More

    ಆಕ್ಸಿಜನ್ ಕಾನ್ಸನ್​ಟ್ರೇಟರ್ ಕಾಯ್ದಿರಿಸಿ

    ಹಾವೇರಿ: ಜಿಲ್ಲಾ ಹಾಗೂ ತಾಲೂಕು ಕೋವಿಡ್ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಕಾಯ್ದಿರಿಸಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

    ಸೋಮವಾರ ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ವಿವಿಧ ಕೋವಿಡ್ ಆರೈಕೆ ಕೇಂದ್ರಗಳಿಗೆ ಪೂರೈಸಲಾದ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳಲ್ಲಿ ಬಳಕೆಯಾಗದೇ ಉಳಿದವುಗಳನ್ನು ಜಿಲ್ಲಾ ಹಾಗೂ ತಾಲೂಕು ಕೋವಿಡ್ ಆಸ್ಪತ್ರೆಗಳಿಗೆ ತರಿಸಿಕೊಳ್ಳಲು ಸೂಚಿಸಿದರು.

    ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕಂಟೇನರ್​ಗಳನ್ನು ಖರೀದಿಸಿ ಅಳವಡಿಸಲು ತ್ವರಿತವಾಗಿ ಕ್ರಮಕೈಗೊಳ್ಳಿ. ಕೋವಿಡ್ ರೋಗಿಗಳು ವೆಂಟಿಲೇಟರ್ ಅವಲಂಬಿಸುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಗೆ ಪೂರೈಕೆಯಾಗಿರುವ ಆಕ್ಸಿಜನ್ ಸೆಮಿವೆಂಟಿಲೇಟರ್(ಆಕ್ಸಿಜನ್ ಬ್ಯಾಕ್​ಪ್ಯಾಕ್)ಬಳಕೆ ಕುರಿತು ಎಲ್ಲರಿಗೂ ತರಬೇತಿ ನೀಡಬೇಕು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬ್ಯಾಕ್​ಪ್ಯಾಕ್ ಬಳಕೆ ಆರಂಭಿಸಬೇಕು ಎಂದರು.

    ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಆಸ್ಪತ್ರೆಗಳಿಗೆ ಭೇಟಿ ನೀಡಿ ಖುದ್ದು ಮಾನಿಟರ್ ಮಾಡಬೇಕು. ಆಕ್ಸಿಜನ್ ಸೋರಿಕೆ ತಡೆಯಬೇಕು. ಕೋವಿಡ್ ಆಸ್ಪತ್ರೆಗಳ ಐಸಿಯು ವಾರ್ಡ್​ಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ ನಿಗಾವಹಿಸಬೇಕು. ಆಕ್ಸಿಜನ್ ಕೊರತೆಯಾಗದಂತೆ ಎಲ್ಲ ಮುಂಜಾಗ್ರತೆ, ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ತರಿಸಿಕೊಳ್ಳಲು ಕ್ರಮವಹಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ವೆಂಟಿಲೇಟರ್ ಜತೆಗೆ ಹೆಚ್ಚುವರಿಯಾಗಿ ಆರು ವೆಂಟಿಲೇಟರ್ ಅಳವಡಿಸಿ ಕೋವಿಡ್ ರೋಗಿಗಳ ಸೇವೆಗೆ ಮಂಗಳವಾರ ಸಂಜೆಯೊಳಗಾಗಿ ಸಿದ್ಧಮಾಡಿಕೊಳ್ಳಬೇಕು. ಸವಣೂರ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಪೈಪ್​ಲೈನ್ ಕಾಮಗಾರಿಯನ್ನು ಮಂಗಳವಾರ ಸಂಜೆಯೊಳಗೆ ಪೂರ್ಣಗೊಳಿಸಬೇಕು ಎಂದರು.

    ಹಿರೇಕೆರೂರನಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು, ಹಿರೇಕೆರೂರನ ಕೋವಿಡ್ ಸ್ಥಿತಿಗತಿ, ವೆಂಟಿಲೇಟರ್ ವ್ಯವಸ್ಥೆ, ಪಾಸಿಟಿವ್ ಪ್ರಕರಣಗಳು, ಕೋವಿಡ್ ಆರೈಕೆ ಕೇಂದ್ರಗಳ ಕುರಿತು ವಿವರಿಸಿದರು.

    ಹಿರೇಕೆರೂರ ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರ ನೇಮಕ ಮಾಡಬೇಕು. ವೆಂಟಿಲೇಟರ್​ಗಳನ್ನು ಹೆಚ್ಚುವರಿಯಾಗಿ ಪೂರೈಸಬೇಕು. ಸ್ಥಳೀಯವಾಗಿ ವೈದ್ಯರು ಜ್ವರಕ್ಕೆ ಚಿಕಿತ್ಸೆ ನೀಡದಂತೆ ಸೂಕ್ತ ಆದೇಶ ಹೊರಡಿಸಬೇಕು. ಮದುವೆ, ಗುಗ್ಗಳ, ಜಾತ್ರೆ ಸಾರ್ವಜನಿಕ ಸಭೆ-ಸಮಾರಂಭಗಳನ್ನು ಪೂರ್ಣವಾಗಿ ನಿಷೇಧಿಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ಮಹಮ್ಮದ್ ರೋಷನ್, ಎಸ್​ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇತರ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಪ್ರತಿ ಮನೆ ಕಂಟೇನ್ಮೆಂಟ್: ಕೋವಿಡ್ ಪಾಸಿಟಿವ್ ಪತ್ತೆಯಾದ ಪ್ರತಿ ಮನೆಯನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಿ, ನಿಯಮಾನುಸಾರ ಕ್ರಮಕೈಗೊಳ್ಳಿ. ಮೈಕ್ರೋ ಕಂಟೇನ್ಮೆಂಟ್ ಘೊಷಣೆಯಾದ ಮನೆ ಚಿಕ್ಕದಿದ್ದು, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೆ ಸದಸ್ಯರನ್ನು ಬೇರೆಡೆ ಸ್ಥಳಾಂತರಿಸಲು ಕ್ರಮಕೈಗೊಳ್ಳಿ. ಮನೆಯವರು ಹೊರಬರದಂತೆ ನಿರ್ಬಂಧ ವಿಧಿಸಿ. ಕುಟುಂಬಕ್ಕೆ ಬೇಕಾದ ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮವಹಿಸಬೇಕು. ಈಗಾಗಲೇ ಸೂಚಿಸಿದಂತೆ ಪ್ರಾಥಮಿಕ ಸಂರ್ಪತರನ್ನು ಕಡ್ಡಾಯವಾಗಿ ಆರ್​ಟಿಪಿಸಿಆರ್ ಪರೀಕ್ಷೆ ಮಾಡಬೇಕು. ದ್ವಿತೀಯ ಸಂರ್ಪತರನ್ನು ರ್ಯಾಟ್ ಪರೀಕ್ಷೆಗೊಳಪಡಿಸಬೇಕು. ಪರೀಕ್ಷೆ ನಡೆದ ದಿನವೇ ಮಾದರಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು. ತುರ್ತು ಸಂದರ್ಭಗಳಲ್ಲಿ ತಕ್ಷಣ ವರದಿ ತರಿಸಿಕೊಳ್ಳಲು ಖುದ್ದಾಗಿ ಸಂರ್ಪಸಬೇಕು. ನಿತ್ಯ ಕನಿಷ್ಠ 2,500ರಿಂದ 300ಸಾವಿರ ಟೆಸ್ಟ್​ಗಳನ್ನು ನಡೆಸಬೇಕು. ಪಾಸಿಟಿವ್ ಬಂದವರ ಟ್ರೇಸಿಂಗ್ ಮಾಡಿ ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸಚಿವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಸಿಸಿ ಸೆಂಟರ್​ಗೆ ಸ್ಥಳಾಂತರಿಸಿ: ಮನೆಯಲ್ಲಿರುವ ಸೋಂಕಿತರ ಮನವೊಲಿಸಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮವಹಿಸಿ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಕಕಾಲದಲ್ಲಿ ಲಸಿಕೆ ನೀಡುವ ಬದಲು ದಿನವೊಂದಕ್ಕೆ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಿ ಲಸಿಕೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಬ್ಯಾಡಗಿ ಆಸ್ಪತ್ರೆಯ ಪಕ್ಕದಲ್ಲಿರುವ ಸಮುದಾಯ ಕೇಂದ್ರದಲ್ಲಿ ಹಾಗೂ ಹಾವೇರಿ ನಗರದ ಸಿಂದಗಿ ಆಯುರ್ವೆದಿಕ್ ವೈದ್ಯಕೀಯ ಕಾಲೇಜ್​ನಲ್ಲಿ ಕೋವಿಡ್ ಚಿಕಿತ್ಸೆಗೆ ತಲಾ 50ಬೆಡ್​ಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕರೊನಾ ಹರಡುವಿಕೆ ನಿಯಂತ್ರಿಸಲು ಗುಗ್ಗಳ, ಜಾತ್ರೆ, ಮದುವೆಗಳನ್ನು ಪೂರ್ಣವಾಗಿ ಬಂದ್ ಮಾಡುವ ಕುರಿತು ಕ್ರಮಕೈಗೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts