More

    ‘ಪಡಸಾಲೆ’ಯಲ್ಲಿ ನೋಂದಣಿ ಸ್ಥಗಿತ

    ಯಳಂದೂರು: ಪಟ್ಟಣದ ಮಿನಿವಿಧಾನಸೌಧದ ಕಚೇರಿಯಲ್ಲಿರುವ ಪಡಸಾಲೆ ಕೇಂದ್ರದಲ್ಲಿ ಕಳೆದ ಹಲವು ದಿನಗಳಿಂದ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ನೋಂದಣಿ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದ್ದು, ವಿವಿಧ ಸರ್ಕಾರಿ ಸೌಲಭ್ಯಗಳಿಗೆ ದಾಖಲಾತಿ ಸಂಗ್ರಹಿಸಲು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಡಸಾಲೆಯಲ್ಲಿ ಆಧಾರ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಪಹಣಿ ಸೇರಿದಂತೆ 100ಕ್ಕೂ ಹೆಚ್ಚು ಸೇವೆ ಒದಗಿಸುವ ಆಶಯದೊಂದಿಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿತ್ತು. ಆದರೆ, ಹಲವು ದಿನಗಳಿಂದ ಯುಪಿಎಸ್ ಕೆಟ್ಟು ಹೋಗಿರುವುದರಿಂದ ಯಾವುದೇ ಕೆಲಸಗಳು ನಡೆಯುತ್ತಿಲ.್ಲ ಹಾಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

    ದಾಖಲಾತಿಗಳಿಗೆ ಹೆಚ್ಚಿನ ಬೇಡಿಕೆ: ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನೇಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದೆ. ಇದನ್ನು ಪಡೆಯಬೇಕಾದರೆ ಜಾತಿ, ಆದಾಯ, ಪಹಣಿ, ರೇಷನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಪ್ರತಿನಿತ್ಯ ದಾಖಲಾತಿಗಾಗಿಯೇ ದೂರದ ಗ್ರಾಮಗಳಿಂದ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗೆ ಬರುವ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸಾಗುತ್ತಿದ್ದಾರೆ.

    ಮೂಲಸೌಕರ್ಯ ಕೊರತೆ: ಪಡಸಾಲೆಯಲ್ಲಿ ಹಲವು ತಿಂಗಳಿಂದಲೂ ಕುಡಿಯುವ ನೀರು, ಕುರ್ಚಿ, ಟಿವಿ ಸೇರಿದಂತೆ ಇನ್ನಿತರೆ ಸೌಲಭ್ಯಗಳಿಲ್ಲ. ಆಧಾರ್ ಕಾರ್ಡ್ ನೋಂದಣಿ ಸ್ಥಗಿತವಾಗಿದೆ, ಇದರಿಂದ ಚಿಕ್ಕ ಮಕ್ಕಳು ಹೊಸದಾಗಿ ಆಧಾರ್ ಮಾಡಿಸಲು ಹಾಗೂ ತಿದ್ದುಪಡಿ ಮಾಡಿಸಲು ಕಷ್ಟವಾಗುತ್ತಿದೆ. ಇತರೆ ಸೇವೆಗಳೂ ಲಭಿಸುತ್ತಿಲ್ಲ.

    ತಹಸೀಲ್ದಾರ್ ನೇಮಿಸಿ: ತಾಲೂಕಿಗೆ ಹಲವು ತಿಂಗಳಿಂದಲೂ ಪ್ರಭಾರ ತಹಸೀಲ್ದಾರ್ ಇದ್ದಾರೆ. ಇದರಿಂದಾಗಿ ಇಲ್ಲಿನ ಸಮಸ್ಯೆಗಳು ಸೂಕ್ತ ಸಮಯದಲ್ಲಿ ನಿವಾರಣೆಯಾಗದೆ ವಿಳಂಬವಾಗುತ್ತಿದೆ. ಕೂಡಲೇ ಖಾಯಂ ತಹಸೀಲ್ದಾರ್ ನೇಮಕವಾಗಬೇಕು. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿ ಕೂಡಲೇ ಗಮನಹರಿಸಿ ಕ್ರಮ ವಹಿಸಲಿ ಎಂಬುದು ಅಲ್ಕೆರೆ ಅಗ್ರಹಾರ ರಂಗಸ್ವಾಮಿ, ಪ್ರಕಾಶ್ ಸೇರಿದಂತೆ ಹಲವರ ಆಗ್ರಹವಾಗಿದೆ.

    ಪಡಸಾಲೆಯಲ್ಲಿ ತಾಂತ್ರಿಕ ಸಮಸ್ಯೆಗಳು ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಸಾರ್ವಜನಿಕರ ಕೆಲಸಕ್ಕೆ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗುವುದು.
    ಜೆ. ಮಹೇಶ್, ತಹಸೀಲ್ದಾರ್ ಯಳಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts