More

    ರೆಸಾರ್ಟ್‌ಗೆ ಬೀಗ ಜಡಿದ ಜಿಲ್ಲಾಡಳಿತ

    * ಭೂ ಪರಿವರ್ತನೆ ಆದೇಶ ರದ್ದು
    * ನಿರ್ಮಾಣವೇ ಅಕ್ರಮ ಎಂದು ಅರಣ್ಯ ಇಲಾಖೆ ವಾದ

    ಗಂಗಾಧರ್ ಬೈರಾಪಟ್ಟಣ ರಾಮನಗರ
    ಪ್ರಾದೇಶಿಕ ಆಯುಕ್ತರು ನೀಡಿದ್ದ ಆದೇಶವನ್ನು ರಾಮನಗರ ಜಿಲ್ಲಾಡಳಿತ ಅಂದೇ ಜಾರಿಗೆ ತಂದಿದ್ದರೆ, ಎರಡು ಜೀವಗಳನ್ನು ಉಳಿಸಬಹುದಿತ್ತೇ?
    ಇಂತಹದೊಂದು ಪ್ರಶ್ನೆ ಈಗ ಜಿಲ್ಲಾಡಳಿತದ ನಡೆಯ ಬಗ್ಗೆ ಎದ್ದಿದೆ. ಮೂರು ದಿನಗಳ ಹಿಂದೆ ಹಾರೋಹಳ್ಳಿ ಬಳಿಯ ಜಂಗಲ್ ಟ್ರೈಲ್ಸ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ತುಂಡಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಹಿಂದೆಯೂ ಪ್ರವಾಸಿಯೊಬ್ಬರು ಮೃತಪಟ್ಟಿದ್ದರು.

    ಇದರ ನಡುವೆ, ರೆಸಾರ್ಟ್ ನಡೆಸಲು ನೀಡಿರುವ ಅನುಮತಿಯೇ ಸರಿ ಇಲ್ಲ, ಜತೆಗೆ ರೆಸಾರ್ಟ್‌ಗಾಗಿ ಮಾಡಿದ್ದ ಭೂ ಪರಿವರ್ತನೆ ಆದೇಶ ರದ್ದುಪಡಿಸುವಂತೆ 2024ರ ಫೆಬ್ರವರಿಯಲ್ಲಿಯೇ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ನಿರ್ದೇಶನ ನೀಡಿದ್ದರು. ಆದರೆ, ಆದೇಶ ಜಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳದ ಜಿಲ್ಲಾಡಳಿತ, ಮಹಿಳೆ ಸಾವಿನ ನಂತರ ಎಚ್ಚೆತ್ತಿದೆ. ಅಂತಿಮವಾಗಿ ಮೇ 21ರಂದು ಭೂ ಪರಿವರ್ತನೆ ಆದೇಶ ರದ್ದುಪಡಿಸುವ ಜತೆಗೆ ರೆಸಾರ್ಟ್‌ಗೂ ಬೀಗ ಮುದ್ರೆ ಹಾಕಿದೆ.

    ಅನುಮತಿಯೇ ಅಕ್ರಮ?

    ಲಭ್ಯ ಮಾಹಿತಿ ಪ್ರಕಾರ ಜಂಗಲ್ ಟ್ರೈಲ್ಸ್ ರೆಸಾರ್ಟ್ ನಿರ್ಮಾಣವೇ ಅಕ್ರಮ ಎನ್ನುವುದು ಅರಣ್ಯ ಇಲಾಖೆ ವಾದ. ಮೊದಲಿಗೆ ಹಾರೋಹಳ್ಳಿ ಹೋಬಳಿಯ ಗೊಟ್ಟಿಗೆ ಹಳ್ಳಿ ಗ್ರಾಮದ ಸರ್ವೇ ನಂ.105ರ 2 ಎಕರೆ 20 ಗುಂಟೆ ಕೃಷಿ ಭೂಮಿಯನ್ನು 2022ರ ಏಪ್ರಿಲ್ 11ರಂದು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂ ಪರಿವರ್ತನೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಭೂ ಪರಿವರ್ತಿತ ಜಾಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದ ಕೇವಲ 460 ಮೀಟರ್ ಒಳಗೇ ಇದ್ದು, ವನ್ಯ ಜೀವಿ ಕಾಯ್ದೆಗೆ ವಿರುದ್ಧವಾಗಿರುವುದರಿಂದ ಭೂ ಪರಿವರ್ತನೆ ಮಾಡಿರುವುದೇ ಅಕ್ರಮ ಎಂದು ಅರಣ್ಯ ಇಲಾಖೆ ವಾದ ಮಾಡಿದೆ.

    ರದ್ದುಪಡಿಸಲು ಆದೇಶ

    ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್ ನಡೆಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು 2024ರ ಫೆಬ್ರವರಿ 23ರಂದು ನಡೆದ ಸಭೆಯಲ್ಲಿ ರೆಸಾರ್ಟ್‌ಗೆ ನೀಡಲಾಗಿರುವ ಭೂ ಪರಿವರ್ತನೆ ಆದೇಶ ರದ್ದುಪಡಿಸುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.

    ಮೂರು ತಿಂಗಳ ನಂತರ

    ಫೆ.23ರಂದು ಸಭೆ ನಡೆಸಿ ರೆಸಾರ್ಟ್‌ಗೆ ನೀಡಲಾಗಿರುವ ಭೂ ಪರಿವರ್ತನೆ ಆದೇಶ ರದ್ದುಪಡಿಸುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು, ಇದು ಜಾರಿಗೆ ಬಂದಿದ್ದು ಮಹಿಳೆ ಸಾವಿನ ನಂತರ. ಮೇ 21ರ ಮಂಗಳವಾರ ಜಿಲ್ಲಾಧಿಕಾರಿ ಮೇಲುಸ್ತುವಾರಿ ಸಮಿತಿ ಸಭೆಯ ಆದೇಶವನ್ನು ಜಾರಿಗೆ ತಂದು 2022ರ ಏ.11ರಂದು ನೀಡಲಾಗಿದ್ದ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸಿದ್ದಾರೆ. ಒಂದು ವೇಳೆ ಪ್ರಾದೇಶಿಕ ಆಯುಕ್ತರ ಆದೇಶವನ್ನು ಆಗಾಲೇ ಜಾರಿ ಮಾಡಿದ್ದರೆ ಇದೇ ರೆಸಾರ್ಟ್‌ನಲ್ಲಿ ಸಂಭವಿಸಿದ ಎರಡು ಸಾವು ತಡೆಗಟ್ಟಬಹುದಿತ್ತು.

    ರೆಸಾರ್ಟ್‌ಗೆ ಬೀಗ

    ಒಂದೆಡೆ ಜಿಲ್ಲಾಧಿಕಾರಿ ರೆಸಾರ್ಟ್ ಭೂ ಪರಿವರ್ತನೆ ಆದೇಶ ರದ್ದುಪಡಿಸುತ್ತಿದ್ದಂತೆ ಮತ್ತೊಂದೆಡೆ ಪ್ರವಾಸೋದ್ಯಮ ಇಲಾಖೆ ಬೀಗ ಹಾಕಿದೆ. ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ಸಮಜಾಯಿಷಿ ನೀಡುವಂತೆ ಏ.30ರಂದು ನೊಟೀಸ್ ನೀಡಿದ್ದರೂ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಬೀಗ ಮುದ್ರೆ ಹಾಕಲಾಗಿದೆ. ಮಂಗಳವಾರ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತು ಹಾರೋಹಳ್ಳಿ ತಹಸೀಲ್ದಾರ್ ವಿಜಯಣ್ಣ ಸ್ಥಳಕ್ಕೆ ತೆರಳಿ ನೊಟೀಸ್ ಅಂಟಿಸಿ, ಬೀಗ ಜಡಿದು ಬಂದಿದ್ದಾರೆ.

    ಆಗಬೇಕಿದೆ ತನಿಖೆ

    ಪರಿಸರ ಸೂಕ್ಷ್ಮ ವಲಯದಲ್ಲಿ ಭೂ ಪರಿವರ್ತನೆ ಆಗಬೇಕಾದರೆ ವನ್ಯಜೀವಿ ಪ್ರದೇಶ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪಡೆದು, ಅದು ಸೂಕ್ತ ಎನಿಸಿದರಷ್ಟೇ ಜಿಲ್ಲಾಧಿಕಾರಿ ಭೂ ಪರಿವರ್ತನೆ ಮಾಡಬಹುದು. ಆದರೆ, ಈ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳುವ ಅರಣ್ಯ ಇಲಾಖೆ, ಅಂದು ಏಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ?, ಇಲ್ಲವೇ ಅರಣ್ಯ ಇಲಾಖೆ ಗಮನಕ್ಕೆ ಬರದಂತೆ ಜಿಲ್ಲಾಧಿಕಾರಿ ಕಚೇರಿ ಇದಕ್ಕೆ ಅನುಮತಿ ನೀಡಿದೆಯೇ? ಎನ್ನುವ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಇದರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

    ರೆಸಾರ್ಟ್‌ಗಳ ವಿರುದ್ಧ ಕ್ರಮ

    ಜಿಲ್ಲೆಯಲ್ಲಿರುವ ಅಧಿಕೃತ ಮತ್ತು ಅನಧಿಕೃತ ರೆಸಾರ್ಟ್‌ಗಳಿಗೆ ತೆರಳಿ ಸುರಕ್ಷತೆ ಪರಿಶೀಲನೆ ಕಾರ್ಯ ಇಂದಿನಿಂದ (ಮೇ.22) ಆರಂಭಗೊಳ್ಳಲಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಎಲ್ಲ ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪ್ರವಾಸಿಗರ ಸುರಕ್ಷತೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ಜತೆಗೆ, ಪಡೆದಿರುವ ಅನುಮತಿಗಳ ಬಗ್ಗೆಯೂ ಜಾಲಾಡಲಿದ್ದಾರೆ.

    ಮುಂದಿನ ಆದೇಶವರೆಗೂ ರೆಸಾರ್ಟ್‌ಗೆ ಬೀಗ ಜಡಿಯಲಾಗಿದೆ. ಇದರ ಜತೆಗೆ ಜಿಲ್ಲಾಧಿಕಾರಿಗಳು ರೆಸಾರ್ಟ್‌ನ ಭೂ ಪರಿವರ್ತನೆ ಆದೇಶವನ್ನು ಸಹ ರದ್ದುಪಡಿಸಿದ್ದಾರೆ.
    ರವಿಕುಮಾರ್, ಸಹಾಯಕ ನಿರ್ದೇಶಕ, ಪ್ರವಾಸೋಧ್ಯಮ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts