More

    ಸಕಾಲಕ್ಕೆ ಸಾಲ ಮರುಪಾವತಿ ಮಾಡಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ

    ಬಾಗೇಪಲ್ಲಿ : ಡಿಸಿಸಿ ಬ್ಯಾಂಕ್‌ನ ಸಾಲ ಮರುಪಾವತಿಗೆ ಸರ್ಕಾರ ಎರಡು ತಿಂಗಳ ಕಾಲಾವಕಾಶ ನೀಡಿದೆ. ಲಾಕ್‌ಡೌನ್ ನಂತರ ಒಂದೇ ಬಾರಿ ಒಟ್ಟು ಕಂತುಗಳನ್ನು ಪಾವತಿಸಲು ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ಪಡೆದ ಸಾಲದ ಕಂತನ್ನು ಸಕಾಲಕ್ಕೆ ಮರುಪಾವತಿಸಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.

    ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಮಾರಗಾನುಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 63 ಸದಸ್ಯರಿಗೆ 61 ಲಕ್ಷ ರೂ.ಗಳ ಕೃಷಿ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು. ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಿಂದ ಸ್ತ್ರೀ ಶಕ್ತಿ ಸಂಘಗಳು ಹಾಗೂ ರೈತರು ಪಡೆದಿರುವ ಸಾಲದ ಕಂತಿನ ಹಣ ಪಾವತಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ, ಸಾಲ ಮರುಪಾವತಿಸುವ ಬಗ್ಗೆ ಹರಡಿರುವ ಗಾಳಿ ಮಾತುಗಳಿಗೆ ಕಿವಿಗೊಡದೆ ಬ್ಯಾಂಕ್‌ನಿಂದ ಪಡೆದ ಸಾಲದ ಕಂತನ್ನು ಸಕಾಲಕ್ಕೆ ಪಾವತಿಸಿ ಹೊರೆ ತಪ್ಪಿಸಿಕೊಳ್ಳಿ ಎಂದರು.

    ತಾಲೂಕಿನ ಸ್ತ್ರೀ ಶಕ್ತಿ ಸಂಘಗಳಿಗೆ ಒಂದು ಸಂಘಕ್ಕೆ ತಲಾ 5 ಲಕ್ಷ ರೂ.ಗಳಂತೆ, ಕಾಯಕ ಬಂಧು ಯೋಜನೆಯಡಿ ಮಹಿಳೆಯರಿಗೆ ತಲಾ ಒಂದು ಲಕ್ಷ ರೂ. ಸಾಲ ಸೌಲಭ್ಯ ಕಲ್ಪಿಸಿದ್ದೇವೆ. ಕರೊನಾ ಲಾಕ್‌ಡೌನ್ ಸಮಯದಲ್ಲಿಯೂ ಬಾಗೇಪಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಿಂದ 8 ಕೋಟಿ ರೂ.ಗಳ ಶೂನ್ಯ ಬಡ್ಡಿಯ ಸಾಲ ಸೌಲಭ್ಯ ನೀಡಿದ್ದೇವೆ. ಕರೊನಾ ಲಾಕ್‌ಡೌನ್ ಸಮಯದಲ್ಲಿಯೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಬದ್ಧರಾಗಿದ್ದೇವೆ. ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಸೂಚನೆಯಂತೆ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ 100 ಕೋಟಿ ರೂ. ಸಾಲ ನೀಡುವ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ತಿಳಿಸಿದರು.

    ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಿ.ಎನ್.ಚೇತನ್, ಮೇಲ್ವಿಚಾರಕ ಆಂಜನೇಯರೆಡ್ಡಿ, ಮಾರಗಾನುಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಇದಾಯಿತ್‌ವುಲ್ಲಾ, ಉಪಾಧ್ಯಕ್ಷ ವೆಂಕಟರಮಣಾರೆಡ್ಡಿ, ಮಾಜಿ ಅಧ್ಯಕ್ಷ ಸಿ.ಎನ್.ಭಾಸ್ಕರ್‌ರೆಡ್ಡಿ, ನಿರ್ದೇಶಕ ಆದಿನಾರಾಯಣಪ್ಪ, ಈಶ್ವರಮ್ಮ, ಸಿಇಒ ನಾಗರಾಜು, ಸಿಬ್ಬಂದಿ ನವೀನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts