More

    ರೆಮ್ೆಸಿವಿರ್ ಔಷಧ ಬಂಗಾರವಿದ್ದಂತೆ..!

    ಹಾವೇರಿ: ಕಾಳಸಂತೆಯಲ್ಲಿ ರೆಮ್ೆಸಿವಿರ್ ಔಷಧ ಮಾರಾಟ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
    ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ಬುಧವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಿ ಅವರು ಮಾತನಾಡಿದರು. ರೆಮ್ೆಸಿವಿರ್ ಔಷಧ ಬಂಗಾರವಿದ್ದಂತೆ. ಅದನ್ನು ಅನಗತ್ಯವಾಗಿ ಬಳಸಬೇಡಿ. ಅಗತ್ಯ ಇದ್ದವರಿಗೆ ಮಾತ್ರ ನೀಡಿ. ದುರ್ಬಳಕೆ ಮಾಡಬೇಡಿ. ಜಿಲ್ಲೆಯಲ್ಲಿ ರೆಮ್ೆಸಿವಿರ್ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ, ರೆಮ್ೆಸಿವಿರ್ ಕಾಳಸಂತೆಗೆ ಹೋಗುತ್ತದೆ. ಒಂದು ವೇಳೆ ಕಾಳಸಂತೆಯಲ್ಲಿ ಔಷಧ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುವುದು ಎಂದರು.
    ಜಿಲ್ಲೆಯಲ್ಲಿ ಹೋಂ ಐಸೊಲೇಷನ್​ನಲ್ಲಿರುವ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಅದನ್ನು ಖಾತರಿಪಡಿಸಿಕೊಳ್ಳಿ. ಸೋಂಕಿತರ ಮನೆಗಳಿಂದಲೇ ಬಹಳಷ್ಟು ಜನರಿಗೆ ಸೋಂಕು ಹರಡುತ್ತಿದೆ. ಆದ್ದರಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಲು ಸಾಧ್ಯವಾಗದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿ. ಈ ಕೆಲಸಕ್ಕೆ ಪಿಡಿಒ ಮತ್ತು ಇತರ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಿ ಎಂದರು. ಆಕ್ಸಿಜನ್ ಸಿಲಿಂಡರ್ ಬಳಕೆ ಸಮರ್ಪಕವಾಗಿ ಆಗಬೇಕು. ಪ್ರತಿದಿನ ಖಾಲಿಯಾಗುವ ಸಿಲಿಂಡರ್​ಗಳನ್ನು ಅದೇದಿನ ಸಂಜೆ ಭರ್ತಿಗೆ ಧಾರವಾಡಕ್ಕೆ ಕಳಿಸಿ. ಮರುದಿನ ಬೆಳಗ್ಗೆ ಎಲ್ಲ ಸಿಲಿಂಡರ್​ಗಳು ಭರ್ತಿಯಾಗಿ ಮರುಬಳಕೆಗೆ ಸಿದ್ಧವಾಗಿರುವಂತೆ ಮುಂಜಾಗ್ರತೆ ವಹಿಸಬೇಕು. ತಕ್ಷಣ 1ಸಾವಿರ ಆಕ್ಸಿಜನ್ ಜನರೇಟರ್​ಗಳನ್ನು ಖರೀದಿಸಿ. ಎಸ್​ಡಿಆರ್​ಎಫ್ ಅಡಿ ಹಣವನ್ನು ಬಳಕೆ ಮಾಡಿಕೊಳ್ಳಿ. ಹೆಚ್ಚುವರಿಯಾಗಿ ಆಂಬುಲೆನ್ಸ್ ಗಳನ್ನು ಬಾಡಿಗೆ ಪಡೆಯಿರಿ. ವೈದ್ಯರು ಮತ್ತು ಸಿಬ್ಬಂದಿ ನೇಮಿಸಿಕೊಳ್ಳಲು ಸಂಪೂರ್ಣ ಅಧಿಕಾರವನ್ನು ತಹಸೀಲ್ದಾರ್​ಗೆ ನೀಡಲಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಿದ್ದರೆ ಅದಕ್ಕೆ ನೀವೇ ಜವಾಬ್ದಾರರು ಎಂದು ಎಚ್ಚರಿಸಿದರು.
    ಅಗತ್ಯವಿರುವ ಸ್ಟಾಫ್​ನರ್ಸ್ ಮತ್ತು ಇತರ ಸಿಬ್ಬಂದಿಯನ್ನು ತಕ್ಷಣ ನೇಮಿಸಿಕೊಳ್ಳಿ. ಕೋವಿಡ್ ಕೇರ್ ಸೆಂಟರ್​ಗೆ ಆಯುಷ್ ವೈದ್ಯರನ್ನು ನೇಮಿಸಿ. ಬಿಎಸ್ಸಿ ನರ್ಸಿಂಗ್ ಪದವಿ ಮುಗಿದ ವಿದ್ಯಾರ್ಥಿಗಳನ್ನು ತಕ್ಷಣ ಕರ್ತವ್ಯಕ್ಕೆ ಸೇರಿಸಿಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.
    ಗೃಹಸಚಿವರೊಂದಿಗೆ ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts