More

    ರೇಣುಕಾಚಾರ್ಯ ಶ್ರೀಗಳ ಮಾನವೀಯ ಮೌಲ್ಯ ಸಮಾಜಕ್ಕೆ ಮಾದರಿ

    ಆಲೂರು: ಪ್ರೀತಿ, ವಾತ್ಸಲ್ಯ ಮತ್ತು ವಿಶ್ವಾಸದಿಂದ ಬದುಕನ್ನು ಬೆಳೆಸುವ ಕಾರ್ಯವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಂಡು ಬಾಳಿದರೆ ಜೀವನ ಸಾರ್ಥಕ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಾಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಶ್ರೀ ಮಠದ ವತಿಯಿಂದ ನೂತನವಾಗಿ ಹೊರ ತರಲಾಗುತ್ತಿರುವ ರೇಣುಕ ವಾಣಿ ಪ್ರಾಯೋಗಿಕಾ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಮನುಕುಲದ ಕಲ್ಯಾಣಕ್ಕಾಗಿ ಹಲವು ಆಚಾರ್ಯರು, ಪ್ರವಾದಿಗಳು ಈ ಭೂಮಿಯಲ್ಲಿ ಅವತರಿಸಿ ಬಂದು ಹೋಗಿದ್ದಾರೆ. ಅಂತಹ ಪರಂಪರೆಯಲ್ಲಿ ಅವತರಿಸಿದ ರೇಣುಕಾದಿ ಪಂಚಾಚಾರ್ಯರು ಪರಶಿವನ ಆದೇಶದಂತೆ ಅಭೂತ ಕಾಲದಲ್ಲಿ ಶಕ್ತಿ ವಿಶಿಷ್ಟದ್ವೈತ ಸಿದ್ಧಾಂತವನ್ನು ಪ್ರಚಾರಪಡಿಸಿ ವೀರಶೈವ ಧರ್ಮವನ್ನು ನೆಲೆಗೊಳಿಸಿದ್ದಾರೆ. ಅವರ ತತ್ವ ಸಿದ್ಧಾಂತ ಸಮಾಜದ ಸುಧಾರಣೆಗೆ ಸೋಪಾನವಾಗಬೇಕು ಎಂದರು.

    ಹಿರೇಮಠ ಪ್ರಥಮ ಬಾರಿಗೆ ರೇಣುಕ ವಾಣಿ ಎಂಬ ಪ್ರಯೋಜಕ ಸಂಚಿಕೆಯನ್ನು ಹೊರ ತರುತ್ತಿದ್ದು, ಈ ಮಾಸಪತ್ರಿಕೆ ಉತ್ತರೋತ್ತರವಾಗಿ ಅಭಿವೃದ್ಧಿಯಾಗಬೇಕಾದರೆ ಹೆಚ್ಚು ಓದುಗರ ವಿಶ್ವಾಸ ಗಳಿಸಬೇಕು. ಈ ಸಂಚಿಕೆಯಲ್ಲಿ ಧಾರ್ಮಿಕ ವಿಚಾರ, ಆಧ್ಯಾತ್ಮಿಕ ಚಿಂತನೆ, ಶೈಕ್ಷಣಿಕ ಮಾರ್ಗದರ್ಶನ ಒಳಗೊಂಡಿದೆ ಎಂದು ತಿಳಿಸಿದರು.

    ವೀರಶೈವ ಲಿಂಗಾಯತ ಸಂಘದ ಆಲೂರು ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ಸದಾಶಿವ ಶಿವಾಚಾರ್ಯ ಶ್ರೀಗಳು ಮಠದ ಪೀಠಾಧ್ಯಕ್ಷರಾದಾಗಿನಿಂದಲೂ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆರೋಗ್ಯ ಪೂರ್ಣ ಸಮಾಜ ಕಟ್ಟಲು ತಾಲೂಕು ವೀರಶೈವ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

    ವೀರಶೈವ ಸಂಘದ ತಾಲೂಕು ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ.ಜಯರಾಜ್, ಕಾಫಿ ಬೆಳೆಗಾರರ ಸಂಘದ ಸದಸ್ಯರಾದ ಬಾಳುಪೇಟೆ ಮಲ್ಲಿಕಾರ್ಜುನ್, ಸುಜಾತಾ ಕುಮಾರ್, ನಿವೃತ್ತ ಶಿಕ್ಷಣಾಧಿಕಾರಿ ಎಂ.ಬಿ ವಿಜಯಕಾಂತ್, ಪುರೋಹಿತರಾದ ಶಶಿಕುಮಾರ್, ದೇವರಾಜ್ ಶಾಸ್ತ್ರಿ, ಗ್ರಾಮದ ಹಿರಿಯ ಮುಖಂಡರಾದ ರಾಜಶೇಖರ್, ಯೋಗೇಶ್, ಯಶ್ವಂತ್, ಮಲ್ಲೇಶ್, ಲಿಂಗರಾಜು ಕೆರೆಹಳ್ಳಿ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts