More

    ಹೆಣ್ಣು ಮಗು ಬದುಕಲ್ಲಿ ತಂದೆ ಪಾತ್ರ ವಿಶೇಷ ;ಮಕ್ಕಳ ಪಾಲನೆ ವಿಚಾರದಲ್ಲಿ ಹೈಕೋರ್ಟ್ ಅಭಿಪ್ರಾಯ

    ಪವಿತ್ರಾ ಕುಂದಾಪುರ ಬೆಂಗಳೂರು
    ಮಗುವಿಗೆ ತಾಯಿ ಉತ್ತಮ ಆರೈಕೆ ಮಾಡುವವಳಾದರೂ, ಆಕೆಯ ಬದುಕಲ್ಲಿ ತಂದೆ ವಿಶೇಷ ಪಾತ್ರ ನಿರ್ವಹಿಸುತ್ತಾನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಅಪ್ರಾಪ್ತ ಮಗಳನ್ನು ವಾರದಲ್ಲಿ ಎರಡು ದಿನ ತಂದೆಯ ಪಾಲನೆಯಲ್ಲಿ ಇರಿಸಬೇಕು ಎಂದು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಮಗಳನ್ನು ತಂದೆಯ ಪಾಲನೆಗೆ ನೀಡುವ ಆದೇಶ ಪ್ರಶ್ನಿಸಿ ಮಗುವಿನ ತಾಯಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಮತ್ತು ರಾಮಚಂದ್ರ ಡಿ.ಹುದ್ದಾರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಮಗು ಹಾಗೂ ನನ್ನ ನಡುವೆ ಅತೀವ ಆತ್ಮೀಯತೆ ಇದೆ. ವಾರದಲ್ಲಿ ಎರಡು ದಿನ ತಂದೆಗೆ ಹಸ್ತಾಂತರಿಸುವುದರಿಂದ ಆಕೆಯ ಶಾಶ್ವತ ಪಾಲನೆ ಆತನಿಗೆ ಹಸ್ತಾಂತರವಾದಂತಾಗುತ್ತದೆ ಎಂದು ತಾಯಿ ವಾದಿಸಿದ್ದರು.

    ಜತೆಗೆ ವಾರದಲ್ಲಿ ಒಂದು ದಿನ ಭೇಟಿ ಮಾಡಲು ಅನುಮತಿ ನೀಡಬೇಕು ಹಾಗೂ ಇದೇ ವೇಳೆ ಮಗುವಿನ ಹಿತದೃಷ್ಟಿ ಪರಿಗಣಿಸಿದಲ್ಲಿ ತಂದೆಗೂ ಪಾಲನೆ ಹಕ್ಕು ಸಮನಾಗಿರಬೇಕು ಎಂದು ಮನವಿ ಮಾಡಿದರು.ವಾದ-ಪ್ರತಿವಾದ ಆಲಿಸಿದ ಪೀಠವು, ಮಗುವಿಗೆ ನಾಲ್ಕೂವರೆ ವರ್ಷವಾಗಿದೆ. ತಾಯಿಯೇ ಉತ್ತಮ ಆರೈಕೆ ಮಾಡುವವಳಾದರೂ, ಮಗು ಬದುಕಿನಲ್ಲಿ ತಂದೆ ವಿಶೇಷ ಪಾತ್ರ ನಿರ್ವಹಿಸುತ್ತಾನೆ. ತಂದೆ-ತಾಯಿ ಜೀವಂತವಾಗಿದ್ದು, ಬೇರೆಯಾದಲ್ಲಿ ಮಗುವಿಗೆ ವಾತ್ಸಲ್ಯ ಹಾಗೂ ಪ್ರೀತಿ ನೀಡುವಲ್ಲಿ ಹೆಚ್ಚಿನ ಬಾರಿ ವಿರಾಗುತ್ತಾರೆ. ಇದು ಮಗುವಿನ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಬ್ಬರ ಜಗಳದಿಂದಾಗಿ ಮಗುವಿಗೆ ತೊಂದರೆಯಾಗಬಾರದು. ಇಬ್ಬರಲ್ಲೂ ಪರಸ್ಪರ ವಿಶ್ವಾಸವಿರಬೇಕು. ಆಗ ಮಾತ್ರ ಮಗುವಿಗೆ ರಕ್ಷಣೆ ಸಾಧ್ಯ ಎಂದು ಹೇಳಿದೆ.

    ಮಗು ಅಪಹರಣ ವಾದ ತಿರಸ್ಕೃತ
    ಮಗುವನ್ನು ಪತಿ ಅಪಹರಿಸುತ್ತಾನೆ ಅಥವಾ ಓಡಿಹೋಗುತ್ತಾನೆ ಎಂಬ ಹೆಂಡತಿಯ ವಾದ ತಿರಸ್ಕರಿಸಿದ ನ್ಯಾಯಾಲಯವು, ಇದು ಮೇಲ್ಮನವಿದಾರರ ಊಹೆ ಅಥವಾ ಆತಂಕವಾಗಿರಬಹುದು. ಮಗುವಿನ ಆರೈಕೆಗೆ ವಿರುದ್ಧವಾಗಿ ತಂದೆ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಸಾಕ್ಷಿಗಳಿಲ್ಲ ಎಂದು ಅರ್ಜಿ ವಜಾಗೊಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts