More

    ನಾಡಿದ್ದು ಗಣರಾಜ್ಯೋತ್ಸವ ಸಂಭ್ರಮ, ಗೌರವರಕ್ಷೆ ತಾಲೀಮು

    ಬೆಂಗಳೂರು:ಗಣರಾಜ್ಯೋತ್ಸವ ನಿಮಿತ್ತ ಎಂ.ಜಿ. ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

    ಶುಕ್ರವಾರ (ಜ.26) ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಟ್ ಮತ್ತು ಆಸನ ವ್ಯವಸ್ಥೆ ಸೇರಿ ಮೈದಾನದಲ್ಲಿ ಪೂರ್ವಭಾವಿ ಸಿದ್ಧತೆ ಮಾಡಲಾಗುತ್ತಿದೆ. ವೇದಿಕೆಗೆ ಅಲಂಕಾರಿಕ ಬ್ರಾಸ್ ಪರಿಕರಗಳನ್ನು ಅಳವಡಿಸಲಾಗಿದೆ. ಧ್ವಜಾರೋಹಣ ನಂತರ ರಾಜ್ಯಪಾಲರು ಗೌರವರಕ್ಷೆ ಸ್ವೀಕರಿಸಿ, ನಾಡಿನ ಜನತೆಗೆ ಸಂದೇಶ ನೀಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

    ಈಗಾಗಲೇ ಗೌರವರಕ್ಷೆ ಸ್ವೀಕರಿಸುವ ತಾಲೀಮು ನಡೆಸಲಾಗಿದೆ. ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಸೇರಿ ವಿವಿಧ ಶಾಲೆಗಳ ಮಕ್ಕಳ ಒಳಗೊಂಡಂತೆ ಕವಾಯತು ಮತ್ತು ಬ್ಯಾಂಡ್‌ನ ಒಟ್ಟು 38 ತುಕಡಿಗಳಲ್ಲಿ ಅಂದಾಜು 1,150 ಮಂದಿ ಭಾಗಿಯಾಗಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1,500 ಮಂದಿ ಇರಲಿದ್ದಾರೆ. ವಿಜೇತರಿಗೆ ರಾಜ್ಯಪಾಲರು ಬಹುಮಾನ ವಿತರಣೆ ಮಾಡಲಿದ್ದಾರೆ. ‘ನಾಡಗೀತೆ ಮತ್ತು ರೈತಗೀತೆ’, ‘ಈ ದೇಶವು ನಮಗಾಗಿಯೇ ಎಂದೆಂದಿಗೂ’, ‘ಅಕ್ಷರದವ್ವ ಸಾವಿತ್ರಬಾಯಿ ಪುಲೆ’, ‘ಕಲರಿಪಯಟ್ಟು’, ‘ದ್ವಿಚಕ್ರ ವಾಹನ ಸಾಹಸ ಪ್ರದರ್ಶನ’ ಹಾಗೂ ‘ಅಡಗು ತಾಣಗಳಲ್ಲಿ ಹೊಕ್ಕು ದಾಳಿ ಮಾಡುವ ನಿರೂಪಣೆ’ ಕಾರ್ಯಕ್ರಮಗಳಿವೆ ಎಂದವರು ಮಾಹಿತಿ ನೀಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮತ್ತಿತರರಿದ್ದರು.

    575 ಅಧಿಕಾರಿ, ಸಿಬ್ಬಂದಿ ನಿಯೋಜನೆ
    ಸುಲಲಿತ ಗಣರಾಜ್ಯೋತ್ಸವ ಆಚರಣೆ ಹಾಗೂ ಭದ್ರತೆಗೆ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಎಲ್ಲ ಹೋಟೆಲ್, ತಂಗುದಾಣ, ಲಾಡ್ಜ್ ಸೇರಿ ಇತರ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾಹಿತಿ ನೀಡಿದರು. ನಗರದ ಎಲ್ಲ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 46 ಪೊಲೀಸ್ ಇನ್‌ಸ್ಪೆಕ್ಟರ್, 109 ಪೊಲೀಸ್ ಸಬ್ ಇನ್‌ಸ್ಪೆಕ್ಟರ್, 77 ಎಎಸ್‌ಐ, 594 ಕಾನ್‌ಸ್ಟೇಬಲ್, 87 ಮಹಿಳಾ ಸಿಬ್ಬಂದಿ, 184 ಸದಾ ಉಡುಪಿನ ಅಧಿಕಾರಿ, 56 ಮಂದಿ ಕ್ಯಾಮರಾ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು. ಸಂಚಾರ ನಿರ್ವಹಣೆಗೆ 4 ಡಿಸಿಪಿ, 6 ಎಸಿಪಿ, 21 ಪೊಲೀಸ್ ಇನ್‌ಸ್ಪೆಕ್ಟರ್, 33 ಪಿಎಸ್‌ಐ, 97 ಎಎಸ್‌ಐ, 414 ಸೇರಿ ಬಂದೋಬಸ್ತ್‌ಗೆ 575 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್‌ಆರ್‌ಪಿ/ಸಿಎಆರ್ ತುಕಡಿ, 2 ಅಗ್ನಿಶಾಮಕ ವಾಹನ, 2 ಆಂಬುಲೆನ್ಸ್, 4 ಖಾಲಿ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ ಸ್ವಾಟ್, 1 ಆರ್‌ಐವಿ ಹಾಗೂ ಗರುಡ ಪಡೆ ಇರಲಿದೆ ಎಂದು ಮಾಹಿತಿ ನೀಡಿದರು.

    ಹೆಣ್ಣು ಮಗು ಬದುಕಲ್ಲಿ ತಂದೆ ಪಾತ್ರ ವಿಶೇಷ ;ಮಕ್ಕಳ ಪಾಲನೆ ವಿಚಾರದಲ್ಲಿ ಹೈಕೋರ್ಟ್ ಅಭಿಪ್ರಾಯ

    ನಿಗದಿತ ಸ್ಥಳದಲ್ಲೇ ವಾಹನ ನಿಲುಗಡೆ
    ಕಾರು ಪಾಸ್ ಹೊಂದಿರುವ ಎಲ್ಲ ಆಹ್ವಾನಿತರು ಪಾಸ್‌ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಳ್ಳಬೇಕು. ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್, ಅಗ್ನಿಶಾಮಕದಳ, ನೀರಿನ ಟ್ಯಾಂಕರ್, ಕೆಎಸ್‌ಆರ್‌ಪಿ, ಸಿಆರ್‌ಟಿ, ಬಿಬಿಎಂಪಿ, ಪಿಡಬ್ಲ್ಯುಡಿ ವಾಹನಗಳು ಪ್ರವೇಶ-2ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ, ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ ನಿಲುಗಡೆ ಮಾಡಬೇಕು ಎಂದು ಬಿ.ದಯಾನಂದ ತಿಳಿಸಿದರು.

    ಪರ್ಯಾಯ ಮಾರ್ಗ ವ್ಯವಸ್ಥೆ
    ಜ.26ರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್‌ೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ೆಂಟ್ರಿ ರಸ್ತೆ-ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು, ಮೈನ್‌ಗಾರ್ಡ್ ರಸ್ತೆ-ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ-ಕಾಮರಾಜ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ನಂತರ, ಕಾಮರಾಜ- ಕಬ್ಬನ್‌ರಸ್ತೆ ಮೂಲಕ ಸಾಗಿ ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖೇನ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದು. ಅದೇ ರೀತಿ, ಕಬ್ಬನ್‌ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಬಂಧಿಸಲಾಗಿದೆ. ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆ ಮುಖೇನ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬೇಕು.

    ಬಂದೋಬಸ್ತ್ ವಿವಿರಗಳು
    * ಭದ್ರತೆ, ಸುರಕ್ಷತೆಗಾಗಿ 100 ಸಿಸಿ ಕ್ಯಾಮರಾ ಆಳವಡಿಕೆ
    * 2 ಬ್ಯಾಗೇಜ್ ಸ್ಕಾೃನರ್, ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆ
    * ಆಂಬುಲೆನ್ಸ್, ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ ನಿಯೋಜನೆ
    * ಅತಿಗಣ್ಯ, ಗಣ್ಯ ಸೇರಿ ಇತರೆ ಆಹ್ವಾನಿತರಿಗೆ ಮತ್ತು ಸಾರ್ವಜನಿಕರಿಗಾಗಿ 7 ಸಾವಿರ ಆಸನ ವ್ಯವಸ್ಥೆ
    * ಗಣ್ಯ ವ್ಯಕ್ತಿಗಳಿಗೆ ಜಿ2 ದ್ವಾರದಲ್ಲಿ ಪ್ರವೇಶ
    * ಅತಿ ಗಣ್ಯ ವ್ಯಕ್ತಿಗಳು, ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಬಿಎಸ್‌ಎ್ ಅಧಿಕಾರಿಗಳಿಗೆ ಜಿ4 ದ್ವಾರದಲ್ಲಿ ಪ್ರವೇಶ
    * ಜಿ5 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗೆ ಅವಕಾಶ
    * ಆಹ್ವಾನಿತರು ಕಡ್ಡಾಯವಾಗಿ ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು
    * ಆಹ್ವಾನಿತರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಅರ್ಹ ಗುರುತಿನ ಚೀಟಿ ತರತಕ್ಕದು.
    * ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30ರೊಳಗೆ ಬರಬೇಕು
    * ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್‌ರಸ್ತೆ ಮೂಲಕ ಗೇಟ್ ಸಂಖ್ಯೆ 5ಕ್ಕೆ ಆಗಮಿಸಬೇಕು
    * ಲಗೇಜು ಸೇರಿ ಇತರೆ ವಸ್ತುಗಳನ್ನು ತರುವಂತಿಲ್ಲ
    * ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿಕೆ

    ವಾಹನ ನಿಲುಗಡೆ ನಿಷೇಧ:
    * ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ
    * ಕಬ್ಬನ್‌ರಸ್ತೆ, ಸಿಟಿಒ ವೃತ್ತದಿಂದ ಕೆಆರ್ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ
    * ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆ ವೃತ್ತದವರೆಗೆ

    ನಿಷಿದ್ಧ ವಸ್ತುಗಳು
    ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ನೀರಿನ ಬಾಟಲ್, ಕ್ಯಾನ್, ಶಸಾಸ, ಹರಿತವಾದ ವಸ್ತು, ಚಾಕು, ಚೂರಿ, ಕಪ್ಪು ಕರವಸಗಳು, ತಿಂಡಿ, ತಿನಿಸುಗಳು, ಪಟಾಕಿ, ಸ್ಫೋಟಕ ವಸ್ತುಗಳು. ಭದ್ರತಾ ದೃಷ್ಟಿಯಿಂದ ಪೆರೇಟ್‌ಗೆ ಬರುವ ಎಲ್ಲ ಆಹ್ವಾನಿತರು ಮೊಬೈಲ್, ಹೆಲ್ಮೆಟ್, ಕ್ಯಾಮರಾ, ರೇಡಿಯೋ, ಛತ್ರಿಯನ್ನು ತೆಗೆದುಕೊಂಡು ಹೋಗುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts