More

    ಧರ್ಮ ಬೆಳೆದರೆ ಮಾತ್ರ ಬದುಕು ಉಜ್ವಲ; ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರ ಅಭಿಮತ

    ಲಿಂಗಸುಗೂರು: ಸಮಾಜದಲ್ಲಿ ಜಾತಿಗಿಂತ ಧರ್ಮವು ಹೆಚ್ಚೆಚ್ಚು ಬೆಳೆದಾಗ ಮಾತ್ರ ಎಲ್ಲರ ಬದುಕು ಉಜ್ವಲಗೊಳ್ಳಲು ಸಾಧ್ಯವಿದ್ದು, ಸರ್ವರಿಗೂ ಸರ್ವಕಾಲಕ್ಕೂ ಬೆಳಕು ನೀಡುವುದು ಧರ್ಮವೇ ಹೊರತು ಜಾತಿಯಲ್ಲ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.

    ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ನಡೆದ ಧರ್ಮ ಜಾಗೃತಿ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಧರ್ಮವನ್ನು ಜಾತಿಗೆ ಹೋಲಿಸಿ ಧರ್ಮದ ಗೌರವ ಘನತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿರಬಹುದು. ಆದರೆ ಧರ್ಮದಲ್ಲಿನ ದೂರದೃಷ್ಟಿ ಮತ್ತು ಸಮಗ್ರತೆ ಜಾತಿಯಲ್ಲಿ ಕಾಣಲು ಸಾಧ್ಯವಿಲ್ಲ. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರು ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಎಲ್ಲರೂ ಜಾಗೃತಗೊಂಡು ಸರಿ ತಪ್ಪಿನ ವಿವೇಚನೆ ತೋರಬೇಕಿದೆ.

    ಭಾರತ ಧರ್ಮ ಪ್ರಧಾನವಾದ ದೇಶವಾಗಿದ್ದು, ಹತ್ತು ಹಲವು ಧರ್ಮ, ಪರಂಪರೆಗಳು ಈ ನಾಡಿನಲ್ಲಿ ಬೆಳೆದು ಬಂದಿವೆ. ಧರ್ಮಾಚರಣೆಗಳು ಬೇರೆ ಬೇರೆ ಇರಬಹುದು. ಆದರೆ ಎಲ್ಲ ಧರ್ಮಗಳು ಮಾನವ ಕಲ್ಯಾಣಕ್ಕಾಗಿ ಸಂದೇಶ ಸಾರುತ್ತವೆ. ಅದರಂತೆ ವೀರಶೈವ ಧರ್ಮ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷವಾಕ್ಯದಂತೆ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬರುತ್ತಿದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಇವೆಲ್ಲ ಬಹುದೊಡ್ಡವು ಎಂದು ಶ್ರೀ ರೇಣುಕರು ಪ್ರತಿಪಾದಿಸಿದ್ದಾರೆ. ಮಾನವನ ಒಳಿತಿಗಾಗಿ ಜೀವನದ ಉತ್ಕರ್ಷತೆಗಾಗಿ ಧರ್ಮ ಇರಬೇಕೇ ಹೊರತು, ಮಾನವನ ಮನಸ್ಸು ವಿಚ್ಛಿದ್ರ ಮತ್ತು ಕಲುಷಿತಗೊಳಿಸುವಂತಹ ಧರ್ಮ ಆಗಬಾರದು ಎಂದರು.

    ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಚರಮೂರ್ತೇಶ್ವರ ಮಠದ ಸದಾನಂದ ಶಿವಾಚಾರ್ಯರು, ಮಹಾಂತಿನಮಠದ ಮರಿಮಹಾಂತ ದೇವರು, ಹುನಕುಂಟಿ ಶರಣಯ್ಯ ತಾತನವರು, ಮಾಜಿ ಶಾಸಕ ಮಾನಪ್ಪ ವಜ್ಜಲ್, ಸಮಿತಿ ಕಾರ್ಯದರ್ಶಿ ಡಾ.ಶರಣಗೌಡ ಪಾಟೀಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts