More

    ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರಕ್ಕೆ ಅಡ್ಡಿ

    ರವೀಂದ್ರ ಕೋಟ
    ಇಲ್ಲಿನ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ತಾಗಿಕೊಂಡಿರುವ ಗುಂಡ್ಮಿ ಇಂದಿರಾ ಬಡಾವಣೆ ಸಮೀಪವಿರುವ ಬಬ್ಬುಸ್ವಾಮಿ ದೈವಸ್ಥಾನಕ್ಕೆ ನೆಲೆ ಒದಗಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಬಹು ವರ್ಷಗಳಿಂದ ಪರಿಶಿಷ್ಟ ಜಾತಿ ಹಾಗೂ ಸ್ಥಳೀಯರು ಆರಾಧಿಸಿಕೊಂಡು ಬಂದಿರುವ ಬಬ್ಬುಸ್ವಾಮಿಗೆ ಸಮರ್ಪಕ ನೆಲೆ ಇಲ್ಲ.
    ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿಯ ಗುಂಡ್ಮಿ ಗ್ರಾಮದ ಸರ್ವೇ ನಂಬರ್109/4ಎ ಯಲ್ಲಿ ಒಟ್ಟು 4 ಎಕರೆಗೂ ಅಧಿಕ ಸರ್ಕಾರಿ ಜಾಗವಿದ್ದು, ಅದರಲ್ಲಿ 2 ಎಕರೆಯನ್ನು ಸ್ಥಳೀಯ ಸರ್ಕಾರಿ ಶಾಲೆಗೆ ನೀಡಲಾಗಿದೆ. ಈ ಜಾಗದಲ್ಲಿ ಬಬ್ಬುಸ್ವಾಮಿ ಗುಡಿಯಿದ್ದು, ಹಿಂದಿನಿಂದಲೂ ಆರಾಧನೆ ಮಾಡಿಕೊಂಡು ಬರುತ್ತಿದ್ದರು. 1966ಕ್ಕೂ ಹಿಂದೆಯೇ ಪಹಣಿಪತ್ರದಲ್ಲಿ ಹುಲ್ಲಿನ ಛಾವಣಿಯ ಗುಡಿ ಎಂದು ನಮೂದಿಸಿರುವ ಈ ದೈವಸ್ಥಾನಕ್ಕೆ ನೆಲೆ ಒದಗಿಸಲು ಸಂಬಂಧಪಟ್ಟ ಇಲಾಖೆ ನಿರ್ಲಕ್ಷೃ ವಹಿಸಿದೆ. ಗುಡಿ ನಿರ್ಮಿಸಲು ಕೇವಲ 5 ಸೆಂಟ್ಸ್ ಜಾಗವಾದರೂ ಕೊಡಿ ಎಂದು ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಭಕ್ತರ ಮನವಿಗೆ ಬೆಲೆ ಇಲ್ಲದಾಗಿದೆ. ಇಲ್ಲಿ 4 ಎಕರೆಗೂ ಅಧಿಕ ಸರ್ಕಾರಿ ಸ್ಥಳದಲ್ಲಿ ಶಾಲೆ, ಮನೆ, ಅಕ್ರಮ ಕಟ್ಟಡ, ಮಸೀದಿ ನಿರ್ಮಿಸಲು ಅವಕಾಶವಿರುವಾಗ ದೇವರಿಗೆ ಸ್ಥಳ ನೀಡಲು ಮಾತ್ರ ಸಮಸ್ಯೆ ಎದುರಾಗಿದೆ.

    ಹದಿನಾಲ್ಕು ಗ್ರಾಮಗಳ ಒಡೆಯ: ಕೋಟ ಹೊಬಳಿಯ ಹದಿನಾಲ್ಕು ಗ್ರಾಮದ ಪರಿಶಿಷ್ಟ ಜಾತಿಯವರ ಕುಲದೇವರಾದ ಶ್ರೀ ಬಬ್ಬುಸ್ವಾಮಿ ಗುಂಡ್ಮಿ ಗ್ರಾಮದಲ್ಲಿ ನೆಲೆಯಾಗಿ ಅದೆಷ್ಟು ವರ್ಷಗಳು ಕಳೆದಿವೆ. ಆದರೆ ದೈವಸ್ಥಾನದ ಜೀರ್ಣೋದ್ಧಾರ ಕನಸು ಕಂಡ ಭಕ್ತರಿಗೆ ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ. ಶೀಘ್ರವೇ ಸಂಬಂಧಿಸಿದ ಇಲಾಖೆ ಮಧ್ಯಪ್ರವೇಶಿಸಿ ಜೀರ್ಣೋದ್ಧಾರಕ್ಕೆ ಸ್ಥಳಾವಕಾಶ ನೀಡಬೇಕಾಗಿದೆ ಎಂಬುವುದು ಭಕ್ತರ ಆಶಯ.

    ಸಚಿವರ ತವರು ನೆಲದಲ್ಲಿ ತಕರಾರು: ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ತವರು ನೆಲ ಹದಿನಾಲ್ಕು ಗ್ರಾಮಗಳನ್ನು ಸೇರಿಕೊಂಡಿರುವ ಸಾಸ್ತಾನ ಗುಂಡ್ಮಿಯಲ್ಲಿ ದೇವಳ ನಿರ್ಮಿಸುವುದಕ್ಕೆ ತಕರಾರು ಎದ್ದಿದ್ದು, ಬಬ್ಬುಸ್ವಾಮಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ತಮ್ಮ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿದರು. ಆದರೆ ದೇವಳ ನಿರ್ಮಾಣಕ್ಕೆ ಹಲವು ಸಮಸ್ಯೆಗಳು ಎದುರಾಗಿದ್ದು, ಸ್ವತಃ ಸಚಿವರೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ದೈವಸ್ಥಾನ ಜೀರ್ಣೋದ್ಧಾರಕ್ಕೆ ಪರಿಶಿಷ್ಟ ಜಾತಿಯ ಮುಖಂಡರು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ

    ಗುಂಡ್ಮಿ ಗ್ರಾಮದಲ್ಲಿರುವ ಶಾಲೆಗೆ ಮೀಸಲಿಸಿದ ಸರ್ಕಾರಿ ಸ್ಥಳದಲ್ಲಿ ಅಕ್ರಮ ಮನೆಗಳು, ಇನ್ನಿತರ ಕಟ್ಟಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅನಾದಿ ಕಾಲದಿಂದ ನಮ್ಮ ಹಿರಿಯರು ಪೂಜಿಸುತ್ತ ಬಂದ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸರ್ಕಾರಿ ಶಾಲೆ ಜಮೀನು ಎನ್ನುವ ಅಡ್ಡಿ ಎದುರಾಗಿದೆ. ಭೂಮಿಯಲ್ಲಿ ನಮಗೆ 5 ಸೆಂಟ್ಸ್ ಮಂಜೂರು ಮಾಡಿ ಎಂದರೂ ಜನಪ್ರತಿನಿಧಿಗಳು ನಿರ್ಲಕ್ಷೃ ತೋರುತ್ತಿದ್ದಾರೆ.
    | ನಾರಾಯಣ ಅಧ್ಯಕ್ಷರು ಬಬ್ಬುಸ್ವಾಮಿ ದೈವಸ್ಥಾನ ಗುಂಡ್ಮಿ

    ಬಬ್ಬುಸ್ವಾಮಿ ದೈವಸ್ಥಾನಕ್ಕೆ ಈ ಹಿಂದೆ ಧಾರ್ಮಿಕ ಮತ್ತು ದತ್ತಿ ಇಲಾಖೆ ವತಿಯಿಂದ 5 ಲಕ್ಷ ರೂಪಾಯಿ ಮಂಜೂರಾತಿ ಮಾಡಿದ್ದೇನೆ. ಅಲ್ಲಿ ಸ್ಥಳದ ಕೊರತೆಯಿಂದ ದೈವಸ್ಥಾನ ಅಭಿವೃದ್ಧಿ ಹಿನ್ನಡೆ ಕಂಡಿದೆ. ಸ್ಥಳೀಯ ಆಕ್ಷೇಪಗಳನ್ನು ಬಗೆಹರಿಸಿಕೊಂಡು, ದೈವಸ್ಥಾನ ಅಭಿವೃದ್ಧಿಗೆ ಬೇಕಾಗುವ ಸಹಕಾರ ನೀಡಲಾಗುವುದು.
    | ಕೋಟ ಶ್ರೀನಿವಾಸ ಪೂಜಾರಿ ಧಾರ್ಮಿಕ ಮತ್ತು ದತ್ತಿ ಇಲಾಖೆ

    ಶಿಕ್ಷಣ ಇಲಾಖೆಗೆ ಮಂಜೂರಾದ ಸ್ಥಳದಲ್ಲಿ ದೇವಳ ನಿರ್ಮಾಣಕ್ಕೆ ಅವಕಾಶ ನೀಡಲು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಪಕ್ರಿಯೆ ಪೂರ್ಣಗೊಳಿಸುತ್ತೇನೆ.
    | ಜಿ.ಜಗದೀಶ್ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts