More

    ಅರೆಬರೆ ಕಾಮಗಾರಿ, ತಡೆಗೋಡೆ ಕಾರ್ಯ ಸ್ಥಗಿತ

    ಹೇಮನಾಥ ಪಡುಬಿದ್ರಿ

    ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂತೂರು ಬಾಳೆಗುಂಡಿ ಪರಿಶಿಷ್ಟ ಪಂಗಡದ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸಹಿತ ತಡೆಗೋಡೆ ಕಾಮಗಾರಿ ಆರಂಭವಾಗಿ ನಾಲ್ಕು ತಿಂಗಳಾದರೂ ಪೂರ್ಣವಾಗಿಲ್ಲ.
    ಗ್ರಾಮ ವಿಕಾಸ ಯೋಜನೆಯಡಿ 2019ರಲ್ಲಿ ಯೋಜನೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಗುದ್ದಲಿಪೂಜೆ ನೆರವೇರಿಸಿದ್ದರು. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಸಹಿತ ರಸ್ತೆ ಅಭಿವೃದ್ಧಿ ಕಾಮಗಾರಿ 2020ರ ನವೆಂಬರ್ ತಿಂಗಳಿನಲ್ಲಿ ಕೆಆರ್‌ಐಡಿಎಲ್ ಮೂಲಕ ಕೈಗೆತ್ತಿಕೊಳ್ಳಲಾಗಿತ್ತು.

    ನವೆಂಬರ್‌ನಲ್ಲಿ ತಳಮಟ್ಟದಿಂದ ಎರಡು ಅಡಿಗಳಷ್ಟು ತಡೆಗೋಡೆ ಕೆಲಸ ಮಾಡಿದ್ದ ಗುತ್ತಿಗೆದಾರರು ಬಳಿಕ ಕಾಣಲು ಸಿಕ್ಕಿರಲಿಲ್ಲ. ಅಲ್ಲದೆ ಕಾಂಕ್ರೀಟ್ ತಡೆಗೋಡೆ ಕಾಮಗಾರಿಗೆ ನೀರು ಕೂಡ ಚಿಮುಕಿಸಿಲ್ಲ. ಇದನ್ನು ಕೆಆರ್‌ಐಡಿಯಲ್ ಸಂಸ್ಥೆಯ ಇಂಜಿನಿಯರ್ ಗಮನಕ್ಕೂ ತರಲಾಗಿತ್ತು. ಗ್ರಾಪಂ ಚುನಾವಣೆ ಮುಗಿದ ಬಳಿಕ ಮರಳಿದ ಗುತ್ತಿಗೆದಾರರು ಮತ್ತೆ ಎರಡು ಅಡಿ ತಡೆಗೋಡೆ ಹಾಗೂ ಅರ್ಧ ರಸ್ತೆ ಅಗೆದು ಪೈಪ್ ಅಳವಡಿಸಿದ್ದರು. ಪೈಪ್ ಅಳವಡಿಸಿರುವಲ್ಲಿ ರಸ್ತೆ ಅಗೆದಿದ್ದು, ಇದರಿಂದ ಜನರಿಗೆ ಸಂಚರಿಸಲು ಹಾಗೂ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿನ ಖಾಸಗಿ ಗುಡ್ಡವನ್ನೂ ಅಗೆದಿದ್ದು, ಮಳೆ ಬಂದಲ್ಲಿ ಗುಡ್ಡ ಜರಿದು ಅಪಾಯ ತಂದೊಡ್ಡಲಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಗುಣಮಟ್ಟದ ಬಗ್ಗೆಯೂ ಶಂಕೆ
    ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಈ ಕಾಮಗಾರಿ ಬಗ್ಗೆ ಪಿಡಿಒ ಅವರಲ್ಲಿ ವಿಚಾರಿಸಿದರೆ ತಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಇಂಜಿನಿಯರ್ ಬಳಿ ಕೇಳಿದರೆ ಯೋಜನೆ ಬಗ್ಗೆ ಎಲ್ಲ ವಿವರಗಳುಳ್ಳ ಪ್ರತಿಯನ್ನು ಪಂಚಾಯಿತಿಗೆ ನೀಡಲಾಗಿದೆ ಎನ್ನುತ್ತಿದ್ದಾರೆ. ಅಸಮರ್ಪಕ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಜನ ಅನುಮಾನ ವ್ಯಕ್ತಪಡಿಸಿದ್ದು, ಗ್ರಾಪಂ ಹಾಗೂ ಸಂಬಂಧಿತ ಇಲಾಖೆ ಈ ಬಗ್ಗೆ ಗಮನ ಹರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

    ಮೂರು ತಿಂಗಳ ಹಿಂದಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ಇಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರಲ್ಲಿ ಚರ್ಚಿಸಿ ಈ ಬಗ್ಗೆ ಪರಿಶೀಲಿಸಲಾಗುವುದು.
    ಸುರೇಶ್, ಪಿಡಿಒ, ಮುದರಂಗಡಿ ಗ್ರಾಪಂ

    ಆರಂಭದಲ್ಲಿ ರಸ್ತೆ ಅಭಿವೃದ್ಧಿ ಮಾತ್ರ ಯೋಜನೆಯಲ್ಲಿ ಒಳಗೊಂಡಿತ್ತು. ಬದಲಾದ ಯೋಜನೆಯಲ್ಲಿ ರಸ್ತೆ ಸಹಿತ ತಡೆಗೋಡೆ ಕಾಮಗಾರಿ ಒಳಗೊಂಡಿದೆ. ಈಗಾಗಲೇ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಕೆಲಸ ಪೂರ್ಣಗೊಳಿಸದಿದ್ದಲ್ಲಿ ಬೇರೆ ಗುತ್ತಿಗೆದಾರರಿಗೆ ಅದನ್ನು ವಹಿಸಿಕೊಡುವ ಬಗ್ಗೆ ತೀರ್ಮಾನಿಸಲಾಗುವುದು.
    ದಿವ್ಯರಾಜ್ ಕೋಟ್ಯಾನ್, ಕೆಆರ್‌ಐಡಿಎಲ್ ಯೋಜನೆ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts