More

    ವಿದ್ಯುತ್ ದರ ಕಡಿತಗೊಳಿಸಿ, ಜಿಎಸ್​ಟಿ ಗೊಂದಲ ಪರಿಹರಿಸಿ; ಸಿಎಂಗೆ ಉದ್ಯಮಿಗಳ ಅಹವಾಲು

    ಬೆಂಗಳೂರು: 2020-21ನೇ ಆರ್ಥಿಕ ಸಾಲಿನ ಆಯವ್ಯಯ ಮಂಡನೆಗೆ ತಯಾರಿ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೈಗಾರಿಕೆ, ವಾಣಿಜ್ಯ ಕ್ಷೇತ್ರದ ಸಂಘಟನೆ ಗಳಿಂದ ದಂಡಿ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಗೊಂದಲ ಪರಿಹರಿಸುವ ಒತ್ತಾಯ, ಹೊಸ ಬೇಡಿಕೆಗಳೂ ಸಲ್ಲಿಕೆಯಾಗಿವೆ.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಕರ್ನಾಟಕ ಹೊಸೈರಿ ಮತ್ತು ಗಾರ್ವೆಂಟ್ ಅಸೋಸಿಯೇಷನ್ ಸೇರಿ ವಿವಿಧ ಸಂಘಟನೆಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿ ಕೋರಿಕೆ ಮಂಡಿಸಿದವು. ಪ್ರಮುಖವಾಗಿ ವಿದ್ಯುತ್ ದರ ಕಡಿತ ಮತ್ತು ಜಿಎಸ್​ಟಿ ಗೊಂದಲ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ. ಕೈಗಾರಿಕೆಗೆ ಅತಿ ಹೆಚ್ಚು ವಿದ್ಯುತ್ ದರ ವಿಧಿಸುತ್ತಿರುವುದು ಸಮಂಜಸವಲ್ಲ, ಎಲ್​ಟಿ ಮಿತಿಯನ್ನು 65 ಎಚ್​ಪಿಯಿಂದ 110 ಎಚ್​ಪಿವರೆಗೆ ಏರಿಸಲು ಆಗಿಂದಾಗ್ಗೆ ಬೇಡಿಕೆ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ನೇತೃತ್ವದ ನಿಯೋಗ ಮನವಿಯಲ್ಲಿ ವಿವರಿಸಿದೆ.

    ಕೆಇಆರ್​ಸಿ ವಿದ್ಯುತ್ ದರವನ್ನು ವಾರ್ಷಿಕವಾಗಿ ಮೇಲ್ಮುಖದಲ್ಲಿ ಪರಿಷ್ಕರಿಸುತ್ತಿದ್ದು, ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಸರಬರಾಜು ಮತ್ತು ವಿತರಣಾ ಕಂಪನಿಗಳು ಸೌರ ಮತ್ತು ಇತರ ಮೂಲಗಳಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪಡೆಯಲು ಸಾಧ್ಯವಿದ್ದರೂ ವಿದ್ಯುತ್ ಶುಲ್ಕಗಳನ್ನು ಅಸಹಜವಾಗಿ ಪರಿಷ್ಕರಿಸುತ್ತಿರುವುದು ಒಗಟಾಗಿದೆ ಎಂದು ಕಾಸಿಯಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಜಿಎಸ್​ಟಿ ಅಧಿಕಾರಿಗಳು ಕಾನೂನು ಹೊರತಾಗಿ ನೋಟಿಸ್ ನೀಡುತ್ತಿದ್ದಾರೆ. ಯಾರು ನ್ಯಾಯಬದ್ಧವಾಗಿ ತೆರಿಗೆ ಕಟ್ಟುತ್ತಾರೋ ಅವರೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ಅವರಿಗೆ ಸೂಕ್ತ ತರಬೇತಿ ಅಗತ್ಯವಿದೆ ಎಂದು ಹೊಸೈರಿ ಗಾರ್ವೆಂಟ್ಸ್ ಅಸೋಸಿಯೇಷನ್ ಹೇಳಿಕೊಂಡಿದೆ.

    ಬೇಡಿಕೆಗಳು
    • ಕೃಷಿ ಮಾರುಕಟ್ಟೆಗಳಲ್ಲಿ ವಹಿವಾಟಿನ ಮೇಲೆ ವಿಧಿಸುವ ಸೆಸ್ ಶೇ.1.5 ಅನ್ನು ಶೇ.0.5ಕ್ಕೆ ಇಳಿಸಬೇಕು.
    • ಕೃಷಿ ಮಾರುಕಟ್ದಟೆಯಲ್ಲಿ ಹಾಲಿ ಚಾಲ್ತಿಯಲ್ಲಿರುವ ಸಾಗಾಣಿಕೆ ಪರ್ವಿುಟ್ ನಮೂನೆ 35ಬಿ ರದ್ದು ಪಡಿಸಬೇಕು.
    • ಎಂಎಂಇ ಘಟಕಗಳಲ್ಲಿ 30 ಸಾವಿರ ರೂ.ಗಿಂತ ಕಡಿಮೆ ವೇತನ ಪಡೆಯುವ ಕಾರ್ವಿುಕರಿಗೆ ವೃತ್ತಿ ತೆರಿಗೆಯಿಂದ ವಿನಾಯಿತಿ ನೀಡಬೇಕು.
    • ಹೊಸ ಕೈಗಾರಿಕೆ ಪ್ರಾರಂಭವಾದ ಮೊದಲ ಮೂರು ವರ್ಷ ಆಸ್ತಿ ತೆರಿಗೆ ವಿನಾಯಿತಿ ನೀಡುವುದು.
    • ತುಮಕೂರು ರಸ್ತೆಯಲ್ಲಿ ಕೈಗಾರಿಕಾ ಮೂಲ ಸೌಕರ್ಯಾಭಿವೃದ್ಧಿ ಮತ್ತು ರಫ್ತು ನೆರವು ಕೇಂದ್ರ ಆರಂಭಿಸಿ.
    • ಭೂಮಿ ಪರಿವರ್ತಿಸುವಲ್ಲಿ ಸೂಕ್ಷ್ಮ, ಅತಿ ಸಣ್ಣ ಕೈಗಾರಿಕೆಗಳು ಅಡೆ ತಡೆ ಎದುರಿಸುತ್ತಿವೆ.
    • ಅಗ್ನಿಶಾಮಕ ಇಲಾಖೆ ತಪಾಸಣೆ ಶುಲ್ಕವನ್ನು  10 ಸಾವಿರ ರೂ.ದಿಂದ  50 ಸಾವಿರ ರೂ.ಕ್ಕೆ ಏರಿಸಲಾಗಿದ್ದು, ಸಣ್ಣಪುಟ್ಟ ಘಟಕಗಳಿಗೆ ಹೊರೆಯಾಗುತ್ತಿದೆ.
    • ಟ್ರೇಡ್ ಲೈಸೆನ್ಸ್ ರದ್ದುಪಡಿಸಬೇಕು, ಬೆಂಗಳೂರು ಚಿಕ್ಕಪೇಟೆ ಅಭಿವೃದ್ಧಿಗೆ  500 ಕೋಟಿ ರೂ. ನೀಡಬೇಕು.
    ಹೊಸ ಆಶಯ

    ಬೆಂಗಳೂರಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಸಮ-ಬೆಸ ಪ್ರಯೋಗ ಇಲ್ಲೂ ನಡೆಯಲಿ. =ಮಹಾರಾಷ್ಟ್ರದ ಸಿಡ್ಕೋ ಮಾದರಿಯಲ್ಲಿ ನಗರ ಮತ್ತು ಕೈಗಾರಿಕಾ ಬಡಾವಣೆ ಅಭಿವೃದ್ಧಿಪಡಿಸಬೇಕು. =ನಿರುದ್ಯೋಗ ನಿವಾರಣೆಗೆ ವಿಯೆಟ್ನಾಂ ರೀತಿ ಒನ್ ವಿಲೇಜ್ ಒನ್ ಪ್ರಾಡೆಕ್ಟ್, ಒನ್ ತಾಲೂಕ್ ಒನ್ ಪ್ರಾಡೆಕ್ಟ್, ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡೆಕ್ಟ್ ಶೀರ್ಷಿಕೆಯಿಂದ ಪ್ರಾರಂಭಿಸಬೇಕು.=ನಗರ ಪ್ರದೇಶಗಳಲ್ಲಿ ಬಹುಮಹಡಿ ಕೈಗಾರಿಕಾ ವಸಹಾತುಗಳು ಹಾಗೂ ತಾಲೂಕು ಮಟ್ಟದಲ್ಲಿ ಅತಿ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಬೇಕು.

    ಜಿಎಸ್ಟಿ ಅನುಷ್ಠಾನದಲ್ಲಿ ಒಂದಷ್ಟು ಗೊಂದಲ, ಸಮಸ್ಯೆಗಳಿವೆ. ಸರ್ಕಾರ ಆದ್ಯತೆ ಮೇಲೆ ಪರಿಹರಿಸಬೇಕಿದೆ.

    | ಸಜ್ಜನ್ ರಾಜ್ ಮೆಹ್ತಾ, ಹೊಸೈರಿ ಮತ್ತು ಗಾರ್ವೆಂಟ್ಸ್ ಅಸೋಸಿಯೇಷನ್

    ದೂರಿನ ಪಟ್ಟಿ
    1. ಇತರ ರಾಜ್ಯಗಳಿಗೆ ಹೋಲಿಸಿದರೆ ಕನಿಷ್ಠ ವೇತನ ಹೆಚ್ಚಾಗಿದೆ.
    2. ಸಂಚಾರಿ ಸಿಗ್ನಲಿಂಗ್ ಸಿಸ್ಟಮ್​ಗಳ  ಆಧುನೀಕರಣದಲ್ಲಿ ಹಿಂದುಳಿದಿದ್ದೇವೆ.
    3. ಕೈಗಾರಿಕೆ ಪ್ರದೇಶಗಳನ್ನು ಟೌನ್​ಶಿಪ್​ಗಳಾಗಿ ಘೋಷಿಸುವ ಪ್ರಕ್ರಿಯೆ 27 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.
    4. ಕಳಪೆ ಸಂಪರ್ಕ ರಸ್ತೆ ಕಾರಣದಿಂದಾಗಿ ಬಂದರಿನ ಬಹುತೇಕ ವ್ಯವಹಾರ ಚೆನ್ನೈನತ್ತ ಹೋಗುತ್ತಿದೆ.
    5. ಕೈಗಾರಿಕೆ ಪ್ರದೇಶಗಳಲ್ಲಿ ಮೂಲಸೌಕರ್ಯ ಕೊರತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts