More

    ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯ ರಕ್ಷಣೆ

    ನರಗುಂದ: ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದ ತಾಲೂಕಿನ ಸುರಕೋಡ ಗ್ರಾಮದ ವೃದ್ಧೆ ಚಿನ್ನವ್ವ ವೀರಭದ್ರಯ್ಯ ಮಲಕಾಜಪ್ಪನವರನ್ನು ಸ್ಥಳೀಯರು ಬುಧವಾರ ರಕ್ಷಿಸಿದ್ದಾರೆ.

    ಈಕೆ ಬುಧವಾರ ಬೆಳಗ್ಗೆ ಹೊರಮಾಡ ಹಳ್ಳದ ಪಕ್ಕದಲ್ಲಿರುವ ಜಮೀನಿಗೆ ಹೆಸರು ಕಾಯಿ ಆರಿಸಲು ಹೋಗಿದ್ದಳು. ನಿರಂತರ ಮಳೆಯಿಂದಾಗಿ ಬೆಣ್ಣೆ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಬಂದಿದ್ದರಿಂದ ಪ್ರವಾಹದಲ್ಲಿ ಸಿಲುಕಿದ್ದ ಅಜ್ಜಿ ರಕ್ಷಣೆಗೆ ಅಂಗಲಾಚುತ್ತಿದ್ದಳು. ಈ ವೇಳೆ ಬಹಿರ್ದೆಸೆಗೆ ತೆರಳಿದ್ದ ಗ್ರಾಮಸ್ಥರು ವೃದ್ಧೆಯನ್ನು ಕಂಡು, ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರಾಮದ ಯಂಕಪ್ಪ ಸುಗ್ಗಿ, ಶರಣಪ್ಪ ಶಿರಸಂಗಿ ಅವರು ಹಳ್ಳದ ನೀರಿನಲ್ಲಿಯೇ ಈಜಿ ಹೋಗಿ ವೃದ್ಧೆಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ವೃದ್ಧೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಬೆಣ್ಣೆ ಹಳ್ಳದ ಪಕ್ಕದಲ್ಲಿರುವ ಸುರಕೋಡ ಗ್ರಾಮದ ಯಾರೊಬ್ಬರೂ ಜಮೀನಿಗೆ ತೆರಳಬಾರದು. ರಾತ್ರಿ ವೇಳೆ ಆಗಾಗ ಪ್ರವಾಹದ ಬಗ್ಗೆ ವಿಶೇಷ ಗಮನ ಹರಿಸಬೇಕು. ರೈತರು ತಮ್ಮ ಜಾನುವಾರುಗಳನ್ನು ಹಳ್ಳದ ಪಕ್ಕಕ್ಕೆ ಬಿಡಬಾರದು ಎಂದು ಗ್ರಾಪಂ ವತಿಯಿಂದ ಡಂಗುರ ಹಾಕಿಸಲಾಗಿದೆ.

    ಇನ್ನೂ ಭೀಕರ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಯಾವಗಲ್ ಮತ್ತು ಸುರಕೋಡ ಸಮೀಪದ ಬೆಣ್ಣೆ ಹಳ್ಳದ ಸೇತುವೆಗಳ ಮೇಲೆ ನೀರು ಹರಿದಿದೆ. ಇದರಿಂದ ನರಗುಂದದಿಂದ ಯಾವಗಲ್ ಮಾರ್ಗವಾಗಿ ರೋಣಕ್ಕೆ ತೆರಳುವ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಗ್ಗೆ ಎಂದಿನಂತೆ ಸಂಚಾರ ಪುನರಾರಂಭಗೊಂಡಿದೆ.

    ಹಳ್ಳದ ಪಕ್ಕದ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ. ಸವದತ್ತಿಯ ನವಿಲು ತೀರ್ಥ ಜಲಾಶಯ ಗುರುವಾರ ಸಂಪೂರ್ಣ ಭರ್ತಿಯಾಗಿದ್ದರಿಂದ ಮಲಪ್ರಭಾ ನದಿಗೆ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆ ಇದೆ. ಇದರಿಂದ ನದಿ ತೀರದ ಕೊಣ್ಣೂರ ಗ್ರಾಮಸ್ಥರಿಗೆ ಮತ್ತೆ ಆತಂಕ ಶುರುವಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts