More

    ಸಕಾಲ ಅರ್ಜಿ ಸ್ವೀಕೃತಿ ನೋಂದಣಿ ಕಡ್ಡಾಯ

    ಹಾವೇರಿ: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಂದ 11 ವಿವಿಧ ಸೇವೆಗಳಿಗೆ ಸ್ವೀಕೃತಿಯಾಗುತ್ತಿದ್ದ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ಅಳವಡಿಸದೇ ಬೈಪಾಸ್ ಮೂಲಕ ಮಾಡುತ್ತಿದ್ದ ಗ್ರಾಪಂಗಳ ಕಾರ್ಯವೈಖರಿಗೆ ಇನ್ಮುಂದೆ ಅಂಕುಶ ಬೀಳಲಿದೆ. ಬೈಪಾಸ್ ಮಾಡುವ ನೌಕರರ ಮೇಲೆ ಶಿಸ್ತುಕ್ರಮವೂ ಆಗಲಿದೆ.

    ರಾಜ್ಯದ 6,021 ಗ್ರಾಪಂಗಳಲ್ಲಿ ಈಗಾಗಲೇ ಸಕಾಲ ಸೇವೆಯನ್ನು ಜಾರಿಗೊಳಿಸಲಾಗಿದೆ. ಆದರೂ ಗ್ರಾಪಂ ನೌಕರರು ಸಾರ್ವಜನಿಕರು ವಿವಿಧ ಸೇವೆಗಳಿಗೆ ಸಲ್ಲಿಸುತ್ತಿದ್ದ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೋಂದಣಿ ಮಾಡದೇ ಅಧಿನಿಯಮವನ್ನು ಉಲ್ಲಂಘಿಸುವುದು ಯಥೇಚ್ಛವಾಗಿತ್ತು. ಸಾರ್ವಜನಿಕರಿಂದ ಸ್ವೀಕೃತವಾಗುತ್ತಿದ್ದ ಅರ್ಜಿಗಳನ್ನು ಸಕಾಲದಲ್ಲಿ ಅಳವಡಿಸದೇ ಬೈಪಾಸ್ ಮೂಲಕ ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಸಕಾಲ ಅರ್ಜಿ ಬೈಪಾಸ್​ಗೆ ಅಂಕುಶ ಹಾಕಲು ಫೆ. 3ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ.

    ಡಿಜಿಟಲ್ ಸಹಿಯಿಲ್ಲದ ಪ್ರಮಾಣಪತ್ರಗಳಿಗೂ ಮಾನ್ಯತೆ ರದ್ದು: ಗ್ರಾಪಂಗಳಲ್ಲಿ 11 ಸೇವೆಗಳ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿಯೇ ಸ್ವೀಕರಿಸಿ ಪಿಡಿಒಗಳ ಡಿಜಿಟಲ್ ಸಹಿಯೊಂದಿಗೆ ಅವುಗಳ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಸಕಾಲ ಅರ್ಜಿ ಸಂಖ್ಯೆ ದಾಖಲಿಸದೇ ಬೈಪಾಸ್ ಮಾಡಿ ಪಿಡಿಒಗಳ ಡಿಜಿಟಲ್ ಸಹಿಯಿಲ್ಲದೇ ವಿತರಣೆಯಾಗುವ ಪ್ರಮಾಣಪತ್ರಗಳು ಕಾನೂನು ಬದ್ಧವಾಗಿ ಮಾನ್ಯವಲ್ಲ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

    ಸಕಾಲದಲ್ಲಿನ ಸೇವೆಗಳೇನು: ಕರ ನಿರ್ಧರಣಾ ಪಟ್ಟಿಯ ಬದಲಾವಣೆ, ಕಟ್ಟಡ ಲೈಸೆನ್ಸ್, ಸಾಮಾನ್ಯ ಲೈಸೆನ್ಸ್(ವಾಣಿಜ್ಯ), ಕುಡಿಯುವ ನೀರು, ಬೀದಿದೀಪಗಳ, ಗ್ರಾಮ ನೈರ್ಮಲ್ಯ ನಿರ್ವಹಣೆ, ನರೇಗಾದಲ್ಲಿ ಅಕುಶಲ ಕಾರ್ವಿುಕರಿಗೆ ಉದ್ಯೋಗ ನೀಡುವುದು, ಹೆಸ್ಕಾಂಗೆ ನಿರಪೇಕ್ಷಣಾ ಪ್ರಮಾಣಪತ್ರ, ನಮೂನೆ 9, ನಮೂನೆ 11ಬಿ, ಜನಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಮತ್ತು ಗ್ರಾಪಂನಿಂದ ಕಡ್ಡಾಯವಾಗಿ ನಿರ್ವಹಿಸಬೇಕಿರುವ ದಸ್ತಾವೇಜುಗಳನ್ನು ನೀಡುವುದು. ಈ ಎಲ್ಲ ಸೇವೆಗಳನ್ನು ಕಡ್ಡಾಯವಾಗಿ ಸಕಾಲದಲ್ಲಿ ನೋಂದಣಿ ಮಾಡಿ ಸಕಾಲ ಅರ್ಜಿ ಸಂಖ್ಯೆಯನ್ನು ದಾಖಲಿಸಿ ಪ್ರಮಾಣಪತ್ರ ನೀಡಬೇಕು ಎಂದು ಸೂಚಿಸಲಾಗಿದೆ.

    ನಿಗಾಕ್ಕೆ ಹಿರಿಯ ಅಧಿಕಾರಿಗಳಿಗೆ ಸೂಚನೆ: ಸಾರ್ವಜನಿಕರಿಂದ ಗ್ರಾಪಂಗೆ ವಿವಿಧ ಸೇವೆ ಬಯಸಿ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ಅಳವಡಿಸಿ ಅರ್ಜಿ ಸಂಖ್ಯೆಯನ್ನು ನೀಡಲು ಗ್ರಾಪಂಗಳು ಕ್ರಮ ವಹಿಸಲು ಜಿಪಂ ಸಿಇಒ, ಉಪಕಾರ್ಯದರ್ಶಿ, ತಾಪಂ ಇಒ ನಿಗಾವಹಿಸುವಂತೆಯೂ ಸೂಚಿಸಲಾಗಿದೆ.

    ಶಿಸ್ತು ಕ್ರಮದ ಎಚ್ಚರಿಕೆ: ಇನ್ಮುಂದೆ ಗ್ರಾಪಂಗಳಿಗೆ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ಅಳವಡಿಸದೇ ಬೈಪಾಸ್ ಮಾಡಿದರೆ ಅಂತಹ ಪಿಡಿಒಗಳ ವಿರುದ್ಧ ಕರ್ನಾಟಕ ಸಿವಿಲ್ ಸೇವಾ ನಿಯಮಗಳು, 1957ರನ್ವಯ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಎಸ್.ಎ. ಅಶ್ರಫುಲ್​ಹಸನ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

    ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಹೊರಡಿಸಿರುವ ಸುತ್ತೋಲೆಯು ಕಡ್ಡಾಯವಾಗಿ ಜಾರಿಯಾದರೆ ಗ್ರಾಪಂಗಳಲ್ಲಿ ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ನಿರಂತರ ಅಲೆದಾಟ ತಪ್ಪಲಿದೆ. ಸಕಾಲದಲ್ಲಿ ಅರ್ಜಿ ನೋಂದಣಿಯಾಗಿ ಸ್ವೀಕೃತಿ ಅರ್ಜಿ ಸಂಖ್ಯೆ ಲಭಿಸಿದರೆ ಅರ್ಜಿ ಯಾವ ಹಂತದಲ್ಲಿದೆ ಎಂದು ಅರ್ಜಿದಾರರು ಆನ್​ಲೈನ್​ನಲ್ಲಿಯೇ ಪರಿಶೀಲಿಸಿಕೊಳ್ಳಬಹುದು. ನಿಗದಿತ ದಿನದಂದು ಅಧಿಕಾರಿಗಳು ಅರ್ಜಿಯನ್ನು ವಿಲೇವಾರಿ ಮಾಡುವುದು ಕಡ್ಡಾಯವಾಗಿರುವುದರಿಂದ ಪದೇಪದೆ ಪಂಚಾಯಿತಿಗೆ ಹೋಗದೇ ನಿಗದಿತ ದಿನದಂದು ಹೋಗಿ ಪ್ರಮಾಣಪತ್ರ ಪಡೆಯಬಹುದು. ಅನಗತ್ಯ ವಿಳಂಬ, ಅಲೆದಾಟದ ಜೊತೆಗೆ ಭ್ರಷ್ಟಾಚಾರಕ್ಕೂ ಇದು ಕಡಿವಾಣ ಹಾಕಲಿದೆ. ಸಿಇಒ ಹಾಗೂ ಇಒಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ಶ್ರಮಿಸಬೇಕು.

    | ನಾಗರಾಜ ಕೋಣನವರ, ಕೋಣನತಂಬಿಗಿ ಗ್ರಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts