More

    ಸೋಂಕು ಹರಡುವ ಪ್ರಮಾಣ ಇಳಿಮುಖ

    ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವ ಪ್ರಮಾಣ ಇಳಿಕೆಯಾಗಿದೆ. ಆದರೂ ಜೂನ್ 14ರವರೆಗೆ ಈಗಿದ್ದ ಲಾಕ್​ಡೌನ್ ನಿಯಮಾವಳಿಗಳನ್ನೇ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮೇ 25 ರಂದು ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 26.58 ರಷ್ಟಿತ್ತು. ಜೂನ್ 4 ರಂದು ಅದು ಶೇ. 15.79 ಕ್ಕೆ ಇಳಿದಿದೆ. 667 ರ್ಯಾಪಿಡ್, 1587 ಆರ್​ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, 356 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ರ್ಯಾಪಿಡ್ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ. ಆದರೂ ಸೋಂಕಿತರ ಸಂಖ್ಯೆ ಕಡಿಮೆ ಕಂಡುಬರುತ್ತಿರುವುದು ಸಮಾಧಾನದ ಸಂಗತಿ ಎಂದರು.

    ಮೈಕ್ರೋ ಕಂಟೇನ್ಮೆಂಟ್ ಜೋನ್ ಮಾಡಿ, ಜನರ ಓಡಾಟ, ವ್ಯಾಪಾರ, ವಹಿವಾಟು ನಿಯಂತ್ರಿಸುವುದರಿಂದ ಸಾಕಷ್ಟು ಅನುಕೂಲ ವಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಇದುವರೆಗೆ ಇರುವಂತೆ ಕಂಟೇನ್ಮೆಂಟ್ ಜೋನ್​ನಲ್ಲಿ ಯಾವುದೇ ಅಂಗಡಿ ತೆರೆಯಲು ಅವಕಾಶವಿಲ್ಲ. ಉಳಿದ ಪ್ರದೇಶದಲ್ಲಿ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದೆ ಎಂದು ವಿವರಿಸಿದರು.

    ಬ್ಯಾಂಕ್, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಹೀಗೆ ಆದ್ಯತಾ ವಲಯದವರನ್ನು ಗುರುತಿಸಿ ಜಿಲ್ಲೆಯ 18 ರಿಂದ 44 ವರ್ಷದ 28,376 ಜನರಿಗೆ ಇದುವರೆಗೆ ಲಸಿಕೆ ನೀಡಲಾಗಿದೆ. ಮುಂದೆ 45 ವರ್ಷ ಕೆಳಗಿನ ಗಂಭೀರ ಕಾಯಿಲೆ ಇರುವವರನ್ನು ಗುರುತಿಸಿ ಅವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದರು.

    ಮಳೆಗಾಲಕ್ಕೆ ತಯಾರಾಗಿರಿ: ಜಿಲ್ಲೆಯಲ್ಲಿ ಮಳೆಗಾಲದಲ್ಲಿ 166 ಗ್ರಾಮಗಳಲ್ಲಿ ನೆರೆಯಿಂದ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಅಂಥ ಸಂದರ್ಭ ಬಂದಲ್ಲಿ 234 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಎಲ್ಲಿ ಕೋವಿಡ್ ನಿಯಮ ಪಾಲಿಸಿ 16,826 ಜನರಿಗೆ ಆಶ್ರಯ ನೀಡಬಹುದು ಎಂದು ಅಂದಾಜಿಸಲಾಗಿದೆ. ಜೂನ್-10 ಹಾಗೂ 11 ರಂದು ವಿಶೇಷ ಕಲಿತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ರೀತಿಯ ತಯಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಎಡಿಸಿ ಕೃಷ್ಣಮೂರ್ತಿ ಎಚ್.ಕೆ. ಸುದ್ದಿಗೋಷ್ಠಿಯಲ್ಲಿದ್ದರು.

    ಪ್ರತಿ 10 ದಿನಕ್ಕೊಮ್ಮೆ ಆರೋಗ್ಯ ಸರ್ವೆ

    ಜಿಪಂ ಸಿಇಒ ಪ್ರಿಯಾಂಗಾ ಎಂ. ಮಾತನಾಡಿ, ಸದ್ಯ ಜಿಲ್ಲೆಯ 6 ಗ್ರಾಪಂಗಳಲ್ಲಿ 10 ದಿನದಿಂದ ಯಾವುದೇ ಕೋವಿಡ್ ಪ್ರಕರಣಗಳಿಲ್ಲ. 78 ಗ್ರಾಪಂಗಳಲ್ಲಿ ಕೇವಲ ಒಂದೆರಡು ಪ್ರಕರಣಗಳಿದ್ದು, ಇದೇ ವಾರದಲ್ಲಿ ಕೋವಿಡ್ ಮುಕ್ತವಾಗುವ ಸಾಧ್ಯತೆ ಇದೆ. 450 ಗ್ರಾಮಗಳಲ್ಲಿ ಇದುವರೆಗೂ ಕೋವಿಡ್ ಕಾಣಿಸಿಕೊಂಡಿಲ್ಲ ಎಂದು ವಿವರಿಸಿದರು. ಕಳೆದ ಮೇ 31 ರಿಂದ ಜಿಲ್ಲೆಯಲ್ಲಿ ನಡೆದ ಜ್ವರ ಸಮೀಕ್ಷೆಯಲ್ಲಿ 3 ಲಕ್ಷ 39 ಸಾವಿರ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದು, ಅದರಲ್ಲಿ 1913 ರೋಗ ಲಕ್ಷಣ ಇರುವವರನ್ನು ಗುರುತಿಸಲಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆ ಇರುವವರನ್ನು ವಿಶೇಷವಾಗಿ ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳಿಸಲಾಗಿದೆ. ಇನ್ನು ಪ್ರತಿ 10 ದಿನಕ್ಕೊಮ್ಮೆ ಇದೇ ಮಾದರಿಯ ಸರ್ವೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಮಿಡ್ ಲೆವಲ್ ಹೆಲ್ತ್ ಪ್ರೊವೈಡರ್ (ಎಂಎಲ್​ಎಚ್​ಪಿ) 265 ಜನರಿದ್ದು, ಅವರಿಗೆ ತರಬೇತಿ ನೀಡಿ ಪ್ರತಿ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು. ಇಷ್ಟೇ ಅಲ್ಲದೆ ಎಲ್ಲ ತಾಲೂಕುಗಳಲ್ಲಿ ತಲಾ 1 ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

    2.93 ಲಕ್ಷ ದಂಡ ವಸೂಲಿ:ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಕಳೆದ 6 ದಿನದಲ್ಲಿ ಮಾಸ್ಕ್ ಧರಿಸದ್ದಕ್ಕೆ 234 ಜನರಿಂದ 25700 ರೂ. ದಂಡ ಆಕರಿಸಲಾಗಿದೆ. ಒಂದು ಪ್ರಕರಣ ದಾಖಲಿಸಲಾಗಿದೆ. ಲಾಕ್​ಡೌನ್ ನಿಯಮ ಮೀರಿದ 535 ವಾಹನಗಳನ್ನು ವಶಕ್ಕೆ ಪಡೆದುಕೊಂಡು 2,67,500 ರೂ. ದಂಡ ಆಕರಿಸಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಡಿಸಿ ಹೇಳಿದ್ದು

    • ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕೋವಿಡ್ ಟಾಸ್ಕ್ ಫೋರ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರತಿನಿಧಿಗಳಿಗೆ ಜೂ.7 ರಂದು ಲಸಿಕೆ ನೀಡಲಾಗುವುದು.
    • ಆದ್ಯತಾ ವಲಯಗಳಿಗೆ ಎಲ್ಲ ಪಿಎಚ್​ಸಿ ಹಂತಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
    • ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದ 1827, ಕೋವಿಶೀಲ್ಡ್ ಪಡೆದ 1930 ಜನರಿಗೆ ಎರಡನೇ ಡೋಸ್ ಪಡೆಯುವ ಗಡುವು ಮುಗಿದಿದ್ದು, ಶೀಘ್ರ ಪಡೆಯುವಂತೆ ಜಿಪಂ ಎಲ್ಲರಿಗೂ ಕರೆ ಮಾಡಿ ತಿಳಿಸಲಾಗುತ್ತಿದೆ.
    • ಜೂನ್ 6 ಮತ್ತು 7 ರಂದು ಅಂಗವಿಕಲರಿಗೆ ವಿಶೇಷ ಲಸಿಕಾ ಅಭಿಯಾನ ನಡೆಯಲಿದೆ.
    • ಕುಮಟಾ, ಹೊನ್ನಾವರದ ಕೆಲ ಗ್ರಾಮಗಳಲ್ಲಿ ಡೆಂಘ ಲಕ್ಷಣ ಕಂಡುಬಂದಿದ್ದು, ವೈದ್ಯಾಧಿಕಾರಿಗಳು ಪರೀಕ್ಷೆ ಮಾಡುತ್ತಿದ್ದು, ಇನ್ನೂ ಖಚಿತವಾಗಿಲ್ಲ.
    • ಎಂಡೋ ಸಲ್ಪಾನ್ ಪೀಡಿತರಿಗೆ ಸ್ಕೋಡ್​ವೇಸ್ ಆಂಬುಲೆನ್ಸ್ ಮೂಲಕ ನೀಡುತ್ತಿದ್ದ ವೈದ್ಯಕೀಯ ಸೇವೆ ಮಾರ್ಚ್​ನಿಂದ ಬಂದಾಗಿದ್ದರಿಂದ ರೋಗಿಗಳಿಗೆ ಸಮಸ್ಯೆಯಾಗಿದೆ. ನಮ್ಮ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಔಷಧ ತಲುಪಿಸಲು ವ್ಯವಸ್ಥೆ ಮಾಡಲಾಗುವುದು.

    ಜನರ ಸಹಕಾರ ಇದ್ದರೆ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಮಾಸ್ಕ್, ಪರಸ್ಪರ ಅಂತರ, ವ್ಯಾಕ್ಸಿನ್ ಪಡೆಯುವುದು ಮುಂತಾದ ವಿಷಯದಲ್ಲಿ ಜನ ಅಧಿಕಾರಿಗಳೊಟ್ಟಿಗೆ ಸಹಕಾರ ನೀಡಬೇಕು.

    ಕೆ.ಪಿ. ಮೋಹನರಾಜ

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts