಿದರು.

    ನಗರದ ಬಿಎಂಶ್ರೀ ಕಲಾಭವನದಲ್ಲಿ ಭಾನುವಾರ ಅಂಕಿತ ಪ್ರಕಾಶನ ಪ್ರಕಟಿಸಿದ ಉಳಿದಾವ ನೆನಪು, ಚಂದ್ರಗುಪ್ತ ಮೌರ್ಯ, ವಿಕ್ಟರ್ ಫ್ರಾಂಕಲ್ ಮತ್ತು ಮೇಘದೂತ ಕೃತಿಗಳ ಲೋಕಾರ್ಪಣೆ ಸಮಾರಂಭದದಲ್ಲಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಶೂನ್ಯ ಸಂಪಾದನೆಯಾಗಿವೆ. ಕೇವಲ ಸಾಹಿತ್ಯ, ಸಂಶೋಧನೆ ಮಾತ್ರವಲ್ಲ, ಕನ್ನಡದ ಬಗ್ಗೆ ಹೆಚ್ಚೆಚ್ಚು ಕೆಲಸ ಮಾಡಬೇಕಿದೆ. ಕನ್ನಡದ ಬರಹಗಾರರಿಗೆ ತಾವೇ ದೊಡ್ಡ ಬರಹಗಾರರು ಎಂಬ ಅಹಂ ಇದೆ. ಕನ್ನಡ, ಇಂಗ್ಲಿಷ್ ಸೇರಿ ಯಾವುದು ಕೊಟ್ಟರೂ ಬರೆಯುತ್ತೇವೆ ಎಂಬ ಅಹಂಕಾರವನ್ನು ಬಿಡಬೇಕು ಎಂದರು.

    ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಜಾವಾಣಿ ನಿರ್ದೇಶಕ ಶಾಂತಕುಮಾರ್, ದಿನಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆ ಮತ್ತು ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬ ಆಕ್ಷೇಪಗಳು ಬರುತ್ತಿವೆ. ದಶಕಗಳ ಹಿಂದೆ ಪ್ರಕಟವಾಗುತ್ತಿದ್ದ ವಿಮರ್ಶೆ ಬರಹಕ್ಕೂ ಇಂದು ಪ್ರಕಟವಾಗುತ್ತಿರುವ ಬರಹಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬ ಸಾಕ್ಷ್ಯ ಒದಗಿಸಿದ್ದಾರೆ. ಆದರೆ, ಪುಸ್ತಕೋದ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ಗಮನಿಸಬೇಕಿದೆ ಎಂದರು.

    ದಶಕಗಳ ಹಿಂದೆ ಹೊಸ ಪುಸ್ತಕಗಳು ಪ್ರಕಟವಾದ ವಿಷಯ ತಿಳಿದುಕೊಳ್ಳಲು ಪತ್ರಿಕೆ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇರಲಿಲ್ಲ. ಆದ್ದರಿಂದ ಓದುಗರಿಗೆ ಪುಸ್ತಕಗಳನ್ನು ಪರಿಚಯಿಸುವುದು ನಮ್ಮ ಹೊಣೆಯಾಗಿತ್ತು. ಇತರೆ ಪತ್ರಿಕೆಗಳು ಕೂಡ ಇದೇ ಕೆಲಸ ಮಾಡಿವೆ. ಇಂದಿನ ಕಾಲಘಟ್ಟದಲ್ಲಿ ಪುಸ್ತಕಗಳ ವಿಮರ್ಶೆಗೆ ಪತ್ರಿಕೆಗಳ ಜತೆಗೆ ವೆಬ್‌ಸೈಟ್, ಬ್ಲಾಗ್‌ಗಳು, ಸಾಮಾಜಿಕ ತಾಣಗಳಿವೆ. ತಂತ್ರಜ್ಞಾನದಿಂದ ಪ್ರಕಾಶಕರು ಮತ್ತು ಲೇಖಕರಿಗೆ ಹೆಚ್ಚಿನ ಅವಕಾಶಗಳು ದೊರೆತಿವೆ. ಪದ ಮಿತಿ ಇಲ್ಲ ಮತ್ತು ವಿಮರ್ಶೆ ಪ್ರಕಟಿಸಲು ಸಾಕಷ್ಟು ಸಮಯ ಕಾಯದೆ ತಕ್ಷಣವೇ ಪ್ರಕಟಿಸುವ ಅವಕಾಶವಿರುವ ಕಾರಣ ಪತ್ರಿಕೆಗಳಲ್ಲಿ ಸೀಮಿತವಾಗಿದೆ ಎಂದರು.

    ಇಂಗ್ಲಿಷ್ ಸೇರಿ ಇತರೆ ಭಾಷೆಗಳಲ್ಲಿ ಇರುವಂತೆ ಕನ್ನಡ ಪುಸ್ತಕಗಳಲ್ಲಿ ಸಂಪಾದಕರ ಪರಿಕಲ್ಪನೆ ಇನ್ನೂ ಬೆಳೆದಿಲ್ಲ. ವಾಕ್ಯ ರಚನೆ ಲೋಪ ಸೇರಿ ಸಾಮಾನ್ಯ ವಿಚಾರ ಮೀರಿ ಇಡೀ ಕೃತಿಯ ಪರಿಕಲ್ಪನೆ, ಪುಸ್ತಕದ ಸೊಬಗು ತುಂಬುವಲ್ಲಿ ಸಂಪಾದಕನ ಪಾತ್ರವಿದೆ. ಇಂಗ್ಲಿಷ್‌ನಲ್ಲಿರುವ ಏರ್ಪಾಟು ಕನ್ನಡದಲ್ಲಿಯೂ ಬರಬೇಕು. ಈ ನಿಟ್ಟಿನಲ್ಲಿ ಕನ್ನಡದ ಲೇಖಕರು ಚಿಂತನೆ ಮಾಡಬೇಕು ಎಂದರು.
    ಕಾರ್ಯಕ್ರಮದಲ್ಲಿ ಲೇಖಕರಾದ ಪದ್ಮರಾಜ ದಂಡಾವತಿ, ಮಹಾಬಲ ಸೀತಾಳಬಾವಿ, ಉದಯಕುಮಾರ್ ಹಬ್ಬು ಮತ್ತು ವೈ.ಜಿ. ಮುರಳೀಧರನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts