ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಸಕ್ರಿಯವಾಗಿ ಮತದಾನ ಮಾಡಬೇಕು. ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನೆಹರು ಮೈದಾನದಲ್ಲಿ ಮತದಾನ ಜಾಗೃತಿಕ್ರೀಡಾಂಗಣದಲ್ಲಿ ಜಿಲ್ಲಾ ಜಾಗೃತ ಮತದಾರರ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ ಪ್ರದೇಶದ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರುತ್ತಾರೆ ಎಂಬ ಅಪವಾದವಿದೆ. ಇದು ದೂರಾಗಬೇಕು. ನೈತಿಕ ಮತದಾನ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿ, ಜಿಲ್ಲೆಯಲ್ಲಿ ಶೇ. 100 ಮತದಾನ ಮಾಡಲು ಎಲ್ಲರೂ ಪ್ರತಿಜ್ಞೆ ಮಾಡಬೇಕು. ಯಾರೂ ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಜಾಗೃತ ಮತದಾರರ ವೇದಿಕೆಯ ಕೆ.ಸಿ.ಬಸವರಾಜ್ ಇದ್ದರು.