More

    ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸಿ

    ಗದಗ: ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ವೈದ್ಯರು ಪ್ರತಿದಿನ ಮಾಡಿದ ಕೆಲಸದ ಕುರಿತು ಖುದ್ದಾಗಿ ವಾಟ್ಸ್​ಆಪ್ ಮೂಲಕ ನನಗೆ ಮಾಹಿತಿ ಸಲ್ಲಿಸಿ ಎಂದು ಪಶು ಸಂಗೋಪನೆ ಖಾತೆ ಸಚಿವ ಪ್ರಭು ಚವ್ಹಾಣ ಹೇಳಿದರು.

    ನಗರದ ಪಶು ವೈದ್ಯಕೀಯ ಕಾಲೇಜ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಶುವೈದ್ಯರು ಮತ್ತು ಸಿಬ್ಬಂದಿ ಸಮಸ್ಯೆಯನ್ನು ಆಲಿಸಲು ನಾನು ಸದಾ ಸಿದ್ಧ. ನಿಮ್ಮ ಸಮಸ್ಯೆಗಳಿದ್ದರೆ ಪರಿಹರಿಸಲಾಗುವುದು. ಆದರೆ, ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದರು.

    ರೈತರು ತಮ್ಮ ಜಾನುವಾರುಗಳೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಪಶುವೈದ್ಯರು ಚೀಟಿ ಬರೆದು ಹೊರಗಿನಿಂದ ಔಷಧಗಳನ್ನು ತರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಅನೇಕ ದೂರುಗಳು ಬಂದಿದ್ದು, ಖುದ್ದಾಗಿ ರೈತರು ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ತರಹದ ಸಮಸ್ಯೆಗಳು ಪುನರಾವರ್ತಿಸದಂತೆ ನೋಡಿಕೊಳ್ಳಬೇಕು. ಚೀಟಿ ಪದ್ಧತಿ ಮುಂದುವರೆಸಿದರೆ ಸಂಬಂಧಿಸಿದ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಪಶುವೈದ್ಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲಮಿತಿಯಲ್ಲಿ ಕೈಗೊಳ್ಳಲು ವಾರ್​ರೂಮ್ ಆರಂಭಿಸಲಾಗುತ್ತಿದೆ. ದಿನದ 24 ಗಂಟೆ ವಾರ್​ರೂಮ್ ಕಾರ್ಯನಿರ್ವಹಿಸಲಿದೆ. ವಾರ್ ರೂಮ್ ಮೂಲಕ ರೈತರು, ಪಶುಪಾಲಕರು ಮಾಹಿತಿ ಮತ್ತು ಸಲಹೆ ಪಡೆದುಕೊಳ್ಳಬಹುದು ಎಂದರು.

    ವಕ್ಪ್ ಮತ್ತು ಹಜ್ ಇಲಾಖೆ, ಕುರಿ ಮತ್ತು ಉಣ್ಣೆ ನಿಗಮದ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.

    ಮಹಾವಿದ್ಯಾಲಯದಲ್ಲಿ ಶಿಕ್ಷಕರು ಮತ್ತು ಲ್ಯಾಬ್​ಗಳ ಕೊರತೆಯಿದ್ದು ಶೈಕ್ಷಣಿಕ ಏಳಿಗೆಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಮಹಾವಿದ್ಯಾಲಯಕ್ಕೆ ಮೂಲ ಸೌಕರ್ಯ ಒದಗಿಸಲು ಮಹಾವಿದ್ಯಾಲಯದ ಡೀನ್ ಡಾ.ಆರ್. ನಾಗರಾಜ ಸಚಿವರಿಗೆ ಮನವಿ ಮಾಡಿಕೊಂಡರು.

    ನಂತರ ನಗರದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಪಾಲಿಕ್ಲಿನಿಕ್​ಗೆ ಸಚಿವ ಪ್ರಭು ಚವ್ಹಾಣ ಭೇಟಿ ನೀಡಿ ಹಾಜರಾತಿ, ಔಷಧಗಳ ಸ್ಟಾಕ್ ಹಾಗೂ ಇತರೆ ದಾಖಲಾತಿಗಳನ್ನು ಪರಿಶೀಲಿಸಿದರು.

    ಜಿಲ್ಲೆಗೊಂದು ಪಶು ಸಂಜೀವಿನಿ ಆಂಬುಲೆನ್ಸ್: ಜಿಲ್ಲೆಗೊಂದು ಪಶು ಸಂಜೀವಿನಿ ಆಂಬುಲೆನ್ಸ್ ಒದಗಿಸಲಾಗುವುದು. ಈ ವಾಹನದಲ್ಲಿ ವಿಶೇಷವಾದ ಪಶು ಸೇವಾ ಸೌಲಭ್ಯಗಳು, ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಯಂತ್ರ ಇರಲಿದೆ. ಈ ಮೂಲಕ ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ ಬಂದಂತಾಗಲಿದೆ ಎಂದರು.

    ಗುಣಮಟ್ಟಕ್ಕೆ ಸಚಿವರ ಬೇಸರ : ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ ಮಹಾವಿದ್ಯಾಲಯದ ಕಟ್ಟಡ ನಿರ್ವಣದ ಗುಣಮಟ್ಟ ಕಂಡು ಬೇಸರ ವ್ಯಕ್ತಪಡಿಸಿದರು. ಮೂರನೇ ದರ್ಜೆ ಕಟ್ಟಡ ಇದು. ಇಂತಹ ಕಳಪೆ ಮಟ್ಟದ ಕಟ್ಟಡ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂದು ಗರಂ ಆದರು. ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಾಣ ಮಾಡಿದ್ದು, ಈ ಕುರಿತು ವರದಿ ತರಿಸಿಕೊಂಡು ತನಿಖೆಗೆ ಆದೇಶಿಸಲಾಗುವುದು ಎಂದು ಅವರು ಹೇಳಿದರು.

    ಗೋಹತ್ಯೆ ನಿಷೇಧ ಕಾಯ್ದೆ ಶೀಘ್ರ ಜಾರಿ

    ಗದಗ: ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಬದ್ಧ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಲಾಗುವುದು ಎಂದರು.

    ಅಜಿತ್ ಪವಾರ್​ಗೆ ತಲೆ ಇಲ್ಲ: ಗಡಿ ಕುರಿತು ತಗಾದೆ ತೆಗೆಯುತ್ತಿರುವ ಮಾಹಾರಾಷ್ಟ ಡಿಸಿಎಂ ಅಜಿತ್ ಪವಾರ್​ಗೆ ತಲೆನೇ ಇಲ್ಲ. ಗೊಂದಲದ ಹೇಳಿಕೆ ನೀಡಿ ಅಣ್ಣ

    ತಮ್ಮಂದಿರಂತಿರುವ ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಪುನರ್ ರಚನೆ ಬಗ್ಗೆ ಮಾಹಿತಿ ಇಲ್ಲ. ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ತಾಪಂ ಸದಸ್ಯನಿಂದ ಸಚಿವನಾಗುವ ಅವಕಾಶವನ್ನು ಪಕ್ಷ ನೀಡಿದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಏನಿದ್ದರೂ ಬದ್ಧ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts