More

    ತುಮಕೂರಿನ ಮಸೀದಿಗಳಲ್ಲಿ ಪ್ರಾರ್ಥನಾ ಸಮಯ ಕಡಿತ

    ತುಮಕೂರು: ಕರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ನಗರದ ಮಸೀದಿಗಳಲ್ಲಿ ಪ್ರಾರ್ಥನಾ ಸಮಯವನ್ನು ಕಡಿತಗೊಳಿಸಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ.

    ಪಾಲಿಕೆ ಸಭಾಂಗಣದಲ್ಲಿ ಗುರುವಾರ ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕರೆಯಲಾಗಿದ್ದ ನಗರದ ಎಲ್ಲ ಮಸೀದಿಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಕರೊನಾ ವೈರಸ್ ಹರಡದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅನಿವಾರ್ಯತೆ ಇರುವುದರಿಂದ ಪ್ರಾರ್ಥನಾ ಅವಧಿಯನ್ನು ಕಡಿತಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಸೀದಿಗಳ ಮುತುವಲ್ಲಿಗಳು, ಕಾರ್ಯದರ್ಶಿಗಳು, ವಕ್ಫ್ ಬೋರ್ಡ್ ನಿರ್ದೇಶನದಂತೆ 15 ನಿಮಿಷಕ್ಕೆ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಹಸ್ತಲಾಘವ, ಆಲಿಂಗನಕ್ಕೆ ಬ್ರೇಕ್: ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವರು ಸ್ವಚ್ಛತೆಗೆ ಒತ್ತುಕೊಡಬೇಕು. ಮಸೀದಿಗಳಲ್ಲಿ ಕೈಕಾಲು ತೊಳೆಯುವ ವ್ಯವಸ್ಥೆ ಇರಲಿದೆ. ಹಾಗಾಗಿ, ಜತೆಗೆ ಸ್ಯಾನಿಟೈಸರ್, ಸೋಪುಗಳನ್ನು ನೀಡುವ ಮೂಲಕ ಇನ್ನಷ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಮಾಜು ಸಲ್ಲಿಸಿದ ಬಳಿಕ ಪರಸ್ಪರ ಆಲಿಂಗನ, ಹಸ್ತಲಾಘವ ಮಾಡುವುದಕ್ಕೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು ಎಂದು ಭೂಬಾಲನ್ ಸಲಹೆಯಿತ್ತರು. ಸಭೆಯಲ್ಲಿ ಹಾಜರಿದ್ದ ಮಸೀದಿಗಳ ಮುತುವಲ್ಲಿಗಳು ಹಾಗೂ ಕಾರ್ಯದರ್ಶಿಗಳು ಪಾಲಿಕೆ ಕೈಗೊಂಡಿರುವ ಹಾಗೂ ಜನರ ಆರೋಗ್ಯದ ಬಗೆಗಿನ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಸೀದಿಗಳ ನೈರ್ಮಲ್ಯ ಕಾಪಾಡಿಕೊಳ್ಳುವುದಲ್ಲದೆ ಜನರಲ್ಲಿಯೂ ಸ್ವಚ್ಛತೆಗೆ ಒತ್ತುಕೊಡುವಂತೆ ತಿಳಿಸಲಾಗುವುದು ಎಂದರು. ಮಸೀದಿ ಸುತ್ತಮುತ್ತ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ಕ್ರಮವಹಿಸುವಂತೆ ಮನವಿ ಮಾಡಿದರು.

    ಜಾಮಿಯಾ ಮಸೀದಿ ಕಾರ್ಯದರ್ಶಿ ಅಯಾಜ್ ಅಹ್ಮದ್, ಟಿಪ್ಪು ನಗರ ಮಸೀದಿ ಕಾರ್ಯದರ್ಶಿ ಶಬೀರ್ ಅಹ್ಮದ್, ಕ್ಯಾತಸಂದ್ರ ಮಸೀದಿ ಅಧ್ಯಕ್ಷ ನಯಾಜ್, ಮೆಳೆಕೋಟೆ ಮಸೀದಿ ಕಾರ್ಯದರ್ಶಿ ಬಶೀರ್, ಸದಾಶಿವನಗರ ಮಸೀದಿ ಅಧ್ಯಕ್ಷ ಹಾಜಿನೂರ್, ಮೆಕ್ಕಾ ಮಸೀದಿ ಕಾರ್ಯದರ್ಶಿ ನೂರುಲ್ಲಾ ಸೇರಿ ವಿವಿಧ ಮಸೀದಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

    ನಗರದಲ್ಲಿ 102 ಮಸೀದಿ: ನಗರದಲ್ಲಿ 102 ಮಸೀದಿಗಳಿದ್ದು, ಪ್ರತಿನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಶುಕ್ರವಾರದ ವೇಳೆ ಪ್ರಾರ್ಥನೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರಲಿದ್ದಾರೆ. ಒಂದೂವರೆ ಗಂಟೆ ಪ್ರಾರ್ಥನೆ, ಪ್ರವಚನ ಇರಲಿದೆ. ಒಬ್ಬರಿಂದ ಒಬ್ಬರಿಗೆ ಕರೊನಾ ವೈರಸ್ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಒತ್ತುಕೊಡಬೇಕಿದ್ದು ಈ ಅವಧಿಯನ್ನು 15 ನಿಮಿಷಕ್ಕೆ ಕಡಿತಗೊಳಿಸಲು ನಿರ್ಧರಿಸಲಾಗಿದೆ.

    ನಿಯಮ ಪಾಲಿಸದಿದ್ದರೆ ಕ್ರಮ: ಪಿಜಿ, ವಸತಿ, ಹಾಸ್ಟೆಲ್‌ಗಳ ನೈರ್ಮಲ್ಯ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರು ಹಾಗೂ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ. ಉಸ್ತುವಾರಿ ನೋಡಿಕೊಳ್ಳುವ ವಾರ್ಡನ್‌ಗಳಿಗೆ ಅವುಗಳ ಸ್ವಚ್ಛತೆಯನ್ನು ಕಾಪಾಡುವ ಮಹತ್ವದ ಬಗ್ಗೆ ತಿಳಿಸಬೇಕು. ಅಲ್ಲದೆ, ವಾಸದ ಸ್ಥಳಗಳಲ್ಲಿ 2ಕ್ಕಿಂತ ಹೆಚ್ಚು ವಾಸಿಗಳಿಗೆ ಅವಕಾಶ ನೀಡುವಂತಿಲ್ಲ. ಈ ನಿರ್ದೇಶನಗಳನ್ನು ಪಾಲಿಸದ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಎಚ್ಚರಿಸಿದ್ದಾರೆ. ಜಿಲ್ಲೆಗೆ ವಿವಿಧ ದೇಶಗಳಿಂದ ಬಂದಿರುವ 224 ಜನರನ್ನು ತೀವ್ರ ನಿಗಾವಣೆಯಲ್ಲಿ ಇರಿಸಿ ಸೋಂಕು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಗುರುವಾರ ಕರೊನಾ ಸೋಂಕು ತಡೆಯುವ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಅವಧಿಯಲ್ಲಿ 14 ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದರು. ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಜಿಲ್ಲಾ ಹಾಗೂ ತಾಲೂಕು ಟಾಸ್ಕ್ ಪೋರ್ಸ್ ಸಮಿತಿಯು ತೀವ್ರ ನಿಗಾವಹಿಸಿ ಕಾರ್ಯ ಪ್ರವೃತ್ತವಾಗಿದೆ ಎಂದರು. ಜಿಪಂ ಸಿಇಒ ಶುಭಾ ಕಲ್ಯಾಣ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ನೊಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಮ್, ಕ್ರೀಡಾಭ್ಯಾಸ ತಾಣಗಳು, ಇತರ ಸೌಲಭ್ಯ ಕಲ್ಪಿಸುವ ತಾಣ ಮುಚ್ಚಲಾಗಿದೆ. ಎಲ್ಲ ಉದ್ಯಾನವನಗಳಲ್ಲಿ ತೆರೆದ ಜಿಮ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ಯಾವುದೇ ಸಾರ್ವಜನಿಕರು ಬಳಸಬಾರದು. ದೈಹಿಕ ಸದೃಢತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಮನೆಗಳಲ್ಲಿಯೇ ವ್ಯಾಯಾಮ, ಯೋಗಾಭ್ಯಾಸ ಮಾಡಬೇಕು.
    ಟಿ.ಭೂಬಾಲನ್ ಆಯುಕ್ತ

    ನಮ್ಮಲ್ಲಿ ಮಸೀದಿಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕಿದೆ. ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ನಮ್ಮಲ್ಲಿಲ್ಲ. ಮಸೀದಿ ಒಳಭಾಗದಲ್ಲಿ ನೈರ್ಮಲ್ಯ ಇರುತ್ತದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಇನ್ನಷ್ಟು ಶುಚಿತ್ವಕ್ಕೆ ಒತ್ತುಕೊಡಲಾಗುವುದು.
    ಫರಿದಾಬೇಗಂ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts