More

    ಮೀಸಲಾತಿ ನಾರಿಗೆ ಶಕ್ತಿ; ವಿಜಯವಾಣಿ ಸಂವಾದದಲ್ಲಿ ಸಾಧಕಿಯರ ಒಕ್ಕೊರಲ ಆಗ್ರಹ

    ಬೆಂಗಳೂರು: ‘ಸಮಾಜದ ಅರ್ಧಭಾಗದಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ, ಪ್ರಾತಿನಿಧ್ಯ ಸಿಗದೇ ಹೋದರೆ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ. ಮಹಿಳೆಯರಿಗೆ ಸಮಾನತೆ ಸಿಗುವವರೆಗೆ ಎಲ್ಲ ರಂಗದಲ್ಲೂ ಮೀಸಲಾತಿ ನೀಡಬೇಕು. ವಿಶೇಷ ಸಲವತ್ತು ಕೊಟ್ಟು ಮುಖ್ಯವಾಹಿನಿಗೆ ತರಬೇಕು..’

    ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ್ಮಚೌಧರಿ ಹಾಗೂ ಉದ್ಯಮಿ ಪುಷ್ಪಲತಾ ಸುರೇಶ್ ಅವರ ಸ್ಪಷ್ಟ ಅಭಿಪ್ರಾಯ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘ವಿಜಯವಾಣಿ’ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಪಾಲ್ಗೊಂಡಿದ್ದ ಈ ಸಾಧಕಿಯರು, ‘ಮಹಿಳೆಯರ ಸಬಲೀಕರಣದ ಜತೆಗೆ ಸಮಾಜದ ಮುನ್ನಡೆಯ ದೃಷ್ಟಿಯಿಂದಲೂ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಲಿಂಗತ್ವದ ಪಡಿಯಚ್ಚಿನ ಬಗೆಗಿರುವ ದೃಷ್ಟಿಕೋನ ಆಮೂಲಾಗ್ರವಾಗಿ ಬದಲಾಗಬೇಕು. ಬಸವ, ಅಂಬೇಡ್ಕರ್ ಕಂಡ ಸಮಾನತೆ ಸಾಧ್ಯ ವಾಗಬೇಕೆಂದು’ ಪ್ರತಿಪಾದಿಸಿದರು.

    ಮಹಿಳಾ ಸಮಾನತೆಗೆ ವಿಶಿಷ್ಟ ವ್ಯಾಖ್ಯಾನ: ಮಹಿಳಾ ಸಮಾನತೆಗೆ ವಿಶಿಷ್ಟ ವ್ಯಾಖ್ಯಾನ ಕೊಟ್ಟಿ್ಟ್ದು ಭಾರತದ ಸಂವಿಧಾನ. ಎಲ್ಲಿಯ ತನಕ ಸಮಾನತೆ ಬರುವುದಿಲ್ಲವೋ ಅಲ್ಲಿಯವರೆಗೆ ವಿಶೇಷ ಸವಲತ್ತು ಕೊಟ್ಟು ಸಮವಾಗಿ ನಿಲ್ಲಿಸಬೇಕು. ಅಸಮಾನತೆ ಇದ್ದಾಗ ಸಮಾನತೆ ಬರಲು ಸಾಧ್ಯವಿಲ್ಲ. ಸಮಾನತೆ ಹಂತಕ್ಕೆ ತಂದು ನಿಲ್ಲಿಸಲು ಎಲ್ಲ ರೀತಿಯ ಸಹಕಾರ ಕೊಡಬೇಕು ಎಂದು ಧರಣಿದೇವಿ ಹೇಳಿದರು.

    ಮೀಸಲಾತಿ ಎಲ್ಲ ಕ್ಷೇತ್ರದಲ್ಲೂ ಬೇಕು. ಕೇವಲ ರಾಜಕೀಯದಲ್ಲಿ ಮಾತ್ರ ಮೀಸಲಾತಿ ಕೊಟ್ಟರೆ ಸಾಲದು. ಲಿಂಗತ್ವಕ್ಕೆ ಸಂಬಂಧಿಸಿದಂತೆ ನಮ್ಮ ಗ್ರಹಿಕೆ ಬದಲಾಗಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯ ಹೊರಗುಳಿಸುವಿಕೆ ಪ್ರಕ್ರಿಯೆ ತಲೆತಲಾಂತರದಿಂದಲೂ ನಡೆದುಕೊಂಡು ಬಂದಿದೆ. ಅದು ಒಳಗೊಳ್ಳುವಿಕೆ ಆಗಬೇಕು. ಮಹಿಳೆಯರಿಗೆ ಪ್ರತ್ಯೇಕ ಕೌಶಲಗಳಿರುತ್ತವೆ. ಪುರುಷರಿಗೆ ಇಲ್ಲದೇ ಇರುವ ಕೆಲವು ಶಕ್ತಿ ಸಾಮರ್ಥ್ಯಗಳೂ ಇರುತ್ತವೆ. ಲಿಂಗತ್ವದ ಪಡಿಯಚ್ಚು ಮುರಿಯುವ ಕೆಲಸವನ್ನು ಯಾರು ಮಾಡುತ್ತಾರೋ ಅವರು ಅವರವರ ಕ್ಷೇತ್ರದಲ್ಲಿ ಮುಂದೆ ಹೋಗುತ್ತಾರೆ ಎಂದು ತಿಳಿಸಿದರು.

    ರಾಜಕಾರಣದಲ್ಲಿ ಕಡಿಮೆ ಜಾಗ: ರಾಜಕಾರಣದಲ್ಲಿ ಹೆಣ್ಣಿಗೆ ಬಹಳ ಕಡಿಮೆ ಜಾಗವಿದೆ. ಅವಕಾಶ ಸಿಕ್ಕಾಗಲೆಲ್ಲ ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಇಂದಿರಾ ಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿ ಇದಕ್ಕೆ ದೊಡ್ಡ ಉದಾಹರಣೆ. ಮಹಿಳೆ ಅಧಿಕಾರದಲ್ಲಿರುವಾಗ ಅವರನ್ನು ಸೋಲಿಸಲು ಯಾರಿಂದಲೂ ಆಗಿಲ್ಲ. ಮಹಿಳೆಯರು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಕಡಿಮೆ. ಎಲ್ಲರನ್ನೂ ಒಳಗೊಳ್ಳುವ ಮಾತೃ ಹೃದಯಿ ಆಗಿರುವುದರಿಂದ ಸಾಮಾಜಿಕ ನ್ಯಾಯ ತನ್ನಿಂದ ತಾನೇ ಸಿಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ್ಮ ಚೌಧರಿ ಪ್ರತಿಪಾದಿಸಿದರು.

    ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಬಲವರ್ಧನೆ: ಆಡಳಿತ, ರಾಜಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಮಹಿಳಾ ಮೀಸಲಾತಿ ಅದ್ಭುತ ಶಕ್ತಿ ತಂದು ಕೊಟ್ಟಿದೆ. ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟು ಅಧಿಕಾರ ಕೊಡಲಾಯಿತು. ಆ ಸಂದರ್ಭದಲ್ಲಿ ಮಹಿಳೆಯರ ಸಾಮರ್ಥ್ಯದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆದವು. ಮೂಲತಃ ಹೆಣ್ಣು ಮಕ್ಕಳು ಅಧಿಕಾರ ನಡೆಸುವ ಗುಣ ಹೊಂದಿಲ್ಲ ಎಂಬ ವಾದವೂ ಇತ್ತು. ಪುರುಷ ಅಧಿಕಾರ ನಡೆಸಬೇಕು, ಮಹಿಳೆ ಅಧೀನತೆಯಲ್ಲಿರಬೇಕು ಎಂಬುದು ಚರ್ಚೆಯ ವಸ್ತುವಾಗಿತ್ತು. ಅಧಿಕಾರ ಪಡೆದ ಮಹಿಳೆ ನಾಮಕಾವಸ್ತೆ, ಆಕೆ ಹೆಸರಿನಲ್ಲಿ ಪುರುಷರೇ ಅಧಿಕಾರ ನಡೆಸುತ್ತಾರೆ ಎಂಬ ಟೀಕೆಗಳೂ ವ್ಯಕ್ತವಾದವು. ಇಷ್ಟರ ನಡುವೆಯೂ ಮಹಿಳೆಯರು ಮಹತ್ವದ ಸಾಧನೆ ಮಾಡಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹೇಳಿದರು.ಅಭಿವೃದ್ಧಿ ಕೆಲಸಗಳ ಅನುಷ್ಠಾನದಲ್ಲಿ ಸ್ವಂತ ತೀರ್ಮಾನ ತೆಗೆದುಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಈ ನಡುವೆ ಅಧಿಕಾರದಲ್ಲಿರುವ ಮಹಿಳೆಯರ ಮೇಲೆ ದೌರ್ಜನ್ಯಗಳೂ ನಡೆದವು. ಈಗ ಕಾಲ ಬದಲಾಗಿದೆ. ಮಹಿಳೆಯರು ತಮ್ಮ ಶಕ್ತಿ, ಸಾಮರ್ಥ್ಯವನ್ನು ಎಲ್ಲ ರಂಗದಲ್ಲೂ ಸಾಬೀತುಪಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಮನೆ ರಾಜಕಾರಣದ ಬೆಂಕಿಯಲ್ಲಿ ಅರಳಿದ ಹೂವು…: ಮಹಿಳೆ ಅಂತರ್ಗತವಾಗಿ ನಾಯಕಿ. ಆಕೆಗೆ ನಾಯಕತ್ವ ಗುಣ ಕಲಿಸಿಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ್ಮ ಚೌಧರಿ ಹೇಳಿದರು. ರಾಜಕಾರಣ ಕ್ಕಿಂತ ಹೆಚ್ಚು ರಾಜಕಾರಣ ಮನೆಯಲ್ಲಿ ನಿತ್ಯ ನಡೆಯುತ್ತದೆ. ಮನೆ ಪುಟ್ಟ ರಣರಂಗವಾಗಿರುತ್ತದೆ. ಗಂಡ, ಅತ್ತೆ, ಮಾವ, ಸೊಸೆ, ಮೈದುನ… ಹೀಗೆ ಪ್ರತಿಯೊಬ್ಬರ ಭಾವ, ಕೋಪ ತಾಪಕ್ಕೆ ಮಹಿಳೆ ಬೆಂಕಿಯಲ್ಲಿ ಅರಳಿದ ಹೂವಿನ ರೀತಿ ಸ್ಪಂದಿಸುತ್ತಾಳೆ. ಎಲ್ಲವನ್ನೂ ನಗುನಗುತ್ತ ನಿಭಾಯಿಸುತ್ತಾಳೆ. ಹೆಣ್ಣು ಈ ದೇಶದಲ್ಲಿ ಅಲ್ಪಸಂಖ್ಯಾತಳು. ಶೇ.50 ಸಂಖ್ಯೆಯಲ್ಲಿದ್ದರೂ ಸಂಪನ್ಮೂಲ, ಅಧಿಕಾರದಲ್ಲಿ ಯಾರಿಗೆ ಅವಕಾಶ ದೊರೆಯು ವುದಿಲ್ಲವೋ ಅವರೇ ಅಲ್ಪಸಂಖ್ಯಾತರು ಎಂದು ಅಂಬೇಡ್ಕರ್ ಹೇಳಿದ್ದಾರೆ. ನಾವು ಶೇ.50 ಇದ್ದರೂ ಅಧಿಕಾರ, ಅವಕಾಶದ ಕೊರತೆ ಇನ್ನೂ ಇದೆ. ಕರ್ನಾಟಕ ಪಂಚಾಯತ್​ರಾಜ್ ವ್ಯವಸ್ಥೆಯಲ್ಲಿ ಶೇ.50 ಮೀಸಲಾತಿ ಕಲ್ಪಿಸಲಾಗಿದೆ. ವಿಧಾನಸಭೆ, ಸಂಸತ್ತಿನಲ್ಲಿ ಮೀಸಲಾತಿ ದೊರೆಯಬೇಕು. ಎಲ್ಲಿವರೆಗೆ ಕಾನೂನು ಆಗುವುದಿಲ್ಲವೋ ಅಲ್ಲಿಯವರೆಗೆ ಪ್ರಾಧಾನ್ಯತೆ ಸಿಗುವುದು ಕಷ್ಟ. ಕಾನೂನು ಬದ್ಧ ಮೀಸಲಾತಿ ದೊರೆತರೆ ಅವಕಾಶಗಳ ಬಾಗಿಲು ತೆರೆಯುತ್ತದೆ. ಸಮಾಜದಲ್ಲಿ ಹೊಸ ಮನ್ವಂತರ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಸಾಧಕಿಯರ ಹಕ್ಕೊತ್ತಾಯ

    • ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿ ಸಿಗುವಂತಾಗಲಿ
    • ಲಿಂಗತ್ವಕ್ಕೆ ಸಂಬಂಧಿಸಿದ ನಮ್ಮ ಗ್ರಹಿಕೆ ಬದಲಾಗಲಿ
    • ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆ ಹೊರಗುಳಿಸುವಿಕೆ ನಿಲ್ಲಲಿ
    • ಎಲ್ಲ ಕೆಲಸ ಮಾಡಲೂ ಸಮರ್ಥ, ಮುಕ್ತ ಅವಕಾಶ ಸಿಗಲಿ

    ಸಾಧಿಸಿ ತೋರಿಸುವ ಛಲಗಾತಿ

    ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಮೀಸಲಾತಿ ಸಿಗಬೇಕು. ಮೀಸಲು ಇದ್ದರೆ ಮಾತ್ರ ಸವಲತ್ತು ದೊರೆಯಲು ಸಾಧ್ಯ. ಮೀಸಲಾತಿ ಕೊಟ್ಟರೆ ಹೆಚ್ಚು ಕೆಲಸ ಮಾಡುತ್ತೇವೆ. ಅಧಿಕಾರ ಸ್ಥಾನದಲ್ಲಿ ಕೂರಿಸಿದರೆ ಕೆಲಸ ಮಾಡಿ ತೋರಿಸುತ್ತೇವೆ. ವಿಧಾನಸಭೆ, ಲೋಕಸಭೆಯಲ್ಲೂ ಶೇ.33 ಮೀಸಲಾತಿ ನ್ಯಾಯ ಸಮ್ಮತವಾಗಿ ಸಿಗಬೇಕು. ನಾವು ಎಲ್ಲ ಕೆಲಸ ಮಾಡಲೂ ಸಮರ್ಥರಿದ್ದೇವೆ. ನಮಗೆ ಅವಕಾಶ ಸಿಗಬೇಕು ಎಂದು ಹೇಳಿದರು.

    | ಉದ್ಯಮಿ ಪುಷ್ಪಲತಾ ಸುರೇಶ್ ಎಸ್​ಜಿ ಎಂಟರ್​ಪ್ರೖೆಸಸ್ ಎಂಡಿ ಮತ್ತು ಸಂಸ್ಥಾಪಕಿ

    ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಶಾಕ್; ಕ್ರಿಕೆಟ್​ಗೆ ವಿದಾಯ ಹೇಳಲು ಮುಂದಾದ ಸ್ಟಾರ್​ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts