More

    ಆಕಾಂಕ್ಷಿಗಳಿಗೆ ಮೀಸಲಾತಿ ಆತಂಕ

    ಚಿಕ್ಕಮಗಳೂರು: ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರವನ್ನು ಗಟ್ಟಿಗೊಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಆರಂಭಿಸಿದ್ದ ಜಿಪಂ ಹಾಗೂ ತಾಪಂ ಚುನಾವಣಾ ಆಕಾಂಕ್ಷಿಗಳಿಗೆ ಇದೀಗ ಮೀಸಲಾತಿ ಆತಂಕ ಶುರುವಾಗಿದೆ. ತಾವು ಗಟ್ಟಿಗೊಳಿಸಿಕೊಂಡಿದ್ದ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ.

    ಕಳೆದೆರಡು ವರ್ಷಗಳಿಂದ ಜಿಪಂ ಹಾಗೂ ತಾಪಂಗೆ ಚುನಾವಣೆಯೇ ನಡೆದಿಲ್ಲ. ಹೀಗಾಗಿ ಎರಡು ವರ್ಷಗಳಿಂದ ಕ್ಷೇತ್ರಗಳನ್ನು ಗಟ್ಟಿಗೊಳಿಸಿಕೊಳ್ಳಲು ಆಕಾಂಕ್ಷಿಗಳು ಪ್ರಯತ್ನಪಟ್ಟಿದ್ದರು. ಆದರೆ ಜಿಪಂ, ತಾಪಂ ಕ್ಷೇತ್ರಗಳ ಪುನರ್ವಿಂಗಡಣೆ ಹಲವರ ಕನಸನ್ನು ನುಚ್ಚುನೂರು ಮಾಡಿತ್ತು. ಇದರ ಮಧ್ಯೆಯೂ ತಮ್ಮ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ನಾಯಕರಿಗೆ ಮೀಸಲಾತಿ ಆತಂಕ ಕಾಡಲಾರಂಭಿಸಿದೆ.
    ಯಾವ ಕ್ಷೇತ್ರಕ್ಕೆ ಯಾವ ಮೀಸಲಾತಿ ಘೋಷಣೆಯಾಗುತ್ತೋ ಎಂಬ ಗೊಂದಲ ಆಕಾಂಕ್ಷಿಗಳಲ್ಲಿ ಆರಂಭಗೊಂಡಿದೆ. ತಾವು ಕಟ್ಟಿ ಬೆಳೆಸಿದ ಕ್ಷೇತ್ರವನ್ನು ಬೇರೆಯವರ ಮಡಿಲಿಗೆ ಹಾಕಬೇಕಾಗುವ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮೀಸಲಾತಿ ಘೋಷಣೆಯಾಗುವ ಸಾಧ್ಯತೆಯಿದ್ದು, ಎಲ್ಲರ ಚಿತ್ತವೂ ಮೀಸಲಾತಿಯತ್ತ ನೆಟ್ಟಿದೆ.
    ಜಿಲ್ಲೆಯಲ್ಲಿ 2021ರ ಮೇ ತಿಂಗಳಲ್ಲೇ ಜಿಪಂ, ತಾಪಂ ಅಧಿಕಾರಾವಧಿ ಮುಕ್ತಾಯವಾಗಿದೆ. ಅಂದಿನಿಂದ ಈ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ಈ ಅವಧಿಯಲ್ಲಿ ಅಳೆದೂ ತೂಗಿ ಈಗ ಜಿಪಂ ಹಾಗೂ ತಾಪಂ ಸದಸ್ಯರ ಸಂಖ್ಯೆ ನಿಗದಿ ಮಾಡಿ, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿ ನಿರ್ಣಯ ಮಾಡಿ ಕ್ಷೇತ್ರ ಪುನರ್ವಿಂಗಡಣೆ ಮಾಡಲಾಗಿತ್ತು. ಆದರೆ ಇಷ್ಟರಲ್ಲಾಗಲೇ ವಿಧಾನಸಭಾ ಚುನಾವಣೆ ಬಂದಿತ್ತು. ಇನ್ನು ಕೆಲವೇ ತಿಂಗಳಲ್ಲಿ ಜಿಪಂ ಹಾಗೂ ತಾಪಂ ಚುನಾವಣೆಗಳು ನಡೆಯುವ ಸಾಧ್ಯತೆಯಿದ್ದು, ಮೀಸಲಾತಿ ಘಟಾನುಘಟಿಗಳ ಭವಿಷ್ಯ ನಿರ್ಧಾರ ಮಾಡಲಿದೆ.
    36 ಜಿಪಂ, 100 ತಾಪಂ ಕ್ಷೇತ್ರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 33 ಜಿಪಂ ಕ್ಷೇತ್ರಗಳಿದ್ದವು. ಆದರೆ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರಗಳ ಸಂಖ್ಯೆ 36ಕ್ಕೇರಿದೆ. ಹೀಗಾಗಿಯೇ ಎಲ್ಲ ಪಕ್ಷಗಳಲ್ಲಿಯೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿಯೇ ಇದೆ. ಇನ್ನು ಕ್ಷೇತ್ರ ಪುನರ್ವಿಂಗಡಣೆ ಬಳಿಕ ಚಿಕ್ಕಮಗಳೂರು ಜಿಲ್ಲೆಯ ತಾಪಂ ಕ್ಷೇತ್ರಗಳ ಸಂಖ್ಯೆ ಎರಡು ಹೊಸ ತಾಲೂಕುಗಳನ್ನೂ ಸೇರಿ 100ಕ್ಕೆ ಏರಿಕೆಯಾಗಿದೆ.
    ತೆರೆ ಮರೆಯಲ್ಲೇ ತಯಾರಿ: ಜಿಲ್ಲೆಯಲ್ಲಿ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಜಿಲ್ಲೆಯ ಮಟ್ಟಿಗೆ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಲಾಬಲ ಏರುಪೇರಾಗುವುದು ನಿಶ್ಚಿತ. ವಿಧಾನಸಭೆ ಚುನಾವಣೆ ಫಲಿತಾಂಶವೂ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿಯ ಒಳ ಸುಳಿವು ಅರಿತವರು ಆಗಲೇ ಟಿಕೆಟ್‌ಗಾಗಿ ಲಾಬಿ ಶುರು ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದೆ. ಹಾಗಾಗಿ ಬಿಜೆಪಿ ವಿಧಾನಸಭಾ ಚುನಾಣೆಯ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿ ಯಾವ ಕ್ಷೇತ್ರಕ್ಕೆ ಯಾವುದೇ ಸಮುದಾಯಕ್ಕೆ ಮೀಸಲಾತಿ ಬಂದರೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಆ ಮೂಲಕ ಕೈತಪ್ಪಿರುವ ಅಧಿಕಾರನ್ನು ವಶ ಮಾಡಿಕೊಳ್ಳಬೇಕೆಂಬ ಭೀಷ್ಮ ಪ್ರತಿಜ್ಞೆಯೊಂದಿಗೆ ಸಂಘಟನೆಯಲ್ಲಿ ತೊಡಗಿದ್ದಾರೆ.
    ರಾಜ್ಯ ಸರ್ಕಾರ ಕೂಡಲೇ ಜಿಪಂ ಹಾಗೂ ತಾಪಂ ಚುನಾವಣೆ ನಡೆಸಬೇಕು. ಆದರೆ ಸರ್ಕಾರಕ್ಕೆ ಚುನಾವಣೆ ನಡೆಸುವ ಆಸಕ್ತಿಯೇ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಹೀಗಾಗಿ ಜಿಪಂ ಹಾಗೂ ತಾಪಂಗಳ ಚುಕ್ಕಾಣಿಯನ್ನು ಬಿಜೆಪಿಯೇ ಹಿಡಿಯಲಿದೆ ಎಂಬುದು ಜಿಪಂ ಮಾಜಿ ಸದಸ್ಯ ಮಹೇಶ್ ಒಡೆಯರ್ ವಿಶ್ವಾಸ.
    ಜಿಪಂ, ತಾಪಂ ಕ್ಷೇತ್ರಗಳಿಗೆ ಯಾವುದೇ ಮೀಸಲಾತಿ ಬಂದರೂ ನಾವು ಸ್ವಾಗತಿಸುತ್ತೇವೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದು, ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಪಕ್ಷದ ಹಿರಿಯರ ಸೂಚನೆಯಂತೆ ಚುನಾವಣೆ ಎದುರಿಸುತ್ತೇವೆ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts