More

    ಹಳೆಯ ಮೀಟರ್ ಬದಲಾಯಿಸಿ ಹೊಸ ಮೀಟರ್ ಉಚಿತವಾಗಿ ಅಳವಡಿಸುವುದಕ್ಕೆ ಶುಲ್ಕ ವಸೂಲಿ!

    ಭಟ್ಕಳ: ಹಳೆಯ ಮೀಟರ್ ಬದಲಾಯಿಸಿ ಹೊಸ ಮೀಟರ್ ಉಚಿತವಾಗಿ ಅಳವಡಿಸುವ ಕಾರ್ಯ ನಡೆದಿದೆ. ಇದಕ್ಕಾಗಿ, ಸೇವೆಗೆ ಶುಲ್ಕ ಎಂದು ಪ್ರತಿ ಮನೆಯಂದ 100ರಿಂದ 200 ರೂಪಾಯಿ ಪಡೆದು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಹಕರು ಹೆಸ್ಕಾಂ ಅಧಿಕಾರಿಗಳಿಗೂ ದೂರಿದ್ದಾರೆ.

    ಹೆಸ್ಕಾಂ ವ್ಯಾಪ್ತಿಗೆ ಬರುವ ಎಲ್ಲ ಮನೆಗಳಿಗೆ ಹೊಸ ಮೀಟರ್ ಅಳವಡಿಸಲು ದಾವಣಗೆರೆ ಮೂಲದ ಇಲೆಕ್ಟ್ರಿಕಲ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ತಾಲೂಕುವಾರು ಅವರ ಸಿಬ್ಬಂದಿ ಬಂದು ಪ್ರತಿ ಮನೆಗೆ ತೆರಳಿ ಉಚಿತವಾಗಿ ಮೀಟರ್ ಅಳವಡಿಸಬೇಕು. ಆದರೆ, ತಾಲೂಕಿನಾದ್ಯಂತ ಮೀಟರ್ ಬದಲಾವಣೆ ಮಾಡಲು ಬಂದವರು 100, 150, 200 ರೂ.ಗಳನ್ನು ಮನೆಯವರಿಂದ ಪಡೆಯುತ್ತಿದ್ದಾರೆ ಎನ್ನುವ ದೂರು ಹೆಸ್ಕಾಂ ಕಚೇರಿ ತಲುಪಿದೆ. ಭಟ್ಕಳ ತಾಲೂಕು ಒಂದರಲ್ಲೆ ಒಟ್ಟು 52 ಸಾವಿರ ಮೀಟರ್​ಗಳಿದ್ದು ಒಂದು ಮನೆಯಿಂದ 100 ರೂ. ನಂತೆ ವಸೂಲಿ ಮಾಡಿದರೆ 52 ಲಕ್ಷ ರೂ. ಸಂಗ್ರಹವಾಗುತ್ತದೆ.

    ಬೆಳಕಿಗೆ ಬಂದಿದ್ದು ಹೇಗೆ?: ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಯಲ್ಲಿ ಶುಕ್ರವಾರ ಮೀಟರ್ ಬದಲಾಯಿಸಲು ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ತೆರಳಿದ್ದಾರೆ. ಪ್ರತಿ ಮನೆಯಲ್ಲೂ ಮೀಟರ್ ಬದಲಾಯಿಸಲು ಬಂದ ಸಿಬ್ಬಂದಿ ಹಣ ಕೇಳಿದ್ದಾರೆ. ಕೆಲವರು 100 ರೂ. ನೀಡಿದರೆ ಇನ್ನು ಕೆಲವರು 150, ಮತ್ತೆ ಹಲವರು 200 ರೂ. ನೀಡಿದ್ದಾರೆ. ಹಣ ಪಡೆಯುವದರಲ್ಲಿ ಆದ ವ್ಯತ್ಯಾಸದ ಕುರಿತು ಮಹಿಳೆಯರಲ್ಲೆ ಚರ್ಚೆ ನಡೆದು ದೂರು ಹೆಸ್ಕಾಂ ಕಚೇರಿಗೆ ತಲುಪಿದೆ. ಆಗ ಎಚ್ಚೆತ್ತ ಹೆಸ್ಕಾಂ, ಹಣ ನೀಡಬೇಡಿ ಇದು ಸಂಪೂರ್ಣ ಉಚಿತ ಎಂದಿದೆ. ಅಷ್ಟರಲ್ಲಾಗಲೆ ಭಟ್ಕಳ ನಗರ ಮತ್ತು ಗ್ರಾಮೀಣ ಭಾಗ ಸೇರಿ ಒಟ್ಟು 4000ಕ್ಕೂ ಅಧಿಕ ಮೀಟರ್ ಅಳವಡಿಕೆಯಾಗಿ ಹೋಗಿದೆ.

    ಗುತ್ತಿಗೆ ಕಂಪನಿಗೆ ತಾಕೀತು: ಗ್ರಾಹಕರಿಂದ ಹಣ ಕೇಳುತ್ತಿರುವ ಬಗ್ಗೆ ಜಾಲಿಯ ಯುವಕನೊಬ್ಬ ಹೆಸ್ಕಾಂ ಅಧಿಕಾರಿಗಳಿಗೆ ನೀಡಿದ ದೂರಿನ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಗುತ್ತಿಗೆ ಕಂಪನಿಯ ಸಿಬ್ಬಂದಿ ಕರೆಯಿಸಿ ಹಣ ವಸೂಲಿ ಮಾಡದಂತೆ ತಾಕೀತು ಮಾಡಿದೆ.

    ಹಳೆಯ ಮೀಟರ್ ತೆಗೆದು ಹೊಸ ಮೀಟರ್​ಗೆ ಬದಲಾಯಿಸುವ ಕಾರ್ಯ ಸಂಪೂರ್ಣ ಉಚಿತವೆಂದು ಹೆಸ್ಕಾಂ ಅಧಿಕಾರಿಗಳು ಜನರಿಗೆ ತಿಳಿಸಬೇಕಿತ್ತು. ಈಗಾಗಲೆ ಸಾಕಷ್ಟು ಜನರು ಹಣ ನೀಡಿ ಆಗಿದೆ. ಇನ್ನಾದರೂ ಇಲಾಖೆ ಜಾಗೃತಿ ಮೂಡಿಸಬೇಕು.

    | ವಿವೇಕ ನಾಯ್ಕ, ಜಾಲಿ

    ಹೊಸ ಮೀಟರ್ ಹಾಗೂ ಅದರ ಕವರ್ ಅಳವಡಿಸುವ ಕಾರ್ಯ ಸಂಪೂರ್ಣ ಉಚಿತ. ಇದು ಹೆಸ್ಕಾಂನಿಂದ ಆಗುವ ಕಾರ್ಯ. ಗುತ್ತಿಗೆದಾರ ಸಂಸ್ಥೆಗೆ ಹೆಸ್ಕಾಂ ಹಣ ಪಾವತಿಸುತ್ತದೆ. ಮೀಟರ್ ಬದಲಾಯಿಸಲು ಬಂದ ಸಿಬ್ಬಂದಿಗೆ ಗ್ರಾಹಕರು ಯಾವುದೇ ಶುಲ್ಕ ನೀಡುವ ಅಗತ್ಯ ಇಲ್ಲ. ಇಷ್ಟಾದರೂ ಮೀಟರ್ ಬದಲಾಯಿಸಲು ಬಂದ ಗುತ್ತಿಗೆ ಕಂಪನಿ ಸಿಬ್ಬಂದಿ ಹಣ ಕೇಳಿದಲ್ಲಿ ನೇರವಾಗಿ ನಮಗೆ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವದು.

    | ಮಂಜುನಾಥ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ, ಭಟ್ಕಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts