More

    ಯುಕೆಪಿ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಿ – ಮಾಜಿ ಶಾಸಕ ಕಾಶಪ್ಪನವರ ಆಗ್ರಹ

    ಕೂಡಲಸಂಗಮ: ಮಲಪ್ರಭೆ ನದಿ ತೀರದ ಹುನಗುಂದ ತಾಲೂಕಿನ 26 ಗ್ರಾಮಗಳನ್ನು ಮುಳುಗಡೆ ವ್ಯಾಪ್ತಿಗೆ ಸೇರಿಸಿ ಯುಕೆಪಿ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಗ್ರಹಿಸಿದರು.

    ಪ್ರವಾಹ ಪೀಡಿತ ಹಳ್ಳಿಗಳಿಗೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಜಿಲ್ಲಾ ಉಸ್ತವಾರಿ ಸಚಿವರು, ಸ್ಥಳೀಯ ಶಾಸಕರು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವುದರಲ್ಲಿ ಬ್ಯೂಸಿಯಾಗಿದ್ದಾರೆ. ಸಂತ್ರಸ್ತರ ಸಮಸ್ಯೆ ಅವರಿಗೆ ಯಾವಾಗ ಕಾಣಬೇಕು? ಶಾಸಕ ದೊಡ್ಡನಗೌಡ ಪಾಟೀಲರಿಗೆ ಮನುಷ್ಯತ್ವ, ಕನಿಕರ ಇಲ್ಲವೇ ಇಲ್ಲ. ತಾಲೂಕಿನ ಜನ ಪ್ರವಾಹಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಿದ್ದರೂ ಅವರನ್ನು ಭೇಟಿಯಾಗುವ ಸೌಜನ್ಯ ತೋರುತ್ತಿಲ್ಲ. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿದರು.

    ಪ್ರವಾಹಕ್ಕೆ ಸಿಲುಕಿ ಮನೆ, ಬೆಳೆಗಳಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಹೂವನೂರ, ನಂದನೂರ, ಗಂಜಿಹಾಳ, ಹಿರೇಮಳಗಾವಿ, ಪಾಪತನಾಳ ಗ್ರಾಮದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಊರು ಬಿಟ್ಟು ಸುರಕ್ಷಿತ ಸ್ಥಳದಲ್ಲಿ ವಾಸವಾಗಿರುವ ಸಂತ್ರಸ್ತರ ಅನುಕೂಲಕ್ಕಾಗಿ ಕಾಳಜಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

    ಮುಖಂಡರಾದ ಗಂಗಾಧರ ದೊಡಮನಿ, ಮುತ್ತಣ್ಣ ಕಲಗುಡಿ, ವಿಜಯ ಗದ್ದನಕೇರಿ, ಗಂಗಣ್ಣ ಬಾಗೇವಾಡಿ, ಶ್ರೀಕಾಂತ ಹಿರೇಮಠ, ಸುರೇಶ ಜಂಗ್ಲಿ ಇದ್ದರು.

    ಪ್ರವಾಹದಲ್ಲಿ ಕೊಚ್ಚಿಹೋದ ದೇವಾನಂದ ಕಮ್ಮಾರ ಅವರ ಮನೆಗೆ ಭೇಟಿ ನೀಡಿ ಕುಟಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ದೋಣಿಯಲ್ಲಿ ಸಂಚರಿಸಿ ಪ್ರವಾಹಪೀಡಿತ ಹಳ್ಳಿಗಳನ್ನು ವೀಕ್ಷಿಸಿದರು.

    ಸಂತ್ರಸ್ತರಿಗೆ ಭರವಸೆ: ಎಲ್ಲ ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಇಲ್ಲಿವರೆಗೆ ನಮಗೆ ಯಾರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಭರವಸೆ ಬೇಡ, ಸೂಕ್ತ ಪರಿಹಾರ ಕಲ್ಪಿಸಿ ಎಂದು ಹೂವನೂರಿನ ಮಹಿಳೆಯರು ವಿಜಯಾನಂದ ಕಾಶಪ್ಪನವರಿಗೆ ವಿನಂತಿಸಿಕೊಂಡಾಗ, ಎಂಟು ತಿಂಗಳು ತಡೆಯಿರಿ, ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ ಎಂದು ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts