More

    ಸಿಎಂ ಪರ ಸಹಿ ಸಂಗ್ರಹಿಸಿದ್ದು ನಿಜ- ಸೂಟು ಬೂಟು ಹಾಕ್ಕೊಂಡು ಕನಸು ಕಾಣ್ತಿರೋರು ಜಾತ್ರೆಯಲ್ಲಿ ತಿರುಗಾಡ್ಲಿ

    ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ ಸಿಎಂ ಪರವಾಗಿ ಶಾಸಕ ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಕಾರ್ಯದಲ್ಲಿ ತೊಡಗಿರುವುದು ಭಾರಿ ಚರ್ಚೆಯಾಗುತ್ತಿದೆ. ಈ ಕುರಿತು ಮೌನ ಮುರಿದಿರುವ ರೇಣುಕಾಚಾರ್ಯ ಅವರು, ಯಡಿಯೂರಪ್ಪ ಪರವಾಗಿ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದಿದ್ದಾರೆ.

    ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಲಿದ್ದು ಸಹಿ ಸಂಗ್ರಹವನ್ನು ನೀಡುತ್ತೇವೆ. ಆದರೆ ಈ ರೀತಿಯ ಸಹಿಯನ್ನು ಸಂಗ್ರಹಿಸುವುದು ಬೇಡ ಎಂದು ಖುದ್ದು ಯಡಿಯೂರಪ್ಪನವರೇ ಹೇಳಿದ್ದರಿಂದ ಇದನ್ನು ಸ್ಥಗಿತಗೊಳಿಸಿದ್ದೇವೆ. ಯಾರೋ ಮೂರು-ನಾಲ್ಕು ಮಂದಿ ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿಬಂದರೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂದು ರೇಣುಕಾಚಾರ್ಯ ಕಿಡಿ ಕಾರಿದರು. ನಾಯಕತ್ವದ ಬದಲಾವಣೆ ಕುರಿತಂತೆ ಇಲ್ಲಸಲ್ಲದ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅವರು ಹೇಳಿದರು.

    ಕೆಲವರು ಸೂಟು ಹೊಲಿಸಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ನಾನೇ ಮುಂದಿನ ಸಿಎಂ ಎಂದು ಧಾರವಾಡ, ವಿಜಯಪುರದ ಶಾಸಕರು ಸೇರಿದಂತೆ ಕೆಲವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಹೊಲಿಸಿಟ್ಟುಕೊಂಡ ಸೂಟು ಬೂಟುಗಳನ್ನು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಂಡು ತಿರುಗಾಡಲಿ ಎಂದು ವಾಗ್ದಾಳಿ ಮಾಡಿದರು.

    ನಾನೀಗ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದೇನೆ. ಇಲ್ಲಿರುವ ಕರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಯೋಗಸಾನ, ಪ್ರಾಣಾಯಾಮ, ಮನರಂಜನೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಸೋಂಕಿತರಿಗೆ ನೀಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಅವರು ಕೂಡ ಕರೊನಾ ವಿರುದ್ಧ ಸಾಕಷ್ಟು ದುಡಿಯುತ್ತಿದ್ದಾರೆ. ಅವರು ನೀಡಿರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ ಎಂದರು. ಯಾವ ದೇಶವೂ ನೀಡದ ಕರೊನಾ ಪ್ಯಾಕೇಜ್‌ ನಮ್ಮಲ್ಲಿ ನೀಡಲಾಗುತ್ತಿದೆ. ಈ ಬಗ್ಗೆ ಪ್ರಧಾನಿಗೆ ಆಭಾರಿಯಾಗಿರುವುದು ಜನರ ಕರ್ತವ್ಯವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts