More

    ಜನರಿಗೆ ಜೀವ ರಕ್ಷಣೆಯ ಅರಿವು ಅಗತ್ಯ ; ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಶ್ರೀನಿವಾಸಮೂರ್ತಿ ಅಭಿಪ್ರಾಯ

    ಚಿಕ್ಕಬಳ್ಳಾಪುರ: ಸಂಕಷ್ಟದ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆಯ ಮೂಲಕ ಜೀವ ರಕ್ಷಣೆಯ ಅರಿವನ್ನು ಹೊಂದಿರಬೇಕು ಎಂದು ಬೆಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಪಿ.ಶ್ರೀನಿವಾಸಮೂರ್ತಿ ಸಲಹೆ ನೀಡಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ರಾಜ್ಯ ಹಾಗೂ ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜಿಲ್ಲಾ ಅಗ್ನಿಶಾಮಕ ದಳದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ, ಪ್ರಥಮ ಚಿಕಿತ್ಸಾ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರಪಂಚದ ಶಾಂತಿ ಮತ್ತು ಭದ್ರತೆ ಕಾಪಾಡುವ ದೃಷ್ಟಿಯಿಂದ ಸ್ಥಾಪನೆಯಾದ ಸ್ವಯಂ ಸೇವಾ ಸಂಸ್ಥೆಯೇ ಭಾರತೀಯ ರೆಡ್ ಕ್ರಾಸ್. ಇದು ವಿಶ್ವವ್ಯಾಪಿಯಾಗಿ ಸೇವಾ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು. ಇತ್ತೀಚೆಗೆ ಅಪಘಾತಗಳು, ಬೆಂಕಿ ಅವಘಡಗಳು, ಮೂರ್ಛೆ ರೋಗ ಹಾಗೂ ಹೃದ್ರೋಗ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಹೆಚ್ಚಿನ ಜನರಲ್ಲಿ ಪ್ರಥಮ ಚಿಕಿತ್ಸೆ ಅರಿವು ಅತ್ಯಗತ್ಯವಾಗಿದೆ ಎಂದರು.

    ಕೊರತೆ ನೀಗಿಸಲು ರಕ್ತದಾನ ಮಾಡಿ: 2008ರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕವು ಸುಮಾರು 75 ಸಾವಿರ ಯುನಿಟ್ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಒದಗಿಸಿದೆ ಎಂದು ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಕೋಡಿರಂಗಪ್ಪ ತಿಳಿಸಿದರು. ಇತ್ತೀಚೆಗೆ ಕರೊನಾ ಸಂಕಷ್ಟದ ಸಂದರ್ಭದಲ್ಲಿ ರಕ್ತದ ಕೊರತೆ ಎದುರಾಗಿದೆ. ಇದಕ್ಕೆ ಶಿಬಿರಗಳಲ್ಲಿ ರಕ್ತವನ್ನು ನೀಡಲು ದಾನಿಗಳು ಮುಂದಾಗಬೇಕು ಎಂದರು. ಮಹಿಳೆಯರಿಗೆ ಕ್ಯಾನ್ಸರ್ ಎಂಬುದು ಶಾಪವಾಗಿದೆ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಎಂ.ಜಯರಾಮ್, ಉಪನ್ಯಾಸಕರಾದ ರವಿಕುಮಾರ್, ಎನ್.ಲೋಕನಾಥ್, ಷಫೀ ಅಹಮ್ಮದ್, ಸದಾಶಿವ ಮತ್ತಿತರರು ಇದ್ದರು.

    ವಿದ್ಯಾರ್ಥಿಗಳಿಗೆ ತರಬೇತಿ: ಬೆಂಗಳೂರು ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸಾ ತರಬೇತುದಾರ ಡಾ.ಕೆ.ಪಿ ನಾಗಾರ್ಜುನ ಹಾಗೂ ಮುದ್ದೇನಹಳ್ಳಿ ಸತ್ಯಸಾಯಿ ಸರಳ ಮೇಮೊರಿಯಲ್ ಸಮನ್ವಯ ವೈದ್ಯಾಧಿಕಾರಿ ಎಂ.ಸಿ.ಫಣೀಂದ್ರ ಅವರು, ಪ್ರಥಮ ಚಿಕಿತ್ಸೆ ಮಹತ್ವ, ಚಿಕಿತ್ಸಾ ವಿಧಾನಗಳು, ನಿರ್ವಹಿಸಬೇಕಾದ ಜವಾಬ್ದಾರಿ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರಾಣಾಪಾಯ ಹಾಗೂ ಅಸ್ವಸ್ಥ ಸ್ಥಿತಿಯಲ್ಲಿರುವ ರೋಗಿಗಳ ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಹೃದ್ರೋಗ, ಪ್ರಜ್ಞಾ ಹೀನ, ಅಪಘಾತ ಸೇರಿ ತುರ್ತು ಸಂದರ್ಭದಲ್ಲಿ ವೈದ್ಯರ ಮಾದರಿಯಲ್ಲಿ ಜನರು ಸಹ ರಕ್ಷಣಾತ್ಮಕ ಕೆಲಸಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts