More

    ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ

    ಕೊಳ್ಳೇಗಾಲ: ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಪಟ್ಟಣದ ಎಪಿಎಂಸಿ ಆವರಣದಿಂದ ಮೆರವಣಿಗೆ ಆರಂಭಿಸಿದ ಸಂಘದ ಪದಾಧಿಕಾರಿಗಳು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಹಸೀಲ್ದಾರ್ ಕೆ.ಕುನಾಲ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

    ಇದಕ್ಕೂ ಮುನ್ನ ಸಂಘದ ಜಿಲ್ಲಾಧ್ಯಕ್ಷ ಶಿವರಾಮು ಮಾತನಾಡಿ, ಕೃಷಿಗೆ ಸಂಬಂಧಿಸಿದ ವಿಚಾರ ಬಂದಾಗ ಸರ್ಕಾರ ರೈತರ ಜತೆ ಚರ್ಚಿಸಿದ ಬಳಿಕ ಕಾನೂನು ರೂಪಿಸಬೇಕು. ಆದರೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಸರ್ಕಾರ ಏಕಪಕ್ಷೀಯ ತೀರ್ಮಾನಕ್ಕೆ ಬಂದಿದ್ದು, ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಗೌಡೇಗೌಡ ಮಾತನಾಡಿ, ಕೂಡಲೇ ರಾಜ್ಯ ಸರ್ಕಾರ ಕಾಯ್ದೆಯನ್ನು ರದ್ದುಗೊಳಿಸ ಬೇಕು. ಅಲ್ಲದೆ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಬಾರದು. ಜತೆಗೆ ರೈತರ ಸಾಲ ಮನ್ನಾ ಮಾಡುವುದರ ಜತೆಗೆ ಶೂನ್ಯ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಸ ಸಾಲ ನೀಡಬೇಕು ಎಂದು ಆಗ್ರಹಿಸಿದರು.

    ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಣಗಳ್ಳಿ ಬಸವರಾಜು, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಂ.ನಟರಾಜ್ ಮಾಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಜೂ.1ರೊಳಗೆ ಪಟ್ಟಣದ ಎಪಿಎಂಸಿಯಲ್ಲಿ ಮುಸುಕಿನ ಜೋಳ ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೊಳ್ಳೇಗಾಲಕ್ಕೆ ಭೇಟಿ ನೀಡಿದ ಸಂದರ್ಭ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಅಣಗಳ್ಳಿ ಬಸವರಾಜು ಎಚ್ಚರಿಸಿದರು.

    ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರವಿನಾಯ್ಡು, ಮುಖಂಡರಾದ ತೇರಂಬಳ್ಳಿ ಮಹದೇವಪ್ಪ, ರಾಮಕೃಷ್ಣ, ಗೋವಿಂದ್, ನಂಜೇಗೌಡ, ಬಸವಣ್ಣ, ಚಂದ್ರಶೇಖರ್, ಜೋಯಲ್, ದೊರೆಸ್ವಾಮಿ, ದೊಡ್ಡಯ್ಯ, ರಾಚಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts