More

    ನೀರಾವರಿ ಯೋಜನೆಗೆ ಸರ್ಕಾರದ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿಕೆ

    ಮಂಡ್ಯ: ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
    ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಮಳವಳ್ಳಿ ತಾಲೂಕು ಪೂರಿಗಾಲಿ ಸೂಕ್ಷ್ಮನೀರಾವರಿ ಯೋಜನೆಯನ್ನು 593 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ ತಾಲೂಕಿನ 51 ಗ್ರಾಮಗಳ 25,000 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸಲು ಹಾಗೂ 16 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಅಂತೆಯೇ ವಿಶ್ವೇಶ್ವರಯ್ಯ ನಾಲಾ ಎರಡನೇ ಹಂತದ ಆಧುನೀಕರಣ ಕಾಮಗಾರಿಯನ್ನು 300 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಶ್ರೀರಂಗಪಟ್ಟಣ ತಾಲೂಕು ಕಾರೇಕುರ ಗ್ರಾಮದವರೆಗೆ ಕಾವೇರಿನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
    58.46 ಕೋಟಿ ರೂ.ಗಳಲ್ಲಿ ಕೆಆರ್‌ಎಸ್ ಜಲಾಶಯದ ಪ್ರವಾಹ ನಿಯಂತ್ರಣ ಗೇಟ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಅಂತೆಯೇ 80 ಕೋಟಿ ರೂ. ವೆಚ್ಚದಲ್ಲಿ ಜಲಾಶಯದ ಡ್ರಿಪ್-2 ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಎಲ್ಲ ಗ್ರಾಮಗಳಿಗೂ ನೀರೊದಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 943 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಂತೆಯೇ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲೂಕಿಗೆ 802 ಕೋಟಿ ರೂ. ಮೊತ್ತದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.
    ಕಂದಾಯ ಇಲಾಖೆಯು ರೈತ ಪರವಾಗಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ (ಬಗರ್‌ಹುಕುಂ) ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಕರ್ನಾಟಕ ಭೂಕಬಳಿಕೆ ನಿಷೇಧ ಅಧಿನಿಯಮ 2011ಕ್ಕೆ ತಿದ್ದುಪಡಿ ತರಲಾಗಿದೆ. 2005ನೇ ಇಸವಿಯ ಪೂರ್ವದಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಾಫಿ ಬೆಳೆಯುತ್ತಿದ್ದ ರೈತರಿಗೆ 25 ಎಕರೆವರೆಗಿನ ಜಮೀನನ್ನು 30 ವರ್ಷ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮಾತ್ರವಲ್ಲದೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ಮಾಸ್ಟರ್ ಪ್ಲಾೃನ್ ಆಧಾರಿತ ಭೂಪರಿವರ್ತನೆಯನ್ನು 7 ದಿನಗಳಿಗೆ ಇಳಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
    ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸಲಾಗುತ್ತಿದೆ. ರಾಜ್ಯದಲ್ಲಿರುವ ತಾಂಡಾ, ಮಜರೆ, ಹಾಡಿ, ಹಟ್ಟಿ, ದೊಡ್ಡಿ, ಕ್ಯಾಂಪ್, ಕಾಲನಿ ಇತರೆ ದಾಖಲೆರಹಿತ 3218 ಜನವಸತಿ ಪ್ರದೇಶಗಳನ್ನು ಗುರುತಿಸಿ ಈವರೆಗೆ ಸುಮಾರು 2,346 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಮತ್ತು 1,469 ಗ್ರಾಮಗಳಿಗೆ ಅಂತಿಮ ಅಧಿಸೂಚನೆಗಳನ್ನು ಹೊರಡಿಸಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ 147 ದಾಖಲೆರಹಿತ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 139 ಕಂದಾಯ ಗ್ರಾಮಗಳನ್ನು ರಚಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಹಾಗೂ 112 ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 744 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಹಲೋ ಕಂದಾಯ ಸಚಿವರೇ ಯೋಜನೆಯಡಿ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ ತಲುಪಿಸುವ ವ್ಯವಸ್ಥೆಯಡಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 3,60,381 ಜನ ಫಲಾನುಭವಿಗಳು ಮಾಸಿಕ ಪಿಂಚಣಿ ನೀಡಲಾಗುತ್ತಿದೆ ಎಂದರು.
    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮಂಡ್ಯ ಜಿಲ್ಲೆಯ 2,70,572 ಅರ್ಹ ರೈತ ಫಲಾನುಭವಿಗಳಿಗೆ ಇದುವರೆವಿಗೂ ಕೇಂದ್ರ ಸರ್ಕಾರದಿಂದ 585.95 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 241.94 ಕೋಟಿ ರೂ. ಆರ್ಥಿಕ ನೆರವನ್ನು ನೀಡಲಾಗಿದೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಇದುವರೆವಿಗೂ 100 ರೈತ ಉದ್ದಿಮೆದಾರರಿಗೆ 32.99 ಕೋಟಿ ರೂ. ಮೊತ್ತದ ಸಾಲ ಮಂಜೂರು ಮಾಡಲಾಗಿದೆ. ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯಕ್ಕೆ ಮಂಡ್ಯ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸಾಯಿಲ್ ಟು ಸಿಲ್ಕ್ ಪರಿಕಲ್ಪನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ ರೇಷ್ಮೆ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
    ಜಿಲ್ಲೆಯಲ್ಲಿ 44,750 ಎಕರೆಗಳಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯುತ್ತಿದ್ದು, ಸುಮಾರು 31,703 ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿರುತ್ತಾರೆ. ಇವರಿಗೆ 45.68 ಕೋಟಿ ರೂ. ಸಹಾಯಧನ ನೀಡಲಾಗಿದೆ. ಇದರಿಂದ 24,760 ರೈತ ಫಲಾನುಭವಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಡಿ.ದೇವರಾಜ ಅರಸು ಭವನ ನಿರ್ಮಾಣ ಮಾಡಲು ಕೆ.ಆರ್.ಪೇಟೆ ತಾಲೂಕಿಗೆ 100 ಲಕ್ಷ ರೂ. ಹಾಗೂ ಮಂಡ್ಯ ತಾಲೂಕಿನ ಡಿ.ದೇವರಾಜ ಅರಸು ಭವನ ನವೀಕರಣ ಕಾಮಗಾರಿಗೆ 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ವಸತಿ ಮತ್ತು ನಿವೇಶನ ಯೋಜನೆಯಡಿ ಜಿಲ್ಲೆಗೆ 6,743 ಮನೆ ಪೂರ್ಣಗೊಳಿಸಲು ಪ್ರಸಕ್ತ ಸಾಲಿನಲ್ಲಿ ಗುರಿಯನ್ನು ನಿಗದಿಪಡಿಸಿದ್ದು, ಈ ಪೈಕಿ 3,444 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ವಾಮಿ ವಿವೇಕಾನಂದ ಯುವಕರ ಸಂಘಗಳನ್ನು ರಚಿಸಲಾಗಿದೆ. ಇನ್ನು ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಕಲಿಕೆ ಉತ್ತೇಜಿಸಲು ಸಂಕಲ್ಪ ಯೋಜನೆಯಡಿ ಪ್ರಾಯೋಗಿಕವಾಗಿ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 12.25 ಲಕ್ಷ ರೂ. ವೆಚ್ಚದಲ್ಲಿ ಇಂಗ್ಲಿಷ್ ಲ್ಯಾಬನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
    ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮುಡಾ ಅಧ್ಯಕ್ಷ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಕೀರ್ತನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts