More

  ರಾಜಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ

  ನವದೆಹಲಿ: ದೇಶದ ಜನತೆ ಭಾನುವಾರ 71ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಶುಭ ಕೋರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ, ಸೇನಾ ಮುಖ್ಯಸ್ಥರು ಸೇರಿ ದೇಶದ ಅನೇಕ ಗಣ್ಯರು ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

  ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು, ಯೋಧರ ಕಸರತ್ತು ಪ್ರದರ್ಶನ, ವೈಮಾನಿಕ ಪ್ರದರ್ಶನ ಗಮನಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ವೇಳೆ ತಾವು ತೊಡುವ ಪೇಟ ಸಂಸ್ಕೃತಿಯನ್ನು ಮುಂದುವರಿಸಿದ್ದು, ಈ ಬಾರಿ ಕೇಸರಿ ಬಣ್ಣದ ಪೇಟದಲ್ಲಿ ಮಿಂಚಿದರು. ಹಳೇ ಸಂಪ್ರದಾಯವನ್ನು ಮುರಿದ ಪ್ರಧಾನಿ ಮೋದಿ, ಈ ಬಾರಿ ಮೊದಲು ಅಮರ ಜವಾನ್ ಜ್ಯೋತಿ ಬದಲಿಗೆ, ಉಗ್ರರು ಹಾಗೂ ಶತ್ರುಪಡೆಗಳ ವಿರುದ್ಧದ ಹೋರಾಟದಲ್ಲಿ ಶೌರ್ಯ ಪ್ರದರ್ಶಿಸಿ ಹುತಾತ್ಮರಾದ ಯೋಧರಿಗಾಗಿ ದೆಹಲಿಯಲ್ಲಿ ನೂತನವಾಗಿ ನಿರ್ವಿುಸಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಅಮರ ಜವಾನ್ ಜ್ಯೋತಿಗೆ ಗೌರವ ಸಲ್ಲಿಸಿದರು.

  ಪರೇಡ್​ಗೆ ಮಹಿಳಾ ಸಾರಥಿ

  ಗಣರಾಜ್ಯೋತ್ಸವ ಪರೇಡ್​ನಲ್ಲಿ ಸೇನಾ ಕ್ಯಾಪ್ಟನ್ ತಾನ್ಯಾ ಶೇರ್ಗಿಲ್ ಪುರುಷ ಪಡೆಗಳ ನೇತೃತ್ವ ವಹಿಸುವ ಮೂಲಕ ಆ ಸ್ಥಾನ ನಿಭಾಯಿಸಿದ ಎರಡನೇಯವರೆಂಬ ಕೀರ್ತಿಗೆ ಪಾತ್ರರಾದರು. ಕಳೆದ ವರ್ಷ ಭಾವನಾ ಕಸ್ತೂರಿ ಗಣರಾಜ್ಯೋತ್ಸವ ಪರೇಡ್ ನೇತೃತ್ವ ವಹಿಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದರು. ಈ ಹಿಂದೆ ಸೇನಾ ದಿವಸದಲ್ಲಿ ತಾನ್ಯಾ ಪರೇಡ್​ನ ನೇತೃತ್ವ ವಹಿಸಿದ್ದರು. ಪಂಜಾಬ್ ಮೂಲದವರಾದ ತಾನಿಯಾ ಶೇರ್ಗಿಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಮ್ಮ ಕಟುಂಬದ ನಾಲ್ಕನೆ ತಲೆಮಾರಿನವರಾಗಿದ್ದಾರೆ. ಅವರ ಮುತ್ತಾತ, ತಾತ ಹಾಗೂ ತಂದೆ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

  ಬೈಕ್​ನಲ್ಲಿ ಮಹಿಳೆಯರ ಸಾಹಸ

  ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 65ನೇ ಕಂಟೋನ್ಮೆಂಟ್​ನ ಮಹಿಳಾ ಅಧಿಕಾರಿಗಳು 18 ರಾಯಲ್ ಎನ್​ಫೀಲ್ಡ್ ಬೈಕ್​ಗಳಲ್ಲಿ 9 ರೀತಿಯ ಅದ್ಭುತ ಸಾಹಸಗಳನ್ನು ಪ್ರದರ್ಶಿಸುವ ಮೂಲಕ ಇತಿಹಾಸ ನಿರ್ವಿುಸಿದರು. ಆರ್​ಎಎಫ್​ನ ಇನ್​ಸ್ಪೆಕ್ಟರ್ ಸೀಮಾ ನಾಗ್ ನೇತೃತ್ವ 21 ಮಹಿಳಾ ಅಧಿಕಾರಿಗಳ ತಂಡ 5 ಬೈಕ್​ನಲ್ಲಿ ನಡೆಸಿದ ಮಾನವ ಪಿರಮಿಡ್ ಸಾಹಸ ಎಲ್ಲರ ಗಮನಸೆಳೆಯಿತು.

  1. ಭಾರತದ ಮೊದಲ ಆಂಟಿ ಸ್ಯಾಟಲೈಟ್ ಮಿಷನ್ ‘ಶಕ್ತಿ’ ಸ್ತಬ್ಧಚಿತ್ರದ ಮೂಲಕ ಡಿಆರ್​ಡಿಒ ಮೊದಲ ಬಾರಿ ಪರೇಡ್​ನಲ್ಲಿ ಭಾಗಿ. ಅವಧಿ ಮುಗಿದ ಉಪಗ್ರಹಗಳನ್ನು ನಾಶಪಡಿಸಲು ಇದನ್ನು ಬಳಸಲಾಗುತ್ತದೆ.
  2. ಭಾರತ-ಟಿಬೆಟ್ ಗಡಿ ಪೊಲೀಸರು (ಐಟಿಬಿಪಿ) ಲಡಾಖ್​ನ 17 ಸಾವಿರ ಅಡಿ ಎತ್ತರದಲ್ಲಿ, ಮೈನಸ್ 20 ಡಿಗ್ರಿ ಸೆಲ್ಸಿಯಸ್​ನಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಆಚರಿಸಿದರು.
  3. ಗೂಗಲ್ ಸಂಸ್ಥೆ ತನ್ನ ಡೂಡಲ್ ಐಕಾನ್​ನಲ್ಲಿ ಭಾರತದ ಸಂಸ್ಕೃತಿಯನ್ನು ಬಿಂಬಿಸಿ ಗಣರಾಜ್ಯೋತ್ಸವದ ಶುಭ ಕೋರಿತು.
  4. ಗಡಿ ಭದ್ರತಾ ಪಡೆಯ ಯೋಧರು ಪಾಕಿಸ್ತಾನದೊಂದಿಗೆ ಈ ಬಾರಿ ಸಿಹಿ ವಿನಿಮಯ ಮಾಡಿಕೊಂಡಿಲ್ಲ. ಪ್ರತಿ ವರ್ಷ ಪ್ರಮುಖ ದಿನಗಳಲ್ಲಿ ಉಭಯ ದೇಶಗಳು ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದ್ದು, ಪುಲ್ವಾಮಾ ದಾಳಿ ಬಳಿಕ ಈ ಪದ್ಧತಿಯನ್ನು ನಿಲ್ಲಿಸಲಾಗಿದೆ.
  ಧ್ವಜ ಹಂಚಿದ ಏರ್​ಇಂಡಿಯಾ

  ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಏರ್​ಇಂಡಿಯಾ ಸಂಸ್ಥೆ ತನ್ನ ಪ್ರಯಾಣಿಕರಿಗೆ ಸುಮಾರು 30 ಸಾವಿರ ರಾಷ್ಟ್ರಧ್ವಜಗಳನ್ನು ಹಂಚುವ ಮೂಲಕ ಗಣರಾಜ್ಯೋತ್ಸವ ಆಚರಿಸಿದೆ. ಈ ಧ್ವಜಗಳು ಪರಿಸರ ಸ್ನೇಹಿಯಾಗಿದ್ದು, ಸೀಡ್ ಪೇಪರ್​ಗಳಿಂದ ಮಾಡಲಾಗಿದೆ. ಸಂಭ್ರಮಾಚರಣೆ ಬಳಿಕ ಧ್ವಜಗಳನ್ನು ಮಣ್ಣಿನಲ್ಲಿ ಹಾಕಿ ನೀರೆರೆದರೆ ಸೀಡ್ ಪೇಪರ್​ನಲ್ಲಿ ಹಾಕಿರುವ ಬೀಜಗಳಿಂದ ಸಸಿಗಳು ಬೆಳೆಯುತ್ತವೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ ಸೇರಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ಧ್ವಜಗಳನ್ನು ಪ್ರಯಾಣಿಕರಿಗೆ ಹಂಚಲಾಗಿದೆ.

  ಹುಬ್ಬೇರಿಸುವ ವೈಮಾನಿಕ ಪ್ರದರ್ಶನ

  ಭಾರತೀಯ ಸೇನೆಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ಅಪಾಚೆ ಹೆಲಿಕಾಪ್ಟರ್ ಮತ್ತು ಸಾರಿಗೆ ಹೆಲಿಕಾಪ್ಟರ್ ಚಿನೂಕ್ ಮೊದಲ ಬಾರಿ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಸುಧಾರಿತ ಹಗುರ ಹೆಲಿಕಾಪ್ಟರ್ ಧ್ರುವ, ಎಂಐ-17 ಹೆಲಿಕಾಪ್ಟರ್, ಡೊನಿಯರ್ ವಿಮಾನ, ಸಿ-130ಜೆ ಸೂಪರ್ ಹರ್ಕ್ಯೂಲಸ್, ಸಿ-17 ಸಾರಿಗೆ ವಿಮಾನ, ಜಾಗ್ವಾರ್ ಯುದ್ಧ ವಿಮಾನಗಳು, ಸುಧಾರಿತ ಮಿಗ್ 29 ಜೆಟ್​ಗಳು, ಸುಖೋಯ್ ಎಸ್​ಯುು-30ಎಂಕೆಐ ಟ್ವಿನ್ ಜೆಟ್ ಯುದ್ಧವಿಮಾನಗಳು, ದೇಶಿಯ ನಿರ್ವಿುತ ಹಗುರ ಯುದ್ಧವಿಮಾನ ತೇಜಸ್ ವೈಮಾನಿಕ ಪ್ರದರ್ಶನದಲ್ಲಿ ತೋರಿಸಿದ ವಿವಿಧ ಕಸರತ್ತು ನೋಡುಗರ ಕಣ್ಮನ ಸೆಳೆಯಿತು.

  ಸೇನಾ ಸಾಮರ್ಥ್ಯ ಪ್ರದರ್ಶನ

  ಸೇನೆಯ ಯುದ್ಧ ಟ್ಯಾಂಕ್ ಭೀಷ್ಮ, 269 ಮಧ್ಯಮ ರೆಜಿಮೆಂಟ್​ನ ಕ್ಯಾಪ್ಟನ್ ಅಭಿನವ್ ಸಾಹು ಕಮಾಂಡಿಂಗ್​ನಲ್ಲಿ ಕೆ-9-ವಜ್ರ-ಟಿ ಯುದ್ಧ ಟ್ಯಾಂಕ್, ಡಿಆರ್​ಡಿಒ ತಯಾರಿಸಿರುವ ಆಂಟಿ ಸ್ಯಾಟಲೈಟ್ ವೆಪನ್ ಮಿಷನ್ ಶಕ್ತಿ, ಏರ್ ಡಿಫೆನ್ಸ್ ಟ್ಯಾಕ್ಟಿಕಲ್ ಕಂಟ್ರೋಲ್ ರೇಡರ್ ವಾಹನ, ಧನುಷ್ ಗನ್ ಸಿಸ್ಟಮ್ ನಾವಲ್ ಬ್ರಾಸ್ ಬ್ರಾ್ಯಂಡ್, ಬೋಯಿಂಗ್ ಪಿ81 ಲಾಂಗ್ ರೇಂಜ್ ಕಡಲಗಸ್ತು ವಿಮಾನ ಮತ್ತು ಕೋಲ್ಕತದ ಕ್ಲಾಸ್ ಡೆಸ್ಟ್ರೋಯರ್ ಹಾಗೂ ಕೊಲೆವೆರಿ ಕ್ಲಾಸ್ ಜಲಾಂತರ್ಗಾಮಿ ಪ್ರತಿಕೃತಿಗಳನ್ನು ಪರೇಡ್​ನಲ್ಲಿ ಪ್ರದರ್ಶಿಸಲಾಯಿತು. ಜತೆಗೆ ಸಿಖ್ ಲೈಟ್ ಇನ್​ಫ್ಯಾಂಟ್ರಿ ರೆಜಿಮೆಂಟ್, ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್, ಗಡಿ ಭದ್ರತಾ ಪಡೆಯ ಒಂಟೆ ಪಡೆ ಸೇರಿ ಮೂರು ಸೇನೆಗಳ ವಿವಿಧ ವಿಭಾಗಗಳು ಪಥಸಂಚಲನ ನಡೆಸಿದವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts