More

    ಆಸ್ಪತ್ರೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ

    ಚನ್ನರಾಯಪಟ್ಟಣ: ಶ್ರವಣಬೆಳಗೊಳ ವಿಧಾನಸಭಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಕೋರಿದರು.

    ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಶೂನ್ಯ ವೇಳೆ ಸರ್ಕಾರದ ಗಮನ ಸೆಳೆದ ಅವರು, ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿ ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿದೆ. ನುಗ್ಗೇಹಳ್ಳಿ ಸಮುದಾಯ ಕೇಂದ್ರಕ್ಕೆ ಶವಾಗಾರದ ಕೊಠಡಿ ಅವಶ್ಯಕತೆ ಇದೆ. ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವುದರಿಂದ, ಅನುದಾನ ಬಿಡುಗಡೆ ಮಾಡಬೇಕು. ಶ್ರವಣಬೆಳಗೊಳ ಸಮುದಾಯ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ವಿಧಾನಸಭಾಧ್ಯಕ್ಷರ ಮೂಲಕ ಒತ್ತಾಯಿಸಿದರು.

    ಇದಕ್ಕುತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಡೀ ರಾಜ್ಯದ ಆಸ್ಪತ್ರೆಗಳ ನಿರ್ವಹಣೆಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಈ ಅನುದಾನದಲ್ಲಿ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಅನುದಾನ ಹೆಚ್ಚಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಪ್ರಸಕ್ತ ಇರುವ ವ್ಯವಸ್ಥೆಯನ್ನೇ ಉತ್ತಮಪಡಿಸಲು ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರಗಳ ದುರಸ್ತಿಗೆ 190 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆಗೆ ನೀಡಲಾಗಿದೆ. ನಿರ್ವಹಣೆಯನ್ನು ಸುಸ್ಥಿತಿಯಲ್ಲಿ ಇಡಲು ಹಾಗೂ ಅಗತ್ಯ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಮೂಲಸೌಕರ್ಯ ಕಲ್ಪಿಸಿ ಆಸ್ಪತ್ರೆಗಳು ಸುಂದರವಾಗಿ ಕಾಣುವಂತೆ ಮಾಡಲು ಅಗತ್ಯ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ವಿಶೇಷವಾಗಿ ಶ್ರವಣಬೆಳಗೊಳ ಸಮುದಾಯ ಕೇಂದ್ರಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts